
ಬೆಂಗಳೂರು, ಮಾ.೨೫: ದೇಶದಲ್ಲಿ ಅನ್ಯಾಯವಾಗುವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಎಲ್ಲ ಸಮುದಾಯಗಳೂ ಒಂದೆ ವೇದಿಕೆಯಲ್ಲಿ ಸಂಘಟಿತರಾಗಿ ಹೋರಾಟ ನಡೆಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಎಸ್.ಎಂ.ಮುಶ್ರಿಫ್ ಮನವಿ ಮಾಡಿದ್ದಾರೆ.
ನಗರದ ಎನ್‌ಜಿಓ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸ್ತುತಿ ಪಬ್ಲಿಕೇಷನ್ಸ್ ಅಂಡ್ ಇನ್‌ಫರ್‌ಮೇಷನ್ ಟ್ರಸ್ಟ್‌ನ ಕನ್ನಡ ಅನುವಾದಿತ ‘ಕರ್ಕರೆಯನ್ನು ಕೊಂದವರು ಯಾರು? ಭಾರತದಲ್ಲಿ ಭಯೋತ್ಪಾದನೆಯ ನೈಜ ಮುಖ’ ಹಾಗೂ ‘ಪತ್ರಕರ್ತನ ಜೈಲಿನ ದಿನಗಳು’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಹಿಂದು, ಮುಸ್ಲಿಂ ಸೇರಿದಂತೆ ಯಾವುದೆ ಸಮುದಾಯಕ್ಕೆ ಅನ್ಯಾಯವಾದರೂ, ಅದರ ವಿರುದ್ಧ ಎಲ್ಲ ಸಮುದಾಯಗಳು ಹೋರಾಟ ನಡೆಸಬೇಕು. ಇದನ್ನು ರಾಷ್ಟ್ರೀಯ ರಾಷ್ಟ್ರೀಯ ಸಮಸ್ಯೆಯಾಗಿ ಸ್ವೀಕರಿಸುವಂತಾಗಬೇಕು. ಇದಾದಾಗ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ಇದನ್ನು ಎಲ್ಲ ಸಮುದಾಯಗಳು ಮನದಟ್ಟು ಮಾಡಿಕೊಳ್ಳಬೇಕು ಎಂದು ಅವರು ಕರೆನೀಡಿದರು.
‘ಕರ್ಕರೆಯನ್ನು ಕೊಂದವರು ಯಾರು?’ ಕೃತಿಯನ್ನು ಆಂಗ್ಲ ಭಾಷೆಯಲ್ಲಿ ಸ್ವತಃ ನಾನೆ ಬರೆದಿದ್ದೇನೆ. ಇದು ಸಂಶೋಧನ ಕೃತಿಯಾಗಿದೆ. ಮುಂಬೈ ಮೇಲಿನ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹಾಗೂ ನಿಷ್ಠಾವಂತ ಅಧಿಕಾರಿಯಾಗಿದ್ದ ಹೇಮಂತ ಕರ್ಕರೆಯನ್ನು ಹತ್ಯೆ ಮಾಡಲಾಯಿತು. ಈ ಹತ್ಯೆಯ ಹಿಂದೆ ಬ್ರಾಹ್ಮಣವಾದಿಗಳ ಕೈವಾಡವಿರುವ ಸತ್ಯಸಂಗತಿಗಳು ಸಂಶೋಧನೆಯಿಂದ ಸಭೀತಾಯಿತು. ಈ ಹತ್ಯೆ ಪ್ರಕರಣವನ್ನೆ ಮೂಲವಾಗಿರಿಸಿಕೊಂಡು ಭಾರತದಲ್ಲಿರುವ ಭಯೋತ್ಪಾದಕತೆಯ ನೈಜ ಮುಖವನ್ನು ಬಹಿರಂಗಪಡಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಹಿಂದೆ ಸಂಭವಿಸುತ್ತಿದ್ದ ಗಲಭೆಗಳು ಹಿಂದು, ಮುಸ್ಲಿಂ ಸಮುದಾಯಗಳ ನಡುವಿನ ತಪ್ಪು ತಿಳುವಳಿಕೆಗಳಾಗಲಿ ಅಥವಾ ಹಠಾತ್ತಾದ ಆಕಸ್ಮಿಕ ಕಾರಣಗಳಿಗಾಗಲಿ ಇರಲಿಲ್ಲ ಎಂಬುದು ಇತಿಹಾಸದ ಪುಟಗಳನ್ನು ತಿರುಚಿ ನೋಡಿದಾಗ ತಿಳಿಯಿತು. ನಂತರದ ದಿನಗಳಲ್ಲಿ ಸಮಾಜದಲ್ಲಿ ಕೋಮುವೈಷಮ್ಯ ಹರಡುವುದಕ್ಕಾಗಿ ಬ್ರಾಹ್ಮಣವಾದಿ ಸಂಘಟನೆಗಳು ‘ಹಿಂದು ಸಂಘಟನೆ’ಗಳ ಮುಖವಾಡ ತೊಟ್ಟು ನಡೆಸುತ್ತಿರುವ ಪೂರ್ವನಿಯೋಜಿತ ಕೃತ್ಯಗಳು ಎಂಬುದು ಬಹಿರಂಗವಾಯಿತು.
೧೮೯೩ರ ಪ್ರಥಮ ಪೂರ್ವ ಯೋಜಿತ ಹಿಂದೂ, ಮುಸ್ಲಿಂ ದಂಗೆಯಿಂದ ಆರಂಭಿಸಿ ೨೦೦೮ರಲ್ಲಿ ನಡೆದ ಮುಂಬೈ ದಾಳಿಯವರೆಗಿನ ಬೆಳವಣಿಗೆಗಳು ಹುಟ್ಟುಹಾಕಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಂದರ್ಭದಲ್ಲಿ ಅನೇಕ ಸತ್ಯಸಂಗತಿಗಳು ತಿಳಿಯಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಮಧ್ಯಯುಗ ಹಾಗೂ ಅದರ ನಂತರದ ಕಾಲಾವಧಿಯಲ್ಲಿ ಕೂಡ ಬ್ರಾಹ್ಮಣರ ಮತ್ತು ಮುಸ್ಲಿಂ ಸಮುದಾಯದ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಬ್ರಾಹ್ಮಣವಾದಿಗಳು ಉದ್ದೇಶಪೂರ್ವಕವಾಗಿ ಮುಸ್ಲಿಂ ವಿರೋಧಿ ವಾತಾವರಣವನ್ನು ಸೃಷ್ಠಿಸಲು ೧೯೮೩ರಿಂದ ಹಿಂದೂ, ಮುಸ್ಲಿಂ ಗಲಭೆಗಳನ್ನು ಆಯೋಜಿಸಿದರು.
ಆರ್‌ಎಸ್‌ಎಸ್ ಬ್ರಾಹ್ಮಣವಾದಿ ಸಂಘಟನೆಗಳು ಮುಸ್ಲಿಂ ವಿರೋಧಿ ವಿಷಯವನ್ನು ಬಹಿರಂಗವಾಗಿ ದೇಶದುದ್ದಗಲಕ್ಕೂ ಹರಡುತ್ತಾ ನಡೆಸುತ್ತಿದ್ದ ಕುಟಿಲ ಕೋಮುವಾದಿ ಚಟುವಟಿಕೆಗಳನ್ನು ದೇಶದ ಪ್ರಮುಖ ಬೇಹುಗಾರಿಕಾ ಸಂಸ್ಥೆಯಾದ ಗುಪ್ತದಳ ಸರಕಾರದಿಂದ ಮುಚ್ಚಿಟ್ಟಿತು. ಅಲ್ಲದೆ ೬೦ವರ್ಷಕ್ಕೂ ಅಧಿಕ ಕಾಲ ದೇಶದೆಲ್ಲೆಡೆ ಕೋಮು ಗಲಭೆಗಳು ಸಂಭವಿಸುತ್ತಿದ್ದಾಗ ಗುಪ್ತದಳದಲ್ಲಿದ್ದ ಬ್ರಾಹ್ಮಣವಾದಿಗಳು ವರದಿಯನ್ನು ಸೂಕ್ತ ಸಮಯಕ್ಕೆ ಸರಕಾರಕ್ಕೆ ನೀಡಲಿಲ್ಲ.
ಕೆಲವು ಬ್ರಾಹ್ಮಣವಾದಿ ಉಗ್ರರ ತಂಡಗಳು ಭಯೋತ್ಪಾದಕ ಕೃತ್ಯಗಳಲ್ಲಿ ತನ್ನ ಸದಸ್ಯರಿಗೆ ತರಬೇತಿ ನೀಡುತ್ತಾ, ಶಸ್ತ್ರಾಸ್ತ್ರ, ಮದ್ದುಗುಂಡು, ಸ್ಪೋಟಕಗಳನ್ನು ಸಂಗ್ರಹಿಸುತ್ತಾ, ಬಾಂಬುಗಳನ್ನು ತಯಾರಿಸಿ, ಸ್ಪೋಟಕ ಕೃತ್ಯಗಳನ್ನೆಸಗಲು ಪೂರ್ವಸಿದ್ಧತೆ ಮಾಡಿಕೊಳ್ಳುವ ಕುರಿತು ಮಾಹಿತಿಯನ್ನು ಗುಪ್ತದಳ ಸರಕಾರಕ್ಕೆ ನೀಡಲಿಲ್ಲ.
ಮಹಾರಾಷ್ಟ್ರದ ನಾಂದೇಳ್‌ನಲ್ಲಿ ಆರ್‌ಎಸ್‌ಎಸ್‌ನವರ ಬಾಂಬ್ ತಯಾರಿಕಾ ಘಟಕದಲ್ಲಿ ಸ್ಫೋಟವಾಯಿತು. ಈ ಕುರಿತು ೨೦೦೮ನೆ ಸಾಲಿನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿ ನೇಮಕಗೊಂಡ ಹೇಮಂತ ಕರ್ಕರೆ ತನಿಖೆ ನಡೆಸಿದರು. ಈ ತನಿಖೆ ನಡೆಸುವ ಸಂದರ್ಭದಲ್ಲಿ ಮಾಲೆಗಾಂವ್, ಸಂಜೋತ್ ಎಕ್ಸ್‌ಪ್ರೆಸ್, ಹೈದರಾಬಾದ್‌ನ ಮಕ್ಕಾ-ಮದಿನಾ, ಜೈಪುರ, ದಿಲ್ಲಿ ಮುಂತಾದವೆಡೆ ನಡೆದ ಸ್ಪೋಟದಲ್ಲಿ ಆರ್‌ಎಸ್‌ಎಸ್ ಕೈವಾಡವಿರುವುದೆ ಎಂಬ ಸತ್ಯವನ್ನು ಬಹಿರಂಗಪಡಿಸಿದರು.
ಇದನ್ನು ಸಹಿಸದ ಬ್ರಾಹ್ಮಣವಾದಿಗಳು ಕರ್ಕರೆಯನ್ನು ಹತ್ಯೆ ಮಾಡುವ ಸಂಚು ರೂಪಿಸಿ, ಮುಂಬೈ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಹತ್ಯೆ ಮಾಡಿದರು. ಈ ಬ್ರಾಹ್ಮಣವಾದಿಗಳು ಸಮಾಜದ ಸ್ವಾಸ್ಥ ಹಾಳು ಮಾಡಲು ಹೊರಟಿದ್ದಾರೆ ಎಂದು ಅವರು ಕಿಡಿಕಾರಿದರು.
ದೇಶದಲ್ಲಿ ಭಯೋತ್ಪಾದನೆ ಎಂಬ ಶಬ್ದವನ್ನು ಹುಟ್ಟುಹಾಕಿದವರೆ ಬ್ರಾಹ್ಮಣವಾದಿಗಳು. ಇವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು, ನಡೆಸುತ್ತಿರುವ ಕೃತ್ಯಗಳಿಗೆ ತಡೆಯಬೇಕಾದ ಅವಶ್ಯಕತೆ ಇದೆ ಎಂದು ಮುಶ್ರಿಫ್ ಅಭಿಪ್ರಾಯಪಟ್ಟರು.
ಕರ್ಕರೆಯನ್ನು ಕೊಂದವರು ಯಾರು? ಕೃತಿಯ ಕುರಿತು ಮಾನವ ಹಕ್ಕು ಹೋರಾಟಗಾರ ಶಿವಸುಂದರ್ ಮಾತನಾಡುವ ಸಂದರ್ಭದಲ್ಲಿ, ಬ್ರಾಹ್ಮಣವಾದಿಗಳನ್ನು ದೇಶದಿಂದ ಓಡಿಸದ ಹೊರತು, ಶಾಂತಿ, ನೆಮ್ಮದಿ, ಸೌಹಾರ್ಧ ವಾತಾವರಣ ನಿರ್ಮಾಣವಾಗದು ಎಂದು ಪ್ರತಿಪಾಧಿಸಿದರು.
ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಸರಕಾರ ಆಳುತ್ತಿರುವ ಈ ಸಂದರ್ಭದಲ್ಲಿ ಕರ್ಕರೆಯನ್ನು ಮೂಲವಾಗಿರಿಸಿಕೊಂಡು ರಚಿಸಿರುವ ಭಯೋತ್ಪಾದನೆಯ ನೈಜ ಮುಖ ಕೃತಿ ಕನ್ನಡಕ್ಕೆ ಜರೂರಾಗಿ ಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಸನತ್‌ಕುಮಾರ್ ಬೆಳಗಲಿ ಹಾಗೂ ವಿ.ಟಿ.ರಾಜಶೇಖರ್ ‘ಪತ್ರಕರ್ತನ ಜೈಲಿನ ದಿನಗಳು’ ಕೃತಿಯ ಕುರಿತು ಮಾತನಾಡಿದರು.
ಸ್ತುತಿ ಪಬ್ಲಿಕೇಷನ್ಸ್‌ನ ಅಧ್ಯಕ್ಷ ಕೆ.ಎಂ.ಶರೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬರಹಗಾರ ಹಾಗೂ ಮಾನವ ಹಕ್ಕು ಹೋರಾಟಗಾರ ಸುರೇಶ್ ಭಟ್ ಬಾಕ್ರಬೈಲು, ನಗರಿ ಬಾಬಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ, ಕೋಮು ಸೌಹಾರ್ಧ ವೇದಿಕೆಯ ಅಧ್ಯಕ್ಷ ಕೆ.ಎಲ್.ಅಶೋಕ್ ಮುಂತಾದವರು ಉಪಸ್ಥಿತರಿದ್ದರು.
No comments:
Post a Comment