VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 22, 2010

ಕತ್ತಲಲ್ಲಿ ಮುಳುಗಿದ ರಾಜ್ಯ

ಎ.ಎಂ.ಸುರೇಶ/ಪ್ರಜಾವಾಣಿ ವಾರ್ತೆ

ವಾರದಿಂದ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟವೇ ರಾಜ್ಯದಲ್ಲಿ ಕತ್ತಲೆ ಆವರಿಸಲು ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು: ವಾರದಿಂದ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟವೇ ರಾಜ್ಯದಲ್ಲಿ ಕತ್ತಲೆ ಆವರಿಸಲು ಪ್ರಮುಖ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವವರೆಗೂ ಈ ವರ್ಷ ವಿದ್ಯುತ್ ಖರೀದಿಗೆ ಹಣ ನೀಡಲು ಸಾಧ್ಯವೇ ಇಲ್ಲ. ಲಭ್ಯವಿರುವ ವಿದ್ಯುತ್ತನ್ನೇ ಎಲ್ಲ ಕಡೆಗೂ ಹಂಚಿಕೆ ಮಾಡಿ ಎಂಬ ಸ್ಪಷ್ಟ ಸೂಚನೆಯನ್ನು ಹಣಕಾಸು ಖಾತೆಯ ಹೊಣೆ ಹೊತ್ತಿರುವ ಯಡಿಯೂರಪ್ಪ ನೀಡಿದ್ದರು.

ಆದರೆ ಇಂಧನ ಖಾತೆ ತಮ್ಮ ಹೆಗಲಿಗೆ ಬೀಳುತ್ತಿ ್ದದಂ ತೆಯೇ ನಿಲುವು ಬದಲಾಯಿಸಿದ ಅವರು ವಿದ್ಯುತ್ ಖರೀದಿಗೆ ಎಷ್ಟು ಹಣ ಬೇಕಾದರೂ ನೀಡಲು ಸಿದ್ಧ ಎಂದು ಘೋಷಿಸಿದ್ದಾರೆ. ಜಿಎಂಆರ್ ಮತ್ತು ಎನ್‌ಟಿಪಿಸಿ ಈಗ 300 ಮೆಗಾವಾಟ್ ವಿದ್ಯುತ್ ನೀಡಲು ಮುಂದೆ ಬಂದಿವೆ. ಆದರೆ ಕಾರಿಡಾರ್ (ಪೂರೈಕೆ ಲೈನ್) ಲಭ್ಯವಿಲ್ಲದ ಕಾರಣ ಸಿಗುವ ವಿದ್ಯುತ್ ಬಳಸಿಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ.


ಇದಕ್ಕೆ ಸರ್ಕಾರವೇ ಹೊಣೆ ಎಂಬುದು ಇಂಧನ ಇಲಾಖೆ ಅಧಿಕಾರಿಗಳ ಆರೋಪ. ಜನವರಿ ತಿಂಗಳಲ್ಲಿಯೇ ಖರೀದಿಗೆ ಸೂಚನೆ ನೀಡಿದ್ದರೆ ಮೊದಲೇ ಖಾಸಗಿ ಸಂಸ್ಥೆಗಳು ಮತ್ತು ಬೇರೆ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೆವು. ಆದರೆ ತಡವಾಗಿ ಸೂಚನೆ ಬಂದಿದ್ದು, ಈಗಾಗಲೇ ಕಾರಿಡಾರ್‌ಗಳು ಬುಕ್ ಆಗಿವೆ. ಹೀಗಾಗಿ ಸರದಿಯಲ್ಲಿ ಕಾಯುವಂತಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿನಿಮಯ ಪದ್ಧತಿ ಮೂಲಕ ಎನ್‌ಟಿಪಿಸಿ 200 ಹಾಗೂ ಜಿಎಂಆರ್ 100 ಮೆಗಾವಾಟ್ ವಿದ್ಯುತ್ ನೀಡಲು ಮುಂದೆ ಬಂದಿದ್ದು, ಇವರಿಗೆ ಜುಲೈನಲ್ಲಿ ಮತ್ತೆ ಹಿಂತಿರುಗಿಸಬೇಕು. ಕಾರಿಡಾರ್ ಪಡೆಯುವ ಪ್ರಯತ್ನಗಳು ನಡೆದಿದ್ದು, ಇದು ಯಶಸ್ವಿಯಾದರೆ 300 ಮೆಗಾವಾಟ್ ವಿದ್ಯುತ್ ಮುಂದಿನ ವಾರದಿಂದ ಲಭ್ಯವಾಗಲಿದೆ.

ದೀರ್ಘಾವಧಿ ಒಪ್ಪಂದ: ಜಿಂದಾಲ್‌ನವರು ಒಟ್ಟು 750 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಸದ್ಯ 200 ಮೆಗಾವಾಟ್ ಮಾತ್ರ ರಾಜ್ಯಕ್ಕೆ ನೀಡುತ್ತಿದ್ದಾರೆ. ಉಳಿದ ವಿದ್ಯುತ್ತನ್ನು ಬೇರೆ ರಾಜ್ಯಗಳಿಗೆ ನೀಡುತ್ತಿದ್ದಾರೆ. ಸರ್ಕಾರ ಜಿಂದಾಲ್ ನೊಂದಿಗೆ ಮಾತುಕತೆ ನಡೆಸಿ ಐದು ವರ್ಷಗಳ ಅವ ಧಿಗೆ ಪೂರ್ಣ ಪ್ರಮಾಣದ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಂಡರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆಂಬುದು ಅವರ ಅಭಿಪ್ರಾಯ.

ಜಿಂದಾಲ್‌ನಿಂದ ಖರೀದಿಸಿದರೆ ಕಾರಿಡಾರ್ ಮತ್ತು ನಷ್ಟದ ಸಮಸ್ಯೆ ಇರುವುದಿಲ್ಲ. ಪ್ರತಿವರ್ಷ ಸಮಸ್ಯೆ ಬಿಗಡಾಯಿಸಿದಾಗ ಎಚ್ಚೆತ್ತುಕೊಳ್ಳುವ ಬದಲು ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಬೇಕು. ಐದು ವರ್ಷ ನಂತರ ಈಗ ಪ್ರಗತಿಯಲ್ಲಿರುವ ಯೋಜನೆಗಳು ಪೂರ್ಣಗೊಳ್ಳ ಲಿವೆ. ಆಗ ಖರೀದಿ ಮಾಡುವ ಸಂದರ್ಭ ಬರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಪ್ರಸ್ತುತ ಜಿಂದಾಲ್‌ನಿಂದ 200 ಮೆಗಾವಾಟ್, ರಿಲಯನ್ಸ್‌ನಿಂದ 100 ಮೆಗಾವಾಟ್ ವಿದ್ಯುತ್ ಖರೀದಿ ಮಾಡುತ್ತಿದ್ದರೂ, ಸಮರ್ಪಕವಾಗಿ ವಿದ್ಯುತ್ ಪೂರೈಸಲು ಆಗುತ್ತಿಲ್ಲ. ಬೆಂಗಳೂರು ನಗರದಲ್ಲಿಯೇ ನಿತ್ಯ 3-4 ಗಂಟೆಗಳ ಕಾಲ ಅನಿಯಮಿತ ಲೋಡ್ ಶೆಡ್ಡಿಂಗ್ ಇದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪದೇ ಪದೇ ಕೈಕೊಡುತ್ತಿದ್ದು, ಯಾವಾಗ ಇರುತ್ತದೆ ಎಂಬುದೇ ಗೊತ್ತಾಗುವುದಿಲ್ಲ.

ಈ ವರ್ಷದಲ್ಲಿ ಇದುವರೆಗಿನ ನಿತ್ಯದ ಗರಿಷ್ಠ ಬಳಕೆ 138 ದಶಲಕ್ಷ ಯೂನಿಟ್. ಸದ್ಯ ಲಭ್ಯವಿರುವ ಎಲ್ಲ ಮೂಲಗಳಿಂದ ಪ್ರಯತ್ನಿಸಿದರೂ ಇದಕ್ಕಿಂತ ಹೆಚ್ಚಿಗೆ ಕೊಡಲು ಆಗುತ್ತಿಲ್ಲ. ಬರುವ ದಿನಗಳಲ್ಲಿ ಬೇಡಿಕೆ ಪ್ರಮಾಣ 145ರಿಂದ 150 ದಶಲಕ್ಷ ಯೂನಿಟ್‌ಗೆ ಏರಲಿದೆ. ಆಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎನ್ನುತ್ತಾರೆ ಅಧಿಕಾರಿಗಳು.

ಎಚ್ಚೆತ್ತ ಸರ್ಕಾರ: ರಾಜ್ಯವು ಕತ್ತಲೆಯಲ್ಲಿ ಮುಳು ಗಿ ರು ವಾಗ ಸರ್ಕಾರ ಎಚ್ಚೆತ್ತುಕೊಂಡಿದ್ದು, ಬರುವ ಏಪ್ರಿಲ್‌ನಿಂದ ಒಂದು ವರ್ಷ ಕಾಲ 750 ಮೆಗಾ ವಾಟ್ ವಿದ್ಯುತ್ ಖರೀದಿಸಲು ಟೆಂಡರ್ ಕರೆದಿದೆ.

ಈಗ ರಾಜ್ಯದ ಎಲ್ಲ ಕಡೆ ಸಮಸ್ಯೆ ಇರುವುದರಿಂದ ವಿದ್ಯುತ್ ಖರೀದಿಗೆ 500 ಕೋಟಿ ರೂಪಾಯಿ ನೀಡುವುದಾಗಿ ಸರ್ಕಾರ ಹೇಳಿದೆ. ಈ ನಿರ್ಧಾರವನ್ನು ಜನವರಿಯಲ್ಲಿ ತೆಗೆದುಕೊಂಡಿದ್ದರೆ ಮಾರ್ಚ್‌ನಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬಹು ದಾಗಿತ್ತು. ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತಿತ್ತು ಎಂದು ಅಧಿಕಾರಿಗಳೇ ಹೇಳುತ್ತಾರೆ.

ಈ ವರ್ಷ ಶೇ 10ರಷ್ಟು ಬೇಡಿಕೆ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಯಾವಾಗ ಕರೆಂಟ್ ಇರುತ್ತದೆ ಎಂಬುದೇ ಅಸ್ಪಷ್ಟವಾಗಿದೆ. ತಲಾ ಆರು ಗಂಟೆ ಮೂರು ಫೇಸ್ ಮತ್ತು ಸಿಂಗಲ್ ಫೇಸ್ ವಿದ್ಯುತ್ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಆದರೆ ಮೂರು ಗಂಟೆ ಕೂಡ ವಿದ್ಯುತ್ ಇರುವುದಿಲ್ಲ, ಇದರಿಂದಾಗಿ ಕುಡಿಯುವ ನೀರಿಗೂ ತೊಂದರೆ ಯಾಗಿದೆ ಎಂಬುದು ರೈತರ ಆರೋಪ.

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಅನೇಕ ಕಡೆ ಪ್ರತಿಭಟನೆ, ಕಚೇರಿಗೆ ಮುತ್ತಿಗೆ ಹಾಕುವುದು ಮುಂದುವರಿದಿದೆ. ಮಾರ್ಚ್‌ನಲ್ಲಿ ಬಿಸಿಲಿನ ಧಗೆ ಹೆಚ್ಚಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಆ ವೇಳೆಗೆ ಸಮಸ್ಯೆ ಬಗೆಹರಿಯದಿದ್ದರೆ ರೈತರೆಲ್ಲ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಎಚ್ಚರಿಕೆ ನೀಡಿದ್ದಾರೆ.


source: prajavani

No comments: