
ಮಂಗಳೂರು: ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಖೈದಿಯಾಗಿ ನಗರದ ಸಬ್ ಜೈಲಿನಲ್ಲಿದ್ದ ಆರೋಪಿ ಯೋರ್ವ ಅಸ್ತಮಾ ಖಾಯಿಲೆ ಉಲ್ಬಣಿಸಿ ಮೃತಪಟ್ಟ ಘಟನೆ ನಡೆದಿದೆ.
ಕಾಲಿನಲ್ಲಿ ಕೆಟ್ಟನೀರು ಶೇಖರಣೆಯಾಗಿ, ತೀವ್ರ ರೀತಿಯ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ಆರೋಪಿಯನ್ನು ಕಳೆದ ಮಾರ್ಚ್ 6 ರಂದು ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆರೋಪಿ ಮೊನ್ನೆ ತಡರಾತ್ರಿ ಮೃತ ಪಟ್ಟಿದ್ದಾನೆ.
2008 ನೇ ಡಿಸೆಂಬರ್ 18ರಂದು ನಗ ರದ ಲೇಡಿಗೋಷನ್ ಆಸ್ಪತ್ರೆಯ ಮುಂಭಾಗ ದಲ್ಲಿ ಪೃಥ್ವಿರಾಜ್ ಯಾನೆ ಮಾಧವ್ ಎಂಬವರನ್ನು ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕೇರಳದ ತ್ರಿಶೂರ್ನ ಅಬೂಬಕ್ಕರ್(45)ಎಂಬಾತನೇ ಇದೀಗ ಮೃತ ಪಟ್ಟ ಖೈದಿಯಾಗಿದ್ದಾನೆ.
ಕೊಲೆ ನಡೆದ ದಿನ ಲೇಡಿಗೋಷನ್ ಆಸ್ಪತ್ರೆಯ ಆವರಣದಲ್ಲಿ ನಿಂತಿದ್ದ ಅಬೂಬಕ್ಕರ್ ಆಸ್ಪತ್ರೆಗೆ ಬರುತ್ತಿದ್ದ ಮಹಿಳೆ ಯರನ್ನು ಚುಡಾಯಿಸುತ್ತಿದ್ದು ಇದನ್ನು ಪೃಥ್ವಿರಾಜ್ ಪ್ರಶ್ನಿಸಿದ್ದನ್ನೇ ನೆಪಮಾಡಿಕೊಂಡ ಆರೋಪಿ ಅಬೂಬಕ್ಕರ್ ಬ್ಲೇಡ್ ನಿಂದ ಪೃಥ್ವಿರಾಜ್ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದಲ್ಲದೆ ಇದನ್ನು ತಡೆಯಲು ಬಂದಿದ್ದ ಇನ್ನಿಬ್ಬರ ಮೇಲೂ ಆರೋಪಿ ಹಲ್ಲೆ ನಡೆಸಿ ಬಳಿಕ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಂದರು ಪೊಲೀಸರು ಕೆಲ ದಿನಗಳ ಅವಧಿಯಲ್ಲೆ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು, ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಕಾರಣ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಕಳೆದ ಒಂದೂವರೆ ವರುಷದಿಂದ ಆರೋಪಿ ಜೈಲಿನಲ್ಲಿದ್ದು ಕಳೆದ ಕೆಲ ಸಮಯದಿಂದ ಆರೋಪಿಯ ಆರೋಗ್ಯದಲ್ಲಿ ತೀವ್ರ ವೈಪರಿತ್ಯ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೈಲಿನಲ್ಲಿರುವಾಗ ಈತನಲ್ಲಿ ತೀವ್ರವಾದ ಅಸ್ತಮಾ ಕಾಯಿಲೆ ಕಂಡು ಬಂದಿತ್ತಲ್ಲದೆ, ಒಂದು ಕಾಲು ಕೆಟ್ಟ ನೀರು ತುಂಬಿಕೊಂಡು ಊದಿಕೊಂಡಿತ್ತು, ಆದರೆ ಈತನ ಸಾವಿಗೆ ಇದೊಂದೆ ಕಾರಣ ಅಲ್ಲ ಎಂದಿರುವ ವೈದ್ಯರು ಈತ ಏಡ್ಸ್ ಪೀಡಿತನಾಗಿದ್ದ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮನೆ ಮಂದಿ ಶವವನ್ನು ಊರಿಗೆ ತೆಗೆದುಕೊಂಡು ಹೋಗಿದ್ದಾರೆಂದು ತಿಳಿದು ಬಂದಿದೆ.
No comments:
Post a Comment