VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ಪತ್ರಿಕಾ ಕಚೇರಿಗಳ ಮೇಲಿನ ದಾಳಿ ಹಿನ್ನೆಲೆ: ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿ

ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಪತ್ರಿಕಾ ಕಚೇರಿಗಳ ಮೇಲೆ ನಡೆದ ದಾಳಿಯ ಪ್ರಮುಖ ರುವಾರಿ ವಿದೇಶಕ್ಕೆ ಪರಾರಿಯಾಗಿದ್ದು, ಪೊಲೀಸರು ಆತನ ಸೆರೆಗಾಗಿ ಬಲೆ ಬೀಸಿದ್ದಾರೆ.

ಮಾರ್ಚ್ ಎರಡರಂದು ರಾತ್ರಿ `ಜಯಕಿರಣ ಹಾಗೂ `ಕನ್ನಡಪ್ರಭ ಪತ್ರಿಕಾ ಕಚೇರಿಗಳಿಗೆ ನುಗ್ಗಿದ್ದ ಹೆಲ್ಮೆಟ್ ಮತ್ತು ಮುಸುಕುಧಾರಿ ದುಷ್ಕರ್ಮಿಗಳು ಕಚೇರಿಯ ಗಾಜು, ಕಂಪ್ಯೂಟರ್, ಪ್ರಿಂಟರ್ಗಳನ್ನು ಪುಡಿಗಟ್ಟಿ, ದಾಂಧಲೆ ನಡೆಸಿ ಪೆಟ್ರೊಲ್ ಬಾಂಬ್ ಎಸೆದಿದ್ದರಲ್ಲದೆ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಒಡ್ಡಿದ್ದರು.

ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದ ಪೊಲೀಸ್ ಇಲಾಖೆ ಸುಳಿವು ನೀಡಿದವರಿಗೆ ರೂ.10 ಸಾವಿರ ಬಹುಮಾನವನ್ನೂ ಘೋಷಿಸಿತ್ತು. ದಾಳಿ ನಡೆದ 14 ದಿನಗಳವರೆಗೆ ಆರೋಪಿಗಳ ಬಂಧನಕ್ಕಾಗಿ ಹರಸಾಹಸ ಪಟ್ಟಿದ್ದ ಪೊಲೀಸರು ನಿನ್ನೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಗಾಗಿ ಎರಡು ತಂಡ

ಜಯಕಿರಣ ಹಾಗೂ ಕನ್ನಡಪ್ರಭ ಕಚೇರಿ ಮೇಲೆ ದಾಳಿ ನಡೆಸಲು ಎರಡು ತಂಡಗಳನ್ನು ರಚಿಸಲಾಗಿತ್ತೆಂದು ಬಂಧಿತ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಾನಿದ್ದ ತಂಡವನ್ನು ಹೊರತುಪಡಿಸಿ ಇನ್ನೊಂದು ತಂಡದ ಸದಸ್ಯರ ಕಾರ್ಯಚಟುವಟಿಕೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವೆಂದು ತಿಳಿಸಿದ್ದಾನೆನ್ನಲಾಗಿದೆ.

ಕನ್ನಡಪ್ರಭ ಪತ್ರಿಕೆಯಲ್ಲಿ ತಸ್ಲಿಮಾ ನಸ್ರೀನ್ ಎಂಬ ಲೇಖನ ಬರೆದಿದ್ದರೆನ್ನಲಾದ ಬಳಿಕ ದಾಳಿಗೆ ಸಂಚು ನಡೆಸಲಾಗಿತ್ತು. ಈ ಸಂಚನ್ನು ದಾಳಿ ನಡೆದ ದಿನ ಬೆಳಿಗ್ಗೆ ಬೆಂಗರೆಯಲ್ಲಿ ರೂಪಿಸಲಾಗಿದ್ದು, ಕನ್ನಡಪ್ರಭ ಕಚೇರಿಯ ದಾಳಿಗಾಗಿ ಎಂಟು ಮಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು ಅವರ ಪೈಕಿ ಉಬೇದುಲ್ಲಾನಿಗೆ ಕಚೇರಿಯ ಹೊರಗಡೆ ಪಹರೆದಾರನಾಗಿಯೂ, ಇಬ್ಬರು ಒಳಗಡೆ ಪಹರೆಗಾರರಾಗಿ ಹಾಗೂ ಇತರರು ದಾಳಿ ನಡೆಸುವ ಹೊಣೆ ಹೊತ್ತಿದ್ದರು ಎಂದು ಬಂಧಿತ ಆರೋಪಿ ತಿಳಿಸಿದ್ದಾನೆ. ಜಯಕಿರಣ ಕಚೇರಿ ಮೇಲೆ ದಾಳಿಗೂ ಕನಿಷ್ಠ ಎಂಟು ಎಂಟು ಮಂದಿಯ ತಂಡ ರಚಿಸಲಾಗಿದ್ದು ಅದರಲ್ಲಿದ್ದ ಸದಸ್ಯರ ಹೆಸರು ಹಾಗೂ ದಾಳಿಗೆ ಕಾರಣ ತನಗೆ ತಿಳಿದಿಲ್ಲವೆಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆನ್ನಲಾಗಿದೆ. ಬಂಧಿತ ಆರೋಪಿ ಪಿ.ಎಫ್.ಐ ಸಂಘಟನೆಯ ಸಕ್ರಿಯ ಕಾರ್ಯಕರ್ತನೆಂದು ಹೇಳಲಾಗಿದ್ದು ಎರಡು ವರ್ಷಗಳ ಹಿಂದೆ ಬಿ.ಸಿ.ರೋಡಿನಲ್ಲಿ ನಡೆದ ಹಲ್ಲೆ ಹಾಗೂ ಬಳಿಕ ನಡೆದ ಗಲಭೆಯಲ್ಲಿ ಭಾಗವಹಿಸಿದ ಆರೋಪ ಈತನ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸಿದ ಓರ್ವನನ್ನು ಬಂಧಿಸಿರುವ ಬಂದರು ಪೊಲೀಸರು ಪ್ರಮುಖ ಏಳು ಮಂದಿ ಆರೋಪಿಗಳಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಪ್ರಮುಖ ರುವಾರಿ ಮೂಲ್ಕಿಯ ಫಿರೋಜ್ ಎನ್ನುವಾತ ವಿದೇಶಕ್ಕೆ ಪರಾರಿಯಾಗಿದ್ದು ಈತನ ಬಂಧನಕ್ಕೂ ಪ್ರಯತ್ನ ಆರಂಭಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 143, 117, 148, 448, 436, 427, 506, 149 ಮತ್ತು 2(ಎ) (ಬಿ)ನಡಿ ಕೇಸು ದಾಖಲಿಸಿ ಕೊಳ್ಳಲಾಗಿದೆ.

ಅಂದೇ ಸಿಕ್ಕಿಬಿದ್ದು ತಪ್ಪಿಸಿಕೊಂಡಿದ್ದ ಆರೋಪಿ

ಕನ್ನಡಪ್ರಭ ಕಚೇರಿಯ ದಾಳಿಗೆ ಸಂಬಂಧಿಸಿ ಬಂದರು ಹಾಗೂ ಜಯಕಿರಣ ಪತ್ರಿಕೆಯ ದಾಳಿಯ ಪ್ರಕರಣವನ್ನು ಉರ್ವ ಠಾಣೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಕನ್ನಡಪ್ರಭ ದಾಳಿ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದ ಆರೋಪಿಯೋರ್ವನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ವಳಚ್ಚಿಲ್ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಉಬೇದುಲ್ಲಾ (29) ಎಂಬಾತನೇ ಬಂಧಿತ ಆರೋಪಿ. ಈತ ಪಾವೂರಿ ನಲ್ಲಿ ಇಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದಾನೆ. ಕನ್ನಡಪ್ರಭ ಕಚೇರಿಗೆ ದಾಳಿ ನಡೆಸುವ ದುಷ್ಕರ್ಮಿಗಳ ತಂಡ ಸೇರಲು ಕಾಲ್ನಡಿಗೆಯಲ್ಲೇ ಬಂದಿದ್ದ ಈತ ಕೃತ್ಯ ನಡೆದ ಬಳಿಕ ಭಯಗೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿ ವೆಂಕಟರಮಣ ದೇವಸ್ಥಾನ ರಸ್ತೆಯಾಗಿ ಓಡಿದ್ದಾನೆ.

ಈ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಈತನನ್ನು ನಿಲ್ಲಿಸಿ ವಿಚಾರಿಸಿದಾಗ ತನ್ನ ಹೆಸರು ಮತ್ತು ಮನೆಯ ವಿಳಾಸ ಹೇಳಿ ಅವರಿಂದ ತಪ್ಪಿಸಿಕೊಂಡಿದ್ದ. ಇದೇ ಆತನ ಬಂಧನಕ್ಕೆ ಸಹಕಾರಿಯಾಗಿದೆ.

ಆರೋಪಿ ಪಿ.ಎಫ್.ಐ ಕಾರ್ಯಕರ್ತನಲ್ಲ: ಅನ್ವರ್ ಸಾದಾತ್

ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆಸುವಲ್ಲಿ ಸಂಘಟನೆಯ ಪಾತ್ರವಿಲ್ಲ. ಅಲ್ಲದೆ ಬಂಧಿತ ಆರೋಪಿ ಉಬೇದುಲ್ಲಾ ಪಿ.ಎಫ್.ಐ ಕಾರ್ಯಕರ್ತನೆಂಬುದು ಸುಳ್ಳು. ಆರೋಪಿಯ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿರುವ ಪಿ.ಎಫ್.ಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಆರೋಪಿಯ ಬಂಧನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

No comments: