VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 3, 2010

ಪ್ರೀತಿ, ಪ್ರೇಮ, ಜಾತಿ; ವಿವಿಧ ವ್ಯಾಖ್ಯಾನ...

ಸದನದಲ್ಲಿ ಸ್ವಾರಸ್ಯ

ಪ್ರೀತಿ ಮಾಡುತ್ತಾರೆ, ಮದುವೆ ಆಗುವುದಿಲ್ಲ, ಅಂತಹವರ ಸಲುವಾಗಿಯಾದರೂ ಪ್ರೇಮಿಗಳ ದಿನಾಚರಣೆ ಇರಬೇಕು ಎಂದು ನಾಡಗೌಡ ಹೇಳಿದರೆ, ದೇವಾನು ದೇವತೆಗಳು ಪ್ರೀತಿ ಮಾಡುವುದಾದರೆ ಮಾನವರು ಮಾಡುವುದರಲ್ಲಿ ಏನು ತಪ್ಪು ?

ಬೆಂಗಳೂರು: ದೇವಾನುದೇವತೆಗಳು ಪ್ರೀತಿ ಮಾಡುವುದಾದರೆ, ಮಾನವರು ಯಾಕೆ ಮಾಡಬಾರದು? ವಿಶ್ವಾಮಿತ್ರನ ವ್ರತಕ್ಕೆ ಭಂಗ ತಂದ ಹೆಣ್ಣು ಮಾಯೆ! ಅಂತಹ ಮಾಯೆಯಿಂದ ದೂರ ಇರಬೇಕು ಎಂದು ಬಯಸುವುದು ಯಾಕೆ? ಪ್ರೇಮಕ್ಕೆ ಜಾತಿಯ ಕಟ್ಟುಪಾಡು ಹಾಕುವುದು ಸರಿಯೇ...?

ಹೀಗೆ ಪ್ರೀತಿ, ಪ್ರೇಮ, ಜಾತಿ, ಪ್ರೇಮಿಗಳ ದಿನಾಚರಣೆ, ಸ್ಮಶಾನದ ಬಗ್ಗೆ ವಿಧಾನ ಪರಿಷತ್‌ನಲ್ಲಿ ಮಂಗಳ ವಾರ ಸ್ವಲ್ಪ ಹೊತ್ತು ಸ್ವಾರಸ್ಯಕರ ಚರ್ಚೆ ನಡೆಯಿತು.

ಶಿವಮೊಗ್ಗ, ಹಾಸನದಲ್ಲಿ ಸೋಮ ವಾರ ನಡೆದ ಗಲಭೆಗೆ ಸಂಬಂಧಿಸಿ ದಂತೆ ಮಾತನಾಡುವಾಗ ಜೆಡಿಎಸ್‌ನ ಎಂ.ಸಿ.ನಾಣಯ್ಯ ಪ್ರಾಸಂಗಿಕವಾಗಿ ಪ್ರೇಮಿಗಳ ದಿನಾಚರಣೆಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಅಡ್ಡಿ ಮಾಡಿದ್ದನ್ನು ಪ್ರಸ್ತಾಪಿಸಿದರು. ಆಗ ಸದನದಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಒಬ್ಬೊಬ್ಬರೂ ಒಂದೊಂದು ರೀತಿ ಯಲ್ಲಿ ವ್ಯಾಖ್ಯಾನ ಶುರು ಮಾಡಿದರು.

ಪ್ರೇಮಕ್ಕೆ ಜಾತಿ ಇದೆಯೇ ಎಂದು ನಾಣಯ್ಯ ಪ್ರಶ್ನಿಸಿದರೆ, ಯಾವುದಕ್ಕೂ ಜಾತಿ ಇಲ್ಲ, ಭಾರತ ಜಾತ್ಯತೀತ ರಾಷ್ಟ್ರ ಎಂದು ಬಿಜೆಪಿಯ ಡಾ.ಎಸ್.ಆರ್. ಲೀಲಾ ಹೇಳಿದರು. ಶ್ರೀರಾಮ ಸೇನೆಯ ಕಾರ್ಯಕರ್ತರು ಎಲ್ಲಾ ದರೂ ಕೇಳಿಸಿಕೊಂಡಾರು, ಎಚ್ಚರಿಕೆ ಯಿಂದ ಇರಿ ಎಂದು ಕಿವಿಮಾತು ಹೇಳಿದರು.

‘ಪ್ರೇಮಿಗಳ ದಿನಾಚರಣೆ ವಿದೇಶಿ ಸಂಸ್ಕೃತಿ, ಆದ್ದರಿಂದ ಅದು ನಮಗೆ ಬೇಡ’ ಎಂದು ಭಾರತಿ ಶೆಟ್ಟಿ ಹೇಳಿದರೆ, ‘ಇಂಗ್ಲಿಷ್ ಭಾಷೆ, ವಿದೇಶಿ ವಸ್ತುಗಳ ಬಳಕೆ ನಮ್ಮ ಸಂಸ್ಕೃತಿಯೇ’ ಎಂದು ಸಭಾಪತಿ ವೀರಣ್ಣ ಮತ್ತಿಕಟ್ಟಿ ಕೇಳಿದರು. ಜೆಡಿಯುನ ಡಾ.ಎಂ.ಪಿ. ನಾಡಗೌಡ ಇದಕ್ಕೆ ಧ್ವನಿ ಗೂಡಿಸಿದರು.

ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮತ್ತಿಕಟ್ಟಿ, ‘ವ್ಯಾಲೆಂಟೇನ್ ಡೇ’ಯಿಂದಾಗಿ ಭರತ ಹುಟ್ಟಿದ. ವಿಶ್ವಾಮಿತ್ರನ ವ್ರತ ಭಂಗ ಮಾಡಿದ ಹೆಣ್ಣು ಮಾಯೆ! ಪ್ರೀತಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕೆಲವರು ಪ್ರೀತಿ ಮಾಡುತ್ತಾರೆ, ಮದುವೆ ಆಗುವುದಿಲ್ಲ, ಅಂತಹವರ ಸಲುವಾಗಿಯಾದರೂ ಪ್ರೇಮಿಗಳ ದಿನಾಚರಣೆ ಇರಬೇಕು ಎಂದು ನಾಡಗೌಡ ಹೇಳಿದರೆ, ದೇವಾನು ದೇವತೆಗಳು ಪ್ರೀತಿ ಮಾಡುವುದಾದರೆ ಮಾನವರು ಮಾಡುವುದರಲ್ಲಿ ಏನು ತಪ್ಪು ಎಂದು ನಾಣಯ್ಯ ಹೇಳಿದರು.

ಆಗ ಎದ್ದು ನಿಂತ ಸಚಿವ ಸಿ.ಎಂ.ಉದಾಸಿ, ಎಲ್ಲರೂ ಜಾತ್ಯತೀತ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ, ಸತ್ತ ಮೇಲೆ ಒಂದೇ ಸ್ಮಶಾನ ಇರ ಬೇಕು ಎಂದು ಯಾರಾದರೂ ಮಾತನಾಡಿದ್ದಾರಾ? ಜಾತ್ಯತೀತ ಎಂದು ಮಾತನಾಡುತ್ತಾರೆ ಅಷ್ಟೇ. ಆ ಎತ್ತರಕ್ಕೆ ಹೋಗಿಲ್ಲ ಎಂದು ವಸ್ತುಸ್ಥಿತಿ ವಿವರಿಸಲು ಮುಂದಾದರು.

ಸತ್ತ ಮೇಲೆ ಒಂದೇ ಸ್ಮಶಾನ ಇರಬೇಕು ಎಂಬುದು ಶಾಸಕರಿಂದಲೇ ಆರಂಭವಾಗಲಿ ಎಂದು ಶ್ರೀನಾಥ್ ಹೇಳಿದರೆ, ಮಂತ್ರಿ ಮಾಡಬೇಕಾದರೆ ಜಾತಿ ನೋಡುತ್ತಾರೆ, ಇನ್ನು ಒಂದೇ ಸ್ಮಶಾನ ಹೇಗೆ ಸಾಧ್ಯ ಎಂದು ಬಸವರಾಜ ಹೊರಟ್ಟಿ ಕೇಳಿದರು.
ಸ್ವರ್ಗದಲ್ಲಾದರೂ ಸ್ವಾಮಿಗಳು ನೆಮ್ಮದಿಯಿಂದ ಇರಲಿ, ಅಲ್ಲಿ ಜಗಳ ಬಂದರೆ ನ್ಯಾಯಾಲಯಗಳು ಇರುವುದಿಲ್ಲ ಎಂದು ಡಿ.ಎಸ್. ವೀರಯ್ಯ ನುಡಿದರು.

‘ನಮ್ಮದು ಪಾಂಡವರ ಸಂತಾನ’ ಎಂದು ನಾಣಯ್ಯ ಹೇಳಿದರೆ, ಗಂಧರ್ವ ವಿವಾಹಕ್ಕೆ ಕಾನೂನು ಇಲ್ಲ ಎಂಬುದಾಗಿ ಮತ್ತಿಕಟ್ಟಿ ದನಿಗೂಡಿಸಿದರು.

‘ಮೊದಲು ದ್ವೇಷರಹಿತ ಸಮಾಜ ನಿರ್ಮಾಣ ಮಾಡೋಣ, ಆ ಮೇಲೆ ಜಾತ್ಯತೀತತೆ ಬಗ್ಗೆ ಮಾತನಾಡುವುದು ಒಳ್ಳೆಯದು’ ಎಂದು ಉದಾಸಿ ಹೇಳಿದ ನಂತರ ಸಭಾಪತಿಗಳು ವಿಷಯಕ್ಕೆ ತೆರೆ ಎಳೆದರು.

No comments: