
ವಿಟ್ಲ: ಬಡ ಕುಟುಂಬದ ಹುಡುಗಿಯರನ್ನು ತಮ್ಮ ಮೋಸದ ಬಲೆಗೆ ಬೀಳಿಸಿ ಮದುವೆಯಾಗುವುದಾಗಿ ನಂಬಿಸಿ ಹಣ ಒಡವೆಗಳನ್ನು ದೋಚುತ್ತಿದ್ದ ಮಹಾ ವಂಚಕನೊಬ್ಬನನ್ನು ಪುತ್ತೂರು ಪೊಲೀಸರು ಭಾನುವಾರ ಪುತ್ತೂರಿನ ದೇವಾಲಯ ಒಂದರ ಆವರಣದಿಂದ ರೆಡ್ ಹ್ಯಾಂಡಾಗಿ ಹಿಡಿದರು.
ಜಿಲ್ಲೆಯಾದ್ಯಂತ ಹಲವಾರು ಕಡೆ ವಂಚನೆ ಪ್ರಕರಣಗಳಲ್ಲಿ ಭಾಗಿ ಯಾಗಿರುವ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಅಗರಿ ಮಾಂತೂರು ನಿವಾಸಿ ದಿವಂಗತ ಶೀನ ಪೂಜಾರಿಯ ಮಗ ಸುಂದರ ಪೂಜಾರಿ (45) ಎಂಬಾತನೇ ವಿವಾ ಹಿತ ಅಸಾಮಿ. ಭಾನುವಾರ ಬೆಳಿಗ್ಗೆ ಒಡವೆ ಮತ್ತು ಹಣದಾಸೆಗಾಗಿ ಮದುವೆ ಯಾಗುವುದಾಗಿ ಮಧ್ಯವರ್ತಿ ಕಾಣಿಯೂರು ಪುಣ್ಚತ್ತಾರು ನಿವಾಸಿ ನಾರಾಯಣ ರೈ ಅವನೊಂದಿಗೆ ನಕಲಿ ಕರಿಮಣಿ ಸರದೊಂದಿಗೆ ವಧುವಿಗಾಗಿ ಕಾಯುತ್ತಿರುವ ವೇಳೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀರಕ್ಷಾ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಸಹಕಾರದಲ್ಲಿ ಪುತ್ತೂರು ಠಾಣಾ ಇನ್ಸ್‌ಪೆಕ್ಟರ್ ಶ್ರೀಕಾಂತ್‌ರವರ ಬಲೆಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಬ್ರೋಕರ್‌ಗಿರಿಯಲ್ಲಿ ಜೈಲು ಶಿಕ್ಷೆ ಅನುಭವಿಸಿದ ನಾರಾಯಣ ರೈ ಜಾಗದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಬಂಟ್ವಾಳ ತಾಲೂಕಿನ ಪುಣಚಾ ಗ್ರಾಮದ ಲೊಕ್ಕೋಣಿ ದಿವಂಗತ ರಾಮಣ್ಣ ಪೂಜಾರಿಯ ಮಗಳು ಭಾಗೀರಥಿ ಎಂಬಾಕೆಯೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀರಕ್ಷಾ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಸಹಕಾರದಲ್ಲಿ ವಂಚಕನ ಬಲೆಯಿಂದ ತಪ್ಪಿಸಿಕೊಂಡ ಅದೃಷ್ಟವಂತೆ.
ಘಟನೆಯ ವಿವರ : ಹಣದಾಸೆಗಾಗಿ ಅಮಾಯಕ ಹೆಣ್ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದ ಮದುವೆ ದಲ್ಲಾಳಿ ನಾರಾಯಣ ರೈಗೆ ಬಲ್ನಾಡು ಗ್ರಾಮದ ಸಾರ್ಯ ಎಂಬಲ್ಲಿ ಯಮುನಾ ಎಂಬಾಕೆ ಸಂಬಂಧಿಕಳಾಗಿದ್ದು, ಆಗಾಗ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಈತ ಸುಮಾರು ಒಂದುವರೆ ತಿಂಗಳುಗಳ ಹಿಂದೆ ಸಾರ್ಯ ನಿವಾಸಿ ಗಿರಿಯಪ್ಪ ಪೂಜಾರಿಯ ಮಗಳು ಸವಿತಾ ಎಂಬಾಕೆಯನ್ನು ನೋಡಲು ಸವಣೂರಿನ ಸುಂದರ ಪೂಜಾರಿ ಎಂಬಾತನನ್ನು ಕರೆದುಕೊಂಡು ಬಂದಿದ್ದನು. ಹುಡುಗಿ ಎತ್ತರವಿರುವುದರಿಂದ ಈ ಸಂಬಂಧ ಮುರಿದುಬಿತ್ತು. ಆ ಸಂದರ್ಭದಲ್ಲಿ ನೆರೆಮನೆಯ ರಾಮಣ್ಣ ಪೂಜಾರಿಯ ಮಗಳು ಭಾಗೀರಥಿ ಎಂಬಾಕೆಯನ್ನು ನೋಡಲು ಕರೆದುಕೊಂಡು ಹೋಗಿದ್ದ. ಹುಡುಗನ ಬಗ್ಗೆ ಭಾಗೀರಥಿಯ ತಮ್ಮನಿಗೆ ಅಸಮಾಧಾನವಾಗಿ ಅವರು ಕೂಡಾ ಮದುವೆ ಸಂಬಂಧವನ್ನು ತಿರಸ್ಕರಿಸಿದ್ದರು. ಪಟ್ಟು ಬಿಡದ ನಾರಾಯಣ ಮತ್ತು ಸುಂದರ ಮನೆಯವರಿಗೆ ಫೋನಾಯಿಸಿ ಹುಡುಗಿಯನ್ನು ಕೊಡುವಂತೆ ಒತ್ತಾಯಿಸುತ್ತಲೇ ಇದ್ದರು. ಇದಕ್ಕೆ ಜಗ್ಗದಿದ್ದಾಗ ಹುಡುಗಿ ಮತ್ತು ಈಕೆಯ ತಮ್ಮ ಅಣ್ಣುವಿಗೆ ನೀವು ಎಲ್ಲಿ ತಪ್ಪಿಸಿದರೂ ಮತ್ತು ಬೇರೆಯವರಿಗೆ ಮದುವೆ ಮಾಡಿದರೂ ಕೊಲೆ ಮಾಡುವುದಾಗಿ ಮನೆಗೆ ಬಂದು ಬೆದರಿಸಿ ಹೋಗಿದ್ದರು. ಇದರಿಂದ ನೊಂದ ಭಾಗೀರಥಿ ತನ್ನ ಗೆಳತಿಯಲ್ಲಿ ವಿಷಯವನ್ನು ತಿಳಿಸಿದ್ದು, ಮನೆಗೆ ತಿಳಿಸದೆ ಆತನೊಂದಿಗೆ ತೆರಳುವಂತೆ ಗೆಳತಿ ಸಲಹೆ ನೀಡಿದ್ದಳು. ದಿನಾಂಕ 18 ರಂದು ಫೋನಾಯಿಸಿದ ಖದೀಮರು ಆಕೆಯನ್ನು ತನ್ನ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿ ನೀನು ಬರುವಾಗ 15 ಸಾವಿರ ಹಣ ಮತ್ತು ಚಿನ್ನಾಭರಣಗಳನ್ನು ಜೊತೆಗೆ ತರುವಂತೆ ತಿಳಿಸಿದ್ದರು. ಫೆಬ್ರವರಿ 21 ನೇ ತಾರೀಕು ಪುತ್ತೂರಿನ ಮಹಾಮಾಯಿ ದೇವಸ್ಥಾನದಲ್ಲಿ ತಾವು ಕಾಯುತ್ತಿರುವುದಾಗಿ ಅಸಾಮಿಗಳು ಭರವಸೆ ನೀಡಿದ್ದರು. 20ನೇ ತಾರೀಕು ಮಲ್ಲಿಕಟ್ಟೆ ರಾಜೀವಿ ಟೀಚರ್‌ರವರ ಮನೆಯಲ್ಲಿ ನಡೆದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರೀರಕ್ಷಾ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಸಭೆಯಲ್ಲಿ ಸಂಘದ ಸದಸ್ಯೆಯಾಗಿರುವ ಭಾಗೀರಥಿ ತನಗೆ 15 ಸಾವಿರ ಹಣದ ಅವಶ್ಯಕತೆಯ ಬಗ್ಗೆ ತಿಳಿಸಿದಳು. ಈ ಬಗ್ಗೆ ಅನುಮಾನಗೊಂಡ ಮಹಿಳಾ ಸದಸ್ಯರು ವ್ಯವಸ್ಥಿತ ಸಂಚೊಂದನ್ನು ರೂಪಿಸಿ ಪುತ್ತೂರಿನ ದೇವಾಲಯದ ಬಳಿ ಮಹಾ ವಂಚಕನೊಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಕೈಯಿಂದ ಒಂದು ಕರಿಮಣಿ ಸರ, ಒಂದು ಜೊತೆ ಕಾಲುಂಗುರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ದಲ್ಲಾಳಿ ನಾರಾಯಣನಿಗೆ ಶೋಧ ಆರಂಭಿಸಿದ್ದಾರೆ.
ಯಾರಿವರು-ಮಹಾವಂಚಕರು?
ಸುಂದರ ಪೂಜಾರಿ ಓರ್ವ ಮಹಾ ವಂಚಕನಾಗಿದ್ದು, ಈತನನ್ನು ಜೊತೆಯಾಗಿರಿಸಿಕೊಂಡು ವಂಚನೆ ನಡೆಸುತ್ತಿರುವ ನಾರಾಯಣ ರೈ ಹಲವಾರು ಹೆಣ್ಮಕ್ಕಳ ಬದುಕನ್ನು ಹಿಂಡಿದ ದುರುಳ ಎಂದು ತಿಳಿದು ಬಂದಿದೆ. ಹಲವಾರು ವರ್ಷಗಳ ಹಿಂದೆ ಜಿಲ್ಲೆಯಲ್ಲಿಯೇ ಕುಖ್ಯಾತಿ ಪಡೆದ ಬಹುಪತ್ನಿ ವಲ್ಲಭರ ತಂಡದಲ್ಲಿ ನಾರಾಯಣ ರೈ ಆರೋಪಿಯಾಗಿ ಜೈಲು ಸೇರಿದ್ದ . ಎರಡು ವರ್ಷಗಳ ಹಿಂದೆ ಗಿರಿಯಪ್ಪ ಪೂಜಾರಿಯ ಮಗಳು ಶಕೀಲಾ ಎಂಬಾಕೆ ಮನೆಯಿಂದ ನಾಪತ್ತೆಯಾಗಿದ್ದು, ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಈವರೆಗೆ ಹುಡುಗಿ ಪತ್ತೆಯಾಗಿಲ್ಲವಾಗಿದ್ದು, ದಲ್ಲಾಳಿ ನಾರಾಯಣ ರೈಯೇ ಆಕೆಯನ್ನು ಎಗರಿಸಿರುವುದಾಗಿ ಆಕೆಯ ಅಕ್ಕ ಸವಿತಾ ಠಾಣೆಯಲ್ಲಿ ಮೌಖಿಕ ದೂರು ನೀಡಿದ್ದಾರೆ. ಸುಂದರ ಹಲವಾರು ವರ್ಷಗಳ ಹಿಂದೆ ಸವಣೂರಿನಲ್ಲಿ ಸದಾಶಿವ ಆಳ್ವ ಎಂಬವರ ಗೂಡಂಗಡಿಗಳಿಗೆ ಕನ್ನ ಹಾಕಿದ ಪ್ರಕರಣದಲ್ಲಿ ಮತ್ತು ಕುಂತೂರಿನಲ್ಲಿ ತಾಮ್ರದ ಹಂಡೆ ಕದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ಹಲವಾರು ಬಾರಿ ತೋಟಗಳಿಂದ ಅಡಿಕೆ ಕದ್ದು ಸಾರ್ವಜನಿಕರ ಒದೆ ತಿಂದಿದ್ದನು. ಉಪ್ಪಿನಂಗಡಿಯಲ್ಲಿ ಪಿಂಡ ಬಿಡಲು ಬಂದ ಕುಟುಂಬವೊಂದರ ನಗ ನಾಣ್ಯವನ್ನು ಎಗರಿಸಿ ಸಿಕ್ಕಿಬಿದ್ದು ಮೈಪೂರ್ತಿ ಒದೆತಿಂದರೂ ಕಳ್ಳತನದ ಚಾಳಿಯನ್ನು ಬಿಟ್ಟಿಲ್ಲ ಎಂದು ತಿಳಿದು ಬಂದಿದೆ. ಸುಮಾರು 18 ವರ್ಷಗಳ ಹಿಂದೆ ಈಶ್ವರ ಮಂಗಳದ ಸಾಂತ್ಯ ಎಂಬಲ್ಲಿಂದ ಯಶೋದಾ ಎಂಬಾಕೆಯನ್ನು ಮದುವೆಯಾಗಿ ಎರಡು ಮಕ್ಕಳನ್ನು ಕರುಣಿಸಿ ಪತ್ನಿ ಮಕ್ಕಳನ್ನು ಬೆದರಿಸಿ ತೊರೆದುಬಿಟ್ಟಿರುವುದಾಗಿ ತಿಳಿದುಬಂದಿದೆ. ಇವರಿಬ್ಬರು ಜೊತೆಯಾಗಿ ಬಡ ಕುಟುಂಬದ ಅಮಾಯಕ ಹೆಣ್ಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿ ನಗನಾಣ್ಯ ಮತ್ತು ಸುಖವನ್ನು ಜೊತೆಯಾಗಿ ಅನುಭವಿ ಸುತ್ತಿರುವುದು ಕೂಡಾ ಬೆಳಕಿಗೆ ಬಂದಿದೆ. ನಾರಾಯಣ ರೈ ಜಿಲ್ಲೆಯ ಪ್ರಸಿದ್ಧ ಜನಪ್ರತಿನಿಧಿಯೊಬ್ಬರ ಸಹೋದರನ ಮನೆಯಲ್ಲಿ ಹಲವಾರು ಸಮಯಗಳಿಂದ ಬೀಡುಬಿಟ್ಟಿದ್ದು, ಇದೀಗ ಈತನ ವಂಚನಾ ಪ್ರಕರಣ ಬಯಲಾಗುತ್ತಲೇ ಅಚ್ಚರಿಗೊಂಡಿದ್ದಾರೆ. 20 ಕ್ಕೂ ಅಧಿಕ ಬಡ ಹೆಣ್ಮಕ್ಕಳನ್ನು ತನ್ನ ಮೋಹದ ಪಾಶಕ್ಕೆ ಬೀಳಿಸಿ ಸುಖ ಪಡೆದು ಕೊಲೆ ಮಾಡಿ ನ್ಯಾಯಾಂಗ ಬಂಧನದಲ್ಲಿರುವ ಮೋಹನ್ ಕುಮಾರನ ದುಷ್ಕತ್ಯಗಳಂತೆ ಇವರಿಬ್ಬರ ವಂಚನೆಗಳು ಕಾಣುತ್ತಿದ್ದು, ಪುತ್ತೂರು ಠಾಣಾ ಇನ್ಸ್‌ಪೆಕ್ಟರ್‌ರವರ ಕಾಳಜಿಯಿಂದ ಬಹುದೊಡ್ಡ ವಂಚನಾ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹಲವಾರು ಬಡ ಹೆಣ್ಮಕ್ಕಳ ಬದುಕು ಉಳಿದುಕೊಂಡಿದೆ. ಸ್ವ ಸಹಾಯ ಸಂಘದ ಮಹಿಳೆಯರ ಚಾಣಾಕ್ಷತನಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
source: jayakirana
No comments:
Post a Comment