
ಮಂಗಳೂರು: ಡಿಸಿಐಬಿ ಪೊಲೀಸ ರಿಂದ ಬಂಧಿತರಾಗಿರುವ ರವಿ ಪೂಜಾರಿಯ ಸಹಚರರು ಮಂಗಳೂರಿನ ಪ್ರಮುಖ ಉದ್ಯಮಿಗಳಿಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮಾಹಿತಿಯನ್ನು ನಿನ್ನೆ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ಪತ್ರಿಕಾಗೋಷ್ಠಿಯ ಮೂಲಕ ಬಹಿರಂಗಪಡಿಸಿದ್ದಾರೆ.
ಮಂಗಳೂರಿನ ಪ್ರಮುಖ ಉದ್ಯಮಿ ಗಳಿಬ್ಬರಿಗೆ ವಿದೇಶದಿಂದ ರವಿ ಪೂಜಾರಿ ಹೆಸರಿನಲ್ಲಿ ನಿರಂತರವಾಗಿ ಐದು ಕೋಟಿ ರೂಪಾಯಿಗಳಿಗೆ ಬೇಡಿಕೆ ಬರುತ್ತಿತ್ತು. ಇದನ್ನು ನಿರಾಕರಿಸುತ್ತಿದ್ದ ಉದ್ಯಮಿಗಳಿಬ್ಬರಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದಲ್ಲದೆ ಒಂದು ವಾರದೊಳಗೆ ಈ ಕೆಲಸವನ್ನು ಪೂರ್ತಿ ಗೊಳಿಸುವುದಾಗಿ ಸವಾಲನ್ನೂ ಹಾಕಲಾ ಗಿತ್ತು.
ಇದರಿಂದ ವಿಚಲಿತರಾದ ಉದ್ಯಮಿ ಯೊಬ್ಬರು ಕಳೆದ ಮಂಗಳವಾರದಂದು ಮಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್‌ರವರು ವೆಂಕಟೇಶ್ ಪ್ರಸನ್ನ ನೇತೃತ್ವದ ಡಿಸಿಐಬಿ ಪೊಲೀಸರಿಗೆ ಪ್ರಕರಣವನ್ನು ಭೇದಿಸುವಂತೆ ಜವಾಬ್ದಾರಿ ವಹಿಸಿದ್ದರು.
ಇದರಂತೆ ಎರಡು ತಂಡಗಳನ್ನು ರಚಿಸಲಾಗಿದ್ದು ಮೊನ್ನೆ ಬೆಳಿಗ್ಗೆ ಬೆಂದೂರ್‌ವೆಲ್‌ನಲ್ಲಿರುವ ಉದ್ಯಮಿಯ ಮನೆ ಬಳಿ ಎರಡು ಬೈಕ್‌ಗಳಲ್ಲಿ ಇಬ್ಬರು ಬಂದು ಸ್ಥಳವನ್ನು ಪರಿಶೀಲಿಸಿದ್ದನ್ನು ಗಮನಿಸಿದ ಡಿಸಿಐಬಿ ತಂಡ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ತಕ್ಷಣವೇ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಆರೋಪಿಗಳಿ ಗಾಗಿ ಬಲೆ ಬೀಸಲಾಗಿತ್ತು. ಬೈಕ್ ಬಂದ ಎರಡು ಗಂಟೆಗಳ ಅಂತರದಲ್ಲಿ ಮತ್ತೆ ಅದೇ ಬೈಕ್‌ಗಳ ಜೊತೆ ಸ್ವಿಫ್ಟ್ ಕಾರೊಂದು ಬಂದಿದ್ದು, ಅದನ್ನು ಸುತ್ತುವರಿದ ಪೊಲೀಸರು ಅದರಲ್ಲಿದ್ದ ಏಳು ಮಂದಿಯನ್ನು ಬಂಧಿಸಿದ್ದಲ್ಲದೆ ನಾಲ್ಕು ಪಿಸ್ತೂಲು, 30 ಮದ್ದುಗುಂಡುಗಳು, ಎಂಟು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾವು ಬಂದಿದ್ದ ಕೃತ್ಯದ ಬಗ್ಗೆ ಸುಳಿವು ನೀಡಿದರು. ನಗರದಲ್ಲಿ ಪ್ರಖ್ಯಾತ ಶಿಪ್ಪಿಂಗ್ ಕಂಪೆನಿ ಹಾಗೂ ಸೆಜ್ ಸಹಿತ ಹಲವಾರು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿರುವ ಉದ್ಯಮಿ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಲು ಬಂದಿರುವುದಾಗಿ ಬಾಯಿಬಿಟ್ಟಿದ್ದಾರೆ. ಬಂಧಿತರನ್ನು ಉಡುಪಿ ಅಂಬಲ್ಪಾಡಿಯ ನಿವಾಸಿಗಳಾದ ಪ್ರಶಾಂತ್ ಶೆಟ್ಟಿ (32), ಸತೀಶ್ ಶೆಟ್ಟಿ (30), ವಾಮಂಜೂರಿನ ಸುಧೀರ್ ಪೂಜಾರಿ (22), ಪ್ರವೀಣ್ ಕಾರ್ಲೊ (24), ಯತೀಶ್ ಪೂಜಾರಿ (22), ಅಮೃತ್ ಕರ್ಕೇರ (24) ಮತ್ತು ಮಾರಿಪಳ್ಳದ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ.
