VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಪುಣೆ ಸ್ಫೋಟ: ತನಿಖಾ ಸಹಕಾರಕ್ಕೆ ಪಾಕ್ ಒಲವು

ಪುಣೆ ಸ್ಫೋಟದಂತಹ ಘಟನೆಗಳನ್ನು ತಡೆಯಲು ಭಾರತದ ಜೊತೆಗಿನ ತನಿಖಾ ಸಹಕಾರ ಹೆಚ್ಚಿಸುವ ಆಹ್ವಾನವನ್ನು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ನೀಡಿದ್ದಾರೆ.

ಇಸ್ಲಾಮಾಬಾದ್ (ಪಿಟಿಐ): ಪುಣೆ ಸ್ಫೋಟದಂತಹ ಘಟನೆಗಳನ್ನು ತಡೆಯಲು ಭಾರತದ ಜೊತೆಗಿನ ತನಿಖಾ ಸಹಕಾರ ಹೆಚ್ಚಿಸುವ ಆಹ್ವಾನವನ್ನು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ನೀಡಿದ್ದಾರೆ.

ಉಭಯ ದೇಶಗಳ ನಡುವಿನ ಮಾತುಕತೆಗೆ ಧಕ್ಕೆ ಉಂಟು ಮಾಡುವ ಸಲುವಾಗಿ ಇಂತಹ ಹಲವು ದುಷ್ಕೃತ್ಯಗಳು ಭಯೋತ್ಪಾದಕರ ಕಾರ್ಯಸೂಚಿಯಲ್ಲಿ ಇರಬಹುದು. ಆದ್ದರಿಂದ ಇಂತಹ ಕ್ರಮ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಅಮೆರಿಕದ ಸೆನೆಟರ್ ಹಾಗೂ ಸೆನೆಟ್‌ನ ವಿದೇಶಾಂಗ ವ್ಯವಹಾರ ಸಮಿತಿಯ ಮುಖ್ಯಸ್ಥ ಜಾನ್ ಕೆರ್ರಿ ಅವರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಗಿಲಾನಿ ಈ ಹೇಳಿಕೆ ನೀಡಿದ್ದಾರೆ. ಎರಡೂ ದೇಶಗಳ ನಡುವಿನ ಎಲ್ಲ ವಿವಾದಗಳನ್ನು ಶಾಂತಿಯುತ ಮತ್ತು ಸಂಘಟಿತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಲ್ಲಿ ಪಾಕಿಸ್ತಾನದ ಪ್ರಬಲ ಬದ್ಧತೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

‘ಮುಂಬೈ ದಾಳಿಕೋರರಿಗೆ ಶಿಕ್ಷೆ ವಿಧಿಸುವ ವಿಷಯದಲ್ಲಿ ಪಾಕಿಸ್ತಾನ ಪ್ರಗತಿ ಸಾಧಿಸಿದೆ. ಯಾವುದೇ ನೆರೆಹೊರೆಯ ದೇಶದ ವಿರುದ್ಧ ಭಯೋತ್ಪಾದಕರು ತನ್ನ ನೆಲದಿಂದ ಚಟುವಟಿಕೆ ನಡೆಸಲು ಅವಕಾಶ ನೀಡದಿರುವ ಬದ್ಧತೆಯನ್ನು ಸಹ ಅದು ಹೊಂದಿದೆ’ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ತಾವು ಕಳೆದ ಜುಲೈನಲ್ಲಿ ಶರ್ಮ್- ಎಲ್- ಷೇಕ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಹೊರಡಿಸಿರುವ ಜಂಟಿ ಘೋಷಣೆಯ ಪರ ನಿಲುವನ್ನು ಪಾಕಿಸ್ತಾನ ಹೊಂದಿದೆ. ದ್ವಿಪಕ್ಷೀಯ ಮಾತುಕತೆ ಪುನರಾರಂಭಕ್ಕೆ ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ದುರದೃಷ್ಟವಶಾತ್ ಭಾರತ ಇದನ್ನು ಕಾರ್ಯರೂಪಕ್ಕೆ ತರುವ ಮನಸ್ಸು ಮಾಡುತ್ತಿಲ್ಲ. ಮಾತುಕತೆಯ ಬಗ್ಗೆ ನಿರ್ಭಾವುಕತನ ಮುಂದುವರಿದಿದ್ದೇ ಆದರೆ ಅದರಿಂದ ಕೇವಲ ಉಗ್ರರಿಗೆ ಲಾಭವಾಗುತ್ತದೆ ಎಂಬುದನ್ನು ಭಾರತ ಸರ್ಕಾರ ಅರಿಯಬೇಕು ಎಂದು ಗಿಲಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಟ, ಆಫ್ಘಾನಿಸ್ತಾನ ಕುರಿತ ಅಮೆರಿಕದ ಹೊಸ ನೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕೆರ್ರಿ ಮತ್ತು ಗಿಲಾನಿ ವಿಸ್ತೃತ ಚರ್ಚೆ ನಡೆಸಿದರು. ಇದಕ್ಕೆ ಮುನ್ನ ನವದೆಹಲಿಗೆ ಭೇಟಿ ನೀಡಿದ್ದ ಕೆರ್ರಿ, ಪಾಕ್ ಹಾಗೂ ಭಾರತದ ನಡುವಿನ ಉದ್ದೇಶಿತ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ಸ್ವಾಗತಿಸಿ, ಉಭಯ ದೇಶಗಳ ಜನರ ಒಳಿತಿಗಾಗಿ ಇದೊಂದು ಉತ್ತಮ ಅವಕಾಶ ಎಂದು ಹೇಳಿದ್ದರು.

ಪ್ರಜಾವಾಣಿ ವಾರ್ತೆ

No comments: