‘ವೈಯಕ್ತಿಕ ಸಂಘರ್ಷ ಬದಿಗಿರಿಸಿ’
ಪ್ರತಿಯೊಬ್ಬ ನಾಯಕರೂ ಈ ಸಂದೇಶವನ್ನು ಪರಿಪಾಲಿಸುವ ಮೂಲಕ ಪಕ್ಷವನ್ನು ದೇಶದಾದ್ಯಂತ ಪುನಶ್ಚೇತನಗೊಳಿಸಬೇಕಾಗಿದೆ ಎಂದು ಗಡ್ಕರಿ ಕರೆ ಕೊಟ್ಟಿದ್ದಾರೆ.
ಇಂದೋರ್: ಮೊದಲು ದೇಶ. ನಂತರ ಪಕ್ಷ. ಆಮೇಲೆ ನಾನು.
ಇದು ಬುಧವಾರ ಇಂದೋರ್‌ನಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷ ನಿತಿನ್ ಗಡ್ಕರಿ ನೀಡಿದ ಸಂದೇಶ.
ಪ್ರತಿಯೊಬ್ಬ ನಾಯಕರೂ ಈ ಸಂದೇಶವನ್ನು ಪರಿಪಾಲಿಸುವ ಮೂಲಕ ಪಕ್ಷವನ್ನು ದೇಶದಾದ್ಯಂತ ಪುನಶ್ಚೇತನಗೊಳಿಸಬೇಕಾಗಿದೆ ಎಂದು ಗಡ್ಕರಿ ಕರೆ ಕೊಟ್ಟಿದ್ದಾರೆ.
ಬುಧವಾರ ಇಲ್ಲಿ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಧ್ಯಕ್ಷರು ಈ ಸಂದೇಶ ನೀಡಿರುವುದಾಗಿ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ನಂತರ ಸುದ್ದಿಗಾರರಿಗೆ ವಿವರ ನೀಡಿದರು.
ಪ್ರತಿಯೊಬ್ಬರೂ ವಿಶಾಲ ಹೃದಯದಿಂದ ವರ್ತಿಸುವಂತೆ ಗಡ್ಕರಿ ಸಲಹೆ ನೀಡಿದ್ದಾರೆ. ಪಕ್ಷದ ವಿವಿಧ ವರ್ಗಗಳಲ್ಲಿ ನಡೆಯುತ್ತಿರುವ ಶೀತಲ ಯುದ್ಧದ ಹಿನ್ನೆಲೆಯಲ್ಲಿ ಅವರು ಈ ಮನವಿ ಮಾಡಿಕೊಂಡಿದ್ದು, ವ್ಯಕ್ತಿತ್ವ ಆಧಾರಿತ ರಾಜಕಾರಣ ನಡೆಸುವಂತೆ ಕರೆ ಇತ್ತಿದ್ದಾರೆ ಎಂದು ಹೇಳಿದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾರೂ ಕೂಡಾ ಪೂರ್ವಗ್ರಹ ಪೀಡಿತ ಮನೋಭಾವ ಹೊಂದಬಾರದು. ಆಯಾ ಕ್ಷೇತ್ರದಲ್ಲಿ ಯಾರ್ಯಾರು ಅತ್ಯಂತ ಜನಪ್ರಿಯ ಎನಿಸಿರುತ್ತಾರೊ ಅಂಥವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಅವರು ತಿಳಿಸಿದ್ದಾಗಿ ಪ್ರಸಾದ್ ಹೇಳಿದರು.
3300 ಟೆಂಟ್: ದಲಿತ ವರ್ಗದ ಶಾಸಕರು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಸಮಾವೇಶ ನಡೆಯುತ್ತಿದೆ. ಈ ಪ್ರದೇಶದಲ್ಲಿ ಸುಮಾರು 3300 ಟೆಂಟ್‌ಗಳನ್ನು ಹಾಕಲಾಗಿದ್ದು ಇವುಗಳಲ್ಲಿ ಪಕ್ಷದ ಎಲ್ಲ ವರ್ಗದ ನಾಯಕರು, ಕಾರ್ಯಕರ್ತರು ವಾಸ್ತವ್ಯ ಹೂಡಿದ್ದಾರೆ.
ಗಡ್ಕರಿ ಅವರು ಅಧ್ಯಕ್ಷರಾಗಿ ತಮ್ಮ ಮುಂದಿನ ಮೂರು ವರ್ಷಗಳ ಕಾಲ ಪಕ್ಷವನ್ನು ಕಟ್ಟಬೇಕಾಗಿದೆ. ಈ ಅವಧಿಯಲ್ಲಿ ಅವರು ತುಳಿತಕ್ಕೊಳಗಾದವರು, ಹಿಂದುಳಿದವರು ಹಾಗೂ ದಲಿತರನ್ನು ಪಕ್ಷಕ್ಕೆ ಸೆಳೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
ಅದಕ್ಕೆಂದೇ ಅವರು ‘ಅಂತ್ಯೋದಯ’ ಹೆಸರಿನ ಯೋಜನೆಗೆ ಚಾಲನೆ ನೀಡುವ ಉದ್ದೇಶವನ್ನೂ ಇದೇ ಸಮಾವೇಶದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment