
ಮಂಗಳೂರು: ಬಿಜೆಪಿಯ ಗಟ್ಟಿ ನೆಲ ಎಂದೇ ಭಾವಿಸಲಾಗಿದ್ದ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರ ತವರು ಸುಳ್ಯ ಕ್ಷೇತ್ರದ ಬಿಜೆಪಿಯಲ್ಲಿ ಈಗ ಗೊಂದಲ ಆರಂಭವಾಗಿದೆ.
ಸುಳ್ಯ ಬಿಜೆಪಿಯ ಪ್ರಭಾವಿ ನಾಯಕ ಎಂದೇ ಪರಿಗಣಿಸಲಾಗಿದ್ದ ಚಂದ್ರಕೋಲ್ಚಾರರನ್ನು ಉಚ್ಛಾಟಿಸಿರುವ ಪ್ರಕಟಣೆಯೊಂದು ಬಿಜೆಪಿ ಮಂಡಳ ಸಮಿತಿಯಿಂದ ಹೊರ ಬಿದ್ದಿದ್ದೂ ಸುಳ್ಯ ಬಿಜೆಪಿಯ ಇಬ್ಬಾಗದ ಸೂಚನೆ ನೀಡಿದೆ.
ಸುಳ್ಯ ಬಿಜೆಪಿಯಲ್ಲಿ ಕಳೆದ ಎರಡು ತಿಂಗಳುಗಳಿಂದ ಗೊಂದಲ ಆರಂಭವಾ ಗಿದೆ. ಎರಡು ತಿಂಗಳ ಹಿಂದೆ ನಡೆದ ಸುಳ್ಯ ಮಂಡಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಬಿಜೆಪಿಯ ಸಂವಿಧಾನಕ್ಕೆ ಬದ್ದವಾಗಿಲ್ಲ . ಮೊದಲೇ ಅಧ್ಯಕ್ಷರನ್ನು ಘೋಷಿಸಿ ಆ ಮೇಲೆ ಸಮಾಲೋಚನಾ ಸಭೆ ನಡೆಸುವುದಲ್ಲಿ ಏನು ಅರ್ಥ ಎಂದು ಚಂದ್ರ ಪ್ರಶ್ನಿಸಿದ್ದರು. ಅವರ ಈ ಪ್ರಶ್ನೆಗೂ ಕಾರಣ ಇದೆ. ಸುಳ್ಯ ಮಂಡಳ ಸಮಿತಿಯ ಅಧ್ಯಕ್ಷರಾಗುವ ಆಕಾಂಕ್ಷೆ ಚಂದ್ರ ಅವರಲ್ಲಿ ಇತ್ತು. ಪಕ್ಷದ ವರಿಷ್ಠರು ತಮ್ಮ ಹೆಸರನ್ನೇ ಸೂಚಿಸುತ್ತಾರೆ ಎಂಬ ನಿರೀಕ್ಷೆಯು ಅವರಲ್ಲಿ ಇತ್ತು, ಆದರೆ ಹಾಗಾಗಲಿಲ್ಲ. ಒಂದು ವೇಳೆ ಚುನಾವಣೆ ನಡೆದರೆ ತಾನು ಸ್ಪರ್ಧಿಸಿ ತನ್ನ ಬಲ ಪ್ರದರ್ಶಿಸಲು ಅವರು ಸಿದ್ಧರಾಗಿದ್ದರು. ಆದರೆ ಅದಕ್ಕೂ ಅವಕಾಶ ಸಿಗಲಿಲ್ಲ. ಜಿ.ಪಂ. ಸದಸ್ಯ ವೆಂಕಟ್ ದಂಬೇಕೋಡಿಯನ್ನೇ ಅಧ್ಯಕ್ಷರನ್ನಾಗಿಸಲಾಯಿತು. ಇದರಿಂದ ಕುಪಿತರಾದ ಚಂದ್ರಾ ಇಷ್ಟೆಲ್ಲ ಬೆಳವಣಿಗೆಗೆ ಆರ್ಎಸ್ಎಸ್ನ ನಾ. ಸೀತಾರಾಮರೇ ಕಾರಣ ಎಂದು ಅವರ ವಿರುದ್ಧ ಹರಿಹಾಯ್ದರು. ಅಧ್ಯಕ್ಷರಾಯ್ಕೆಯ ಅಂದಿನ ಸಭೆಯಲ್ಲಿ ನಾ.ಸೀತಾರಾಮ ಹಾಗೂ ಚಂದ್ರರ ಮಧ್ಯೆ ಅವರ ಘನತೆಗೆ ತಕ್ಕುದಲ್ಲದ ಶಬ್ದಗಳ ವಿನಿಮಯವೂ ಆಗಿತ್ತು. ಅನಂತರ ಸುಳ್ಯ ಬಿಜೆಪಿಯಲ್ಲಿ ಎರಡು ಪ್ರತ್ಯೇಕ ಗುಂಪುಗಳು ತಮ್ಮ ತಮ್ಮ ಪ್ರಭಾವ ಸಿದ್ಧಪಡಿಸುವಲ್ಲಿ ತೊಡಗಿದ್ದು ಹಾಲಿ ಅಧಿಕಾರಸ್ಥರು ಇನ್ನೊಂದು ಗುಂಪನ್ನು ಬಗ್ಗು ಬಡಿಯುವ ಭಾಗವಾಗಿ ಚಂದ್ರರನ್ನು ಉಚ್ಛಾಟಿಸುವ ನಿರ್ಣಯ ಅಂಗೀಕರಿಸಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಳೆದ ಜ.25ರಂದು ಸುಳ್ಯದಲ್ಲಿಯ ಗುಂಪುಗಾರಿಕೆಯ ಸಮಸ್ಯೆಯನ್ನು ನಿವಾರಿಸಲೆಂದೇ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ವಿಪರ್ಯಾಸ ಎಂದರೆ ಭಿನ್ನಮತರ ರೂವಾರಿ ಎನಿಸುವ ಚಂದ್ರರವರಿಗೆ ಈ ಸಭೆಯ ಆಹ್ವಾನವಿರಲಿಲ್ಲ.
ಅದಾಗ್ಯೂ ಗೊಂದಲವನ್ನು ನಿವಾರಿಸಲು ಶಾಸಕ ಅಂಗಾರ ಹಾಗೂ ಕೆ.ಎಫ್.ಡಿ.ಸಿ. ಅಧ್ಯಕ್ಷ ಮನ್ಮಥರ ನೇತೃತ್ವದಲ್ಲಿ ಎರಡು ಗುಂಪುಗಳ ಮನ ಒಲಿಸುವ ತಂತ್ರ ರೂಪಿಸಲಾಗಿತ್ತು. ಈ ತಂತ್ರಗಾರಿಕೆ ಮುಂದಿರುವಾಗಲೇ ಮಂಡಳ ಸಮಿತಿ ಉಚ್ಛಾಟನೆಯ ಕುತಂತ್ರ ಸೃಷ್ಟಿಸಿದೆ ಎನ್ನುತ್ತಾರೆ ಚಂದ್ರರ ಬೆಂಬಲಿಗರು.
ಸುಳ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳ ಮೂಲ ರೂವಾರಿ ನಾ.ಸೀತಾರಾಮ. ಸುಳ್ಯದಲ್ಲಿ ನಾನೇ ಹೈಕಮಾಂಡ್ ಎಂದುಕೊಂಡಿರುವ ಇವರು ತಮಗನುಕೂಲವಾಗುವವರಿಗೆ ಅಧಿಕಾರ ಹಂಚುತ್ತಿದ್ದಾರೆ. ಕಳೆದ ವರ್ಷ ನಾ.ಸೀತಾರಾಮರವರ ನೇತೃತ್ವದಲ್ಲಿ ಹಿಂದೂ ಸಮಾಜೋತ್ಸವ ಹಾಗೂ ಸಂಕಲ್ಪ ಸಮಾವೇಶದ ಲೆಕ್ಕ ಕೇಳಿದ್ದಕ್ಕಾಗಿ ಧ್ವೇಷ ಸಾಧಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿನ ಹಣದ ವ್ಯವಹಾರ ಇವರ ಕೈಯಲ್ಲೇ ಇತ್ತು. ಈ ಹಣದಲ್ಲಿ ಎಷ್ಟು ಖರ್ಚಾಗಿದೆ ಎಂದು ಯಾರಿಗೂ ಗೊತ್ತಿಲ್ಲ ಇದನ್ನೆಲ್ಲ ಪ್ರಶ್ನಿಸುವವರಿಗೆ ಪಕ್ಷದಿಂದ ದೂರ ಇಡಲು ಇವರು ಪ್ರಯತ್ನಿಸುತ್ತಿದ್ದಾರೆ ಎಂಬುದು ಚಂದ್ರ ಬಳಗದ ಆರೋಪ
ಈ ವಿಷಯ ಬೇಗನೆ ಇತ್ಯರ್ಥವಾಗದೆ ಇದ್ದರೆ ಸುಳ್ಯ ಬಿಜೆಪಿ ಸದ್ಯದಲ್ಲೇ ಇಬ್ಭಾಗವಾಗಲಿದೆ ಎಂಬ ಸೂಚನೆ ಚಂದ್ರ ಬಳಗದಿಂದ ಬಂದಿದೆ.
ಕ್ರಪೆ: ಜಯಕಿರಣ
No comments:
Post a Comment