ಜೈಲಿನಿಂದಲೇ ದಿನೇಶ್ ಅಮೀನ್ ಪ್ಲಾನ್
ರವಿ ಪೂಜಾರಿ ತಂಡದ ಕೃತ್ಯಕ್ಕೆ ಕಲಿ ಯೋಗೀಶನೂ ಸಹಕಾರ ನೀಡಿದ್ದಾನೆ. ನೌಶಾದ್ ಖಾಸಿಂಜಿ ಕೊಲೆ ಆರೋಪಿ ದಿನೇಶ್ ಅಮೀನ್ ಮೈಸೂರು ಜೈಲಿನಿಂದಲೇ ಪ್ಲಾನ್ ರೂಪಿಸಿದ್ದು ಇದಕ್ಕಾಗಿ ಜೈಲು ಸಿಬ್ಬಂದಿ ಮಹದೇವಪ್ಪ ಎಂಬಾತನನ್ನು ಬಳಸಿರುವುದಾಗಿ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಮಹಾದೇವನನ್ನು ಈಗಾಗಲೇ ಮೈಸೂರಿನಲ್ಲಿ ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ ಎಂಟಕ್ಕೆ ತಲುಪಿದೆ. ಆರೋಪಿಗಳಿಗೆ ಒಂದೂವರೆ ಲಕ್ಷ ಮೊತ್ತವು ವಿದೇಶದಿಂದ ಬಂದಿದ್ದು ಅದರ ಪೈಕಿ 52 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐ.ಜಿ. ಖಡಕ್ ಎಚ್ಚರಿಕೆ
ಭೂಗತ ಪಾತಕಿಗಳು ವಿದೇಶದಲ್ಲಿ ಕುಳಿತು ಸ್ಥಳೀಯ ಅಮಾಯಕ ಯುವಕರಿಗೆ ಹಣದ ಆಮಿಷ ಒಡ್ಡಿ ದುಷ್ಕೃತ್ಯಕ್ಕೆ ಸೆಳೆಯುತ್ತಿದ್ದಾರೆ. ಮುಂದೆ ಇಂತಹ ಕೃತ್ಯ ನಡೆಸಲು ಬಿಡುವುದಿಲ್ಲ ಎಂದು ಐಜಿಪಿ ಗೋಪಾಲ್ ಹೊಸೂರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭೂಗತ ಪಾತಕಿಗಳ ಕೃತ್ಯಕ್ಕೆ ಸ್ಥಳೀಯರು ಸಹಕಾರ ನೀಡುತ್ತಿದ್ದು ಇಂತಹವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದ್ದಾರೆ.
ಭೂಗತ ಪಾತಕಿಗಳ ಸಹಚರರಿಗೆ ವಾಹನಗಳನ್ನು ಖರೀದಿಸಲು ಐಸಿಐಸಿಐ, ಸಿಂಡಿಕೇಟ್ ಮತ್ತು ಕಾರ್ಪೋರೇಶನ್ ಬ್ಯಾಂಕ್‌ಗಳು ಸಾಲ ನೀಡಿವೆ. ಈ ಬ್ಯಾಂಕ್‌ಗಳು ಸಾಲ ವಸೂಲಿಗಾಗಿ ರೌಡಿಗಳನ್ನು ಬಳಸುತ್ತಿದ್ದು ಅಪರಾಧ ಕೃತ್ಯ ನಡೆಸುವವರಿಗೆ ಪೋ ನೀಡಿರುವುದು ಬೆಳಕಿಗೆ ಬಂದಿದೆ.
ಯಾವುದೇ ಬ್ಯಾಂಕ್‌ಗಳಲ್ಲೂ ರೌಡಿಗಳನ್ನು ಸಿಝರ್‌ಗಳಾಗಿ ಬಳಸಿದರೆ ಅಂತಹ ಬ್ಯಾಂಕ್‌ಗಳಿಗೆ ನೋಟೀಸ್ ಜಾರಿಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
source: jayakirana
No comments:
Post a Comment