ಇಟಾ ನಗರ (ಪಿಟಿಐ): ಅವರು ಹಾಡಿ, ಆಡಿ ಕುಣಿದರು, ಸಂಕೋಚದಿಂದ ದೂರ ನಿಂತವರೂ ತಮ್ಮೊಂದಿಗೆ ಸೇರುವಂತೆ ಹುರಿದುಂಬಿಸಿದರು. ಈ ಪರಿಯ ಅವರ ಉತ್ಸಾಹ ಕಂಡು ಜೊತೆಯಲ್ಲಿದ್ದ ಯುವಕರೂ ನಾಚಿ ನೀರಾದರು.
73 ವರ್ಷದ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲ ಹೀಗೆ ಕೆಲ ಕಾಲ ತಮ್ಮ ವಯಸ್ಸು, ಹುದ್ದೆ ಎಲ್ಲವನ್ನೂ ಮರೆತು ಹಾಡು, ನೃತ್ಯದಲ್ಲಿ ತಲ್ಲೆನರಾಗಿ ನೆರೆದವರಲ್ಲಿ ಸಂತಸದ ಬುಗ್ಗೆ ಉಕ್ಕಿಸಿದರು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೊರ್ಜಿ ಖಂಡು ಅವರು 24ನೇ ರಾಜ್ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ತಮ್ಮ ನೂತನ ಸರ್ಕಾರಿ ಬಂಗಲೆಯಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಬ್ದುಲ್ಲ ನೆರೆದಿದ್ದ ಗಣ್ಯರ ಹೃದಯ ಸೂರೆಗೊಂಡರು.
ಗಾಯಕರೊಬ್ಬರಿಂದ ಮೈಕ್ರೊಫೋನ್ ಇಸಿದುಕೊಂಡ ಅವರು 45 ನಿಮಿಷ ಒಂದರ ನಂತರ ಒಂದರಂತೆ ಸುಶ್ರಾವ್ಯವಾದ ಜನಪ್ರಿಯ ಹಿಂದಿ ಚಿತ್ರಗೀತೆಗಳನ್ನು ಹಾಡುತ್ತಾ ಹೋದರು. ‘ಮಿಲನ್’ ಚಿತ್ರದ ‘ರಾಮ್ ಕರೆ ಐಸ ಹೋ ಜಾಯೆ’ ‘ಕಾಶ್ಮೀರ್ ಕಿ ಕಲಿ’ಯ ‘ದೀವಾನ ಹುವಾ ಬಾದಲ್’ ಗೀತೆಯನ್ನು ಶಮ್ಮಿಕಪೂರ್ ಶೈಲಿಯನ್ನೇ ಅನುಕರಿಸುತ್ತಾ ಹಾಡಿದ್ದು ವಿಶೇಷವಾಗಿತ್ತು.
ಅರುಣಾಚಲ ರಾಜ್ಯಪಾಲ ಜೆ.ಜೆ.ಸಿಂಗ್, ಅವರ ಪತ್ನಿ ಅನುಪಮಾ, ಉಪ ಆಯುಕ್ತೆ ಪದ್ಮಿನಿ ಸಿಂಗ್ಲ ಮತ್ತು ಕೆಲ ಯುವ ಶಾಸಕರೂ ಅಬ್ದುಲ್ಲ ಅವರ ಮನರಂಜನೆಗೆ ಸಾಥ್ ನೀಡಿದರು.
‘ನೋಡಿ ಫಾರೂಕ್ ಸಾಹೇಬರು ಹಾಡು, ನೃತ್ಯದಲ್ಲಿ ಹೇಗೆ ತಲ್ಲೆನರಾಗಿ ಹೋಗಿದ್ದಾರೆ’ ಎಂದು ಖಂಡು ಸುದ್ದಿಗಾರರತ್ತ ನಗು ತುಳುಕಿಸುತ್ತಾ ಸಚಿವರತ್ತ ಬೊಟ್ಟು ಮಾಡಿದರು.
ಇದಕ್ಕೆ ಮುನ್ನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಫಾರೂಕ್ ಅಬ್ದುಲ್ಲ, ‘ಈ ಸುಂದರ ರಾಜ್ಯದಲ್ಲಿ ಇನ್ನೂ ಕೆಲ ದಿನ ಇರುವ ಆಸೆ ನನಗೆ. ಆದರೆ ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೊರಡಲೇಬೇಕಾಗಿದೆ’ ಎಂದರು.
soure: prajavani
Feb 22, 2010
Subscribe to:
Post Comments (Atom)
No comments:
Post a Comment