ಹೆಚ್ಚುವರಿ ಟಿಕೆಟ್ ಖರೀದಿಗೆ ನಕಾರ
ದಢೂತಿ ದೇಹದವರು ವಿಮಾನದಲ್ಲಿ ಪ್ರಯಾಣಿಸುವಾಗ ಎರಡು ಟಿಕೆಟ್ ಖರೀದಿಸಬೇಕು, ಇಲ್ಲದಿದ್ದರೆ ವಿಮಾನದಿಂದ ಕೆಳಗಿಳಿಯಬೇಕು! ಹೌದು ಇಂತಹದ್ದೊಂದು ಘಟನೆ ಸೌತ್‌ವೆಸ್ಟ್ ಏರ್‌ಲೈನ್ಸ್‌ನಲ್ಲಿ ಇತ್ತೀಚೆಗೆ ನಡೆದಿದೆ.
ಲಾಸ್‌ಏಂಜಲ್ಸ್ (ಐಎಎನ್‌ಎಸ್): ದಢೂತಿ ದೇಹದವರು ವಿಮಾನದಲ್ಲಿ ಪ್ರಯಾಣಿಸುವಾಗ ಎರಡು ಟಿಕೆಟ್ ಖರೀದಿಸಬೇಕು, ಇಲ್ಲದಿದ್ದರೆ ವಿಮಾನದಿಂದ ಕೆಳಗಿಳಿಯಬೇಕು! ಹೌದು ಇಂತಹದ್ದೊಂದು ಘಟನೆ ಸೌತ್‌ವೆಸ್ಟ್ ಏರ್‌ಲೈನ್ಸ್‌ನಲ್ಲಿ ಇತ್ತೀಚೆಗೆ ನಡೆದಿದೆ.
ಕೆವಿನ್ ಸ್ಮಿತ್ ಎಂಬ ದೈತ್ಯಾಕಾರದ ಆಸಾಮಿಯೊಬ್ಬರು ವಿಮಾನ ಹತ್ತಿದರು. ಅವರ ದೇಹಕ್ಕೆ ಒಂದು ಆಸನ ಸಾಲದೆ ಪಕ್ಕದ ಆಸನವನ್ನೂ ಆಕ್ರಮಿಸಿಕೊಂಡಾಗ ವಿಮಾನ ಸಿಬ್ಬಂದಿ ಎರಡು ಟಿಕೆಟ್‌ಗಳನ್ನು ಖರೀದಿಸುವಂತೆ ಅವರಿಗೆ ಸೂಚಿಸಿದರು. ಆದರೆ ಇದಕ್ಕೆ ಸ್ಮಿತ್ ಸುತಾರಾಂ ಒಪ್ಪದಿದ್ದಾಗ ಸಿಬ್ಬಂದಿ ವಿಧಿಯಿಲ್ಲದೆ ಅವರನ್ನು ಕೆಳಗಿಳಿಸಿಯೇಬಿಟ್ಟರು.
ಆದರೆ ಸ್ಮಿತ್ ಈ ಪ್ರಕರಣವನ್ನು ಅಷ್ಟು ಸುಲಭಕ್ಕೆ ಬಿಡಲಿಲ್ಲ. ‘ನನಗೆ ಗೊತ್ತು ನಾನು ದಪ್ಪಗಿದ್ದೇನೆ. ಆದರೆ ಯಾವುದೇ ಭದ್ರತೆ ಅಥವಾ ಸುರಕ್ಷಾ ನಿಯಮಗಳನ್ನು ಉಲ್ಲಂಘಿಸದೆ ಅದಾಗಲೇ ಸೀಟಿನಲ್ಲಿ ಕುಳಿತಿದ್ದ ನನ್ನನ್ನು ಕೆಳಗಿಳಿಸುವುದು ನ್ಯಾಯವೇ?’ ಎಂದು ಪ್ರಶ್ನಿಸಿದ ಅವರು ಪ್ರತಿಭಟನೆಗೆ ಮುಂದಾದರು. ಬಳಿಕ ನಿರ್ವಾಹವಿಲ್ಲದೆ ಸಂಸ್ಥೆ ಅವರನ್ನು ಬೇರೆ ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿತು.
ಸಂಸ್ಥೆಯ ಇಂತಹ ತಾರತಮ್ಯ ನೀತಿಯ ವಿರುದ್ಧ ಸ್ಮಿತ್ ಅವರೊಂದಿಗೆ ಕೈ ಜೋಡಿಸಿದ ರಾಷ್ಟ್ರೀಯ ಸ್ಥೂಲದೇಹಿಗಳ ಸಂಸ್ಥೆಯು, ಸೌತ್‌ವೆಸ್ಟ್‌ನ ವಿಮಾನಗಳಲ್ಲಿ ಪ್ರಯಾಣಿಸುವುದನ್ನೇ ನಿಷೇಧಿಸುವಂತೆ ತನ್ನ ಸದಸ್ಯರಿಗೆ ಕರೆ ನೀಡಿತು. ದೈತ್ಯ ದೇಹಿಗಳ ಹಕ್ಕುಗಳಿಗಾಗಿ 1969ರಿಂದಲೂ ಈ ಸಂಸ್ಥೆ ಹೋರಾಡುತ್ತಿದೆ.
ಇದೆಲ್ಲದರಿಂದ ಎಚ್ಚೆತ್ತುಕೊಂಡ ಸೌತ್‌ವೆಸ್ಟ್, ಕಡೆಗೂ ಸ್ಮಿತ್ ಅವರ ಕ್ಷಮೆ ಯಾಚಿಸಿದೆ. ಆದರೆ 25 ವರ್ಷಗಳಿಂದಲೂ ತಾನು ಪಾಲಿಸುತ್ತಾ ಬಂದಿರುವ ತೂಕದ ನೀತಿಯನ್ನು ಮಾತ್ರ ಅದು ಸಮರ್ಥಿಸಿಕೊಳ್ಳದೇ ಬಿಟ್ಟಿಲ್ಲ.
‘ಸ್ಥೂಲಕಾಯದ ಪ್ರಯಾಣಿಕರು ಒಂದು ಆಸನದಲ್ಲಿ ಸುಖಕರವಾಗಿ ಪ್ರಯಾಣಿಸಲು ಅಸಾಧ್ಯವಾದ್ದರಿಂದ ಹೆಚ್ಚುವರಿ ಟಿಕೆಟ್ ಕೊಳ್ಳಬೇಕೆಂದು ಸಂಸ್ಥೆ ಬಯಸುತ್ತದೆ. ಇದರಲ್ಲಿ ಲಾಭ ಮಾಡಿಕೊಳ್ಳುವ ಯಾವುದೇ ಉದ್ದೇಶ ನಮಗಿಲ್ಲ’ ಎಂದು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment