
wd
ಅಹಮದಾಬಾದ್:ಯೂಸುಫ್ ಪಠಾಣ್ (ಅಜೇಯ 73, 34 ಎಸೆತ) ಬಾರಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡವು ಇಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಶುಕ್ರವಾರದ ಪಂದ್ಯವನ್ನು ಎಂಟು ವಿಕೆಟುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಇದರೊಂದಿಗೆ ಟೂರ್ನಮೆಂಟ್‌ನಲ್ಲಿ ಸತತ ಮೂರು ಸೋಲಿನ ನಂತರ ಪುಟಿದೆದ್ದಿರುವ ಶೇನ್ ವಾರ್ನ್ ಪಡೆ ಹ್ಯಾಟ್ರಿಕ್ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಆಡಿರುವ ಆರು ಪಂದ್ಯಗಳಲ್ಲಿ ರಾಜಸ್ತಾನ ಆರು ಅಂಕಗಳನ್ನು ಕಲೆ ಹಾಕಿದೆ. ಮತ್ತೊಂದೆಡೆ ರಾಜಸ್ತಾನ ವಿರುದ್ಧ ಮುಗ್ಗರಿಸಿದ ಆಡಂ ಗಿಲ್‌ಕ್ರಿಸ್ಟ್ ಬಳಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗಿಲ್ಲಿ ಪಡೆ ನಿಗದಿತ 20 ಓವರುಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 148 ರನ್ನುಗಳ ಸವಾಲಿನ ಮೊತ್ತ ಪೇರಿಸಿತ್ತು. ಆದರೆ ಯೂಸುಫ್ ಪಠಾಣ್ ಮತ್ತು ಮೈಕಲ್ ಲಾಂಬ್ (45) ಬಾರಿಸಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ ರಾಜಸ್ತಾನ ತಂಡ 151 ರನ್ ಗುರಿಯನ್ನು 15.4 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪಿತು.
ಕೇವಲ 34 ಎಸೆತಗಳನ್ನು ಎದುರಿಸಿದ ಯೂಸುಫ್ 73 ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಸ್ಫೋಟಕ ಬ್ಯಾಟಿಂಗ್‌ನಲ್ಲಿ ಎರಡು ಬೌಂಡರಿ ಹಾಗೂ ಎಂಟು ಭರ್ಜರಿ ಸಿಕ್ಸರುಗಳು ಸೇರಿದ್ದವು. ಯೂಸುಫ್ ರೀತಿಯಲ್ಲಿಯೇ ಬ್ಯಾಟ್ ಬೀಸಿ ಲಾಂಬ್ 32 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ 45 ರನ್ ಗಳಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದರು.
ಈ ಮೊದಲು ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರೋಹಿತ್ ಶರ್ಮಾ ನೆರವಿನಿಂದ ಡೆಕ್ಕನ್ ತಂಡ 148 ರನ್ನುಗಳ ಸವಾಲಿನ ಮೊತ್ತ ಪೇರಿಸಿತ್ತು. 35 ಎಸೆತಗಳನ್ನು ಎದುರಿಸಿದ ರೋಹಿತ್ ಎರಡು ಬೌಂಡರಿ ಹಾಗೂ ಮೂರು ಸಿಕ್ಸರುಗಳ ನೆರವಿನಿಂದ 49 ರನ್ ಗಳಿಸಿದರು. ಈ ಮೂಲಕ ಟ್ವೆಂಟಿ-20 ವಿಶ್ವಕಪ್‌ಗಾಗಿನ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರುವ ರೋಹಿತ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಉಳಿದಂತೆ ಹರ್ಷಲ್ ಗಿಬ್ಸ್ 25 ಹಾಗೂ ಆಂಡ್ರ್ಯೂ ಸೈಮಂಡ್ಸ್ 22 ರನ್ ಗಳಿಸಿದರು. ಬಿಗು ದಾಳಿ ಸಂಘಟಿಸಿದ್ದ ರಾಜಸ್ತಾನ ವೇಗಿ ಶಾನ್ ಟೇಟ್ ಮೂರು ಹಾಗೂ ಎಸ್. ನರ್ವಾಲ್ ಎರಡು ವಿಕೆಟ್ ಪಡೆದು ಮಿಂಚಿದರು.
ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಯೂಸುಫ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
No comments:
Post a Comment