ಅಂತಾರಾಷ್ಟ್ರೀಯ ಕ್ರಿಕೆಟನ್ನು ರಾಷ್ಟ್ರದಲ್ಲಿ ಪುನರಾರಂಭಿಸುವ ನಿಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯ ಪಾಕಿಸ್ತಾನ್ ಪ್ರೀಮಿಯರ್ ಲೀಗ್‌ಗೆ ಚಾಲನೆ ನೀಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮಾಜಿ ಕಪ್ತಾನ ರಮೀಜ್ ರಾಜಾ ಸಲಹೆ ನೀಡಿದ್ದಾರೆ.
ಜನಪ್ರಿಯ ವೀಕ್ಷಕ ವಿವರಣೆಗಾರ ಹಾಗೂ ತಜ್ಞರಾಗಿರುವ ರಮೀಜ್ ಮಾತನಾಡುತ್ತಾ, ಪಾಕಿಸ್ತಾನ್ ಪ್ರೀಮಿಯರ್ ಲೀಗ್ (ಪಿಪಿಎಲ್) ಪರಿಚಯಿಸುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟನ್ನು ಪಾಕಿಸ್ತಾನದಲ್ಲಿ ಪುನರಾರಂಭಿಸುವ ಪ್ರಕ್ರಿಯೆ ಚುರುಕುಗೊಳ್ಳುವುದಷ್ಟೇ ಅಲ್ಲ; ದೇಶದ ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿಯೂ ಪ್ರಗತಿ ಕಾಣಲಿದೆ ಎಂದು ತಿಳಿಸಿದ್ದಾರೆ.
ಖಂಡಿತಾ ನಾವು ಇದನ್ನು ಐಪಿಎಲ್‌ನಷ್ಟು ಗ್ಲಾಮರ್ ಮತ್ತು ಭವ್ಯತೆಗೆ ಒಯ್ಯಲು ಸಾಧ್ಯವಾಗದು. ಆದರೆ ನಾವು ಅದರ ಮಾದರಿಯಲ್ಲಿ ಪಿಪಿಎಲ್‌ನ್ನು ಸಣ್ಣ ಪ್ರಮಾಣದಲ್ಲಿ ಜಾರಿಗೆ ತರಬಹುದು. ಆ ಮೂಲಕ ಬಾಂಗ್ಲಾದೇಶ, ಶ್ರೀಲಂಕಾ, ಜಿಂಬಾಬ್ವೆ ಮತ್ತು ಕೀನ್ಯಾಗಳಿಂದ ಆಟಗಾರರನ್ನು ದೇಶಕ್ಕೆ ಕರೆಸಲು ಸಾಧ್ಯವಾದರೆ, ಅದು ಪಾಕಿಸ್ತಾನದ ಕ್ರಿಕೆಟಿಗೆ ಹೆಚ್ಚಿನ ಸಾಮರ್ಥ್ಯವನ್ನು ನೀಡಿದಂತಾಗುತ್ತದೆ ಎಂದು ಮಾಜಿ ಕಪ್ತಾನ ಹೇಳಿದರು.
ಅದೇ ಹೊತ್ತಿಗೆ ರಾಷ್ಟ್ರೀಯ ತಂಡದ ಕಳಪೆ ಪ್ರದರ್ಶನವನ್ನೂ ಅವರು ವಿಶ್ಲೇಷಿಸಿದ್ದು, ದೇಶೀಯ ಮಟ್ಟದಲ್ಲಿ ಪ್ರಬಲ ವ್ಯವಸ್ಥೆಯ ಕೊರತೆಯಾಗಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.
ಭಾರತೀಯ ಕ್ರಿಕೆಟಿಗೆ ಐಪಿಎಲ್ ಖಂಡಿತಾ ಸಹಾಯಕವಾಗಿದೆ. ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಕೂಡ ಐಪಿಎಲ್ ಪಾತ್ರ ಮಹತ್ವದ್ದು. ಪಿಪಿಎಲ್ ನಮ್ಮತನವನ್ನು ಉಳಿಸಿಕೊಳ್ಳಬೇಕು ಮತ್ತು ಹೊಸ ಪ್ರತಿಭೆಗಳನ್ನು ಹೊರಗೆಡಹುವಂತಿರಬೇಕು. ಅಲ್ಲದೆ ಇದರಿಂದಾಗಿ ವಿಶ್ವ ಕ್ರಿಕೆಟ್ ಅಂತಾರಾಷ್ಟ್ರೀಯ ಕ್ರಿಕೆಟನ್ನು ಪಾಕಿಸ್ತಾನದಲ್ಲಿ ಆಡಬಹುದಾಗಿದೆ ಎಂದರು.
ಈಗಿನ ಕ್ರಿಕೆಟ್ ಮಂಡಳಿಯು ಪಿಪಿಎಲ್ ಕಲ್ಪನೆಯ ಕುರಿತು ಗಮನ ಹರಿಸದೇ ಇರುವುದು ಅಚ್ಚರಿ ತಂದಿದೆ. ಪಾಕಿಸ್ತಾನಕ್ಕೆ ಆಟಗಾರರು ಅಥವಾ ತಂಡಗಳು ಬರುತ್ತಿಲ್ಲ ಎಂಬುದನ್ನೇ ದೊಡ್ಡದು ಮಾಡಿಕೊಂಡು ಕೂತಿದ್ದಾರೆ ಎಂದು ರಮೀಜ್ ತನ್ನ ಅಸಹನೆ ವ್ಯಕ್ತಪಡಿಸಿದರು.
webdunia
Subscribe to:
Post Comments (Atom)
No comments:
Post a Comment