VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 19, 2010

ಗದಗ :೭೬ನೇ ಸಾಹಿತ್ಯ ಜಾತ್ರೆಗೆ ವರ್ಣರಂಜಿತ ಚಾಲನೆ





ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ(ಗದಗ), ಫೆ.19:

ಜಾತಿಯಾಧಾರಿತ ಗುಂಪುಗಳು, ಪ್ರದೇಶಾಧಾರಿತ ಗುಂಪು, ಉಪಭಾಷಾ ಆಧಾರಿತ ಗುಂಪುಗಳು ತುಂಡು ತುಂಡಾಗಿ ಹೋರಾಟದ ಕಾರ್ಯಕ್ರಮಕ್ಕಿಳಿದು ಅವುಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಆಧುನಿಕೋತ್ತರ ಸಮಾಜದ ಬಹುದೊಡ್ಡ ವ್ಯಂಗ್ಯ ಎಂದು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ನಾಡೋಜ ಡಾ.ಗೀತಾ ನಾಗಭೂಷಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂದಿನ ಕನ್ನಡ ನಾಡು ನುಡಿಯ ಹೆಸರಲ್ಲಿ ಹುಟ್ಟಿಕೊಳ್ಳುತ್ತಿರುವ ಸಂಘಟನೆಗಳನ್ನು ಕಂಡು ಗಾಬರಿ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಿದ್ಯಾದಾನ ಸಮಿತಿ ಪದವಿ ಪೂರ್ವ ಕಾಲೇಜು ಮೈದಾನದ ಕುಮಾರಸ್ವಾಮಿ ಮಹಾಮಂಟಪದ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಮೂರು ದಿನಗಳ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ ಅವರು, ನಾಡು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ರೈತರು ಗ್ರಾಮೀಣ ಪ್ರದೇಶದ ಜನರ ಕಷ್ಟಗಳು, ನೋವುಗಲಿಗೆ ಸ್ಪಂದಿಸಲು ಹಿಂದೇಟು ಹಾಕುತ್ತಿರುವ ರಾಜಕೀಯ ಇಚ್ಚಾಶಕ್ತಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಆಧುನಿಕ ಗಾಳಿ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುವುದೆಂದು ನಿರೀಕ್ಷಿಸಲಾಗಿತ್ತು. ನೋವಿನ ಸಂಗತಿ ಎಂದರೆ ಬದುಕು ಆಧುನಿಕವಾಗಿದೆಯೇ ಹೊರತು ಮಹಿಳೆ ಶೋಷಣೆ, ದಬ್ಬಾಳಿಕೆಯಿಂದ ಮುಕ್ತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಹೆಚ್ಚುತ್ತಿರುವ ವರದಕ್ಷಿಣೆ ಕಿರುಕುಳ ಇನ್ನು ಜೀವಂತವಾಗಿರುವ ಬಾಲ್ಯವಿವಾಹ, ದೇವದಾಸಿ ಪದ್ದತಿ, ಕೌಟುಂಬಿಕ ಹಿಂಸೆ ಇವೆಲ್ಲವೂ ರೋಗಗ್ರಸ್ತ ಸಮಾಜದ ಲಕ್ಷಣಗಳೇ ಆಗಿದೆ ಎಂದರು.
ಗ್ರಾಮೀಣ ಪ್ರದೇಶದ ರೈತಾಪಿ, ಕೃಷಿ, ಕಾರ್ಮಿಕ ಮಹಿಳೆಯರ ಸಮಸ್ಯೆಗಳು ಹೊಸ-ಹೊಸ ರೂಪ ತೊಟ್ಟು ಎದುರಾಗುತ್ತಿದೆ. ಈ ದೇಶದಲ್ಲಿ ಮಹಿಳೆಯರಿಗೆ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ ಎನ್ನುವ ಸಂಗತಿಯನ್ನು ಎಷ್ಟು ಸಲ ಪ್ರಶ್ನಿಸುವುದು ಎಂಬಂತಾಗಿದೆ ಎಂದು ವ್ಯವಸ್ಥೆ ಹಾಗೂ ಸರ್ಕಾರದ ವಿರುದ್ಧ ಅಸಹನೆ, ಆಕ್ರೋಶ ವ್ಯಕ್ತಪಡಿಸಿದರು.
ಕೋಮುದ್ವೇಷದ ದಳ್ಳುರಿಗೆ ಬಲಿಯಾಗಿ ಜನಸಾಮಾನ್ಯರು ಸಹನಾ ಸಂಸ್ಕೃತಿಗೆ ತಿಲಾಂಜಲಿ ನೀಡಿ ದಿನ ಬೆಳಗಾದರೆ ನೋಡುತ್ತಿರುವ ಚರ್ಚ್ ಮೇಲಿನ ದಾಳಿ,ಗಲಭೆ, ಗಡಿ ಸಮಸ್ಯೆ, ರಾಜಕೀಯ ದುರಾಡಳಿತ ಎಲ್ಲವನ್ನೂ ಪರಿಹರಿಸಲು ರಾಜಕೀಯ ಇಚ್ಛಾಶಕ್ತಿಯ ಅಗತ್ಯ ಇದೆ ಎಂದರು.
w.d

No comments: