ಬೆಂಗಳೂರು, ಮಾ.೧೨: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಜೆಡಿಎಸ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಚುನಾವಣೆಯಲ್ಲಿ ಸ್ಪರ್ಧಿಸುವ ೪೦ ಮಂದಿ ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್-ಬಿಜೆಪಿಯಂತೆ ಜಾತಿ ಸಮೀಕರಣ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ ಎಂದರು.
ಬಿಜೆಪಿಯ ಉದ್ಧಟತದ ರಾಜಕಾರಣ, ಜಾತ್ಯತೀತ ಶಕ್ತಿಗಳನ್ನು ನಿಷ್ಕ್ರೀಯಗೊಳಿಸುವ ಹುನ್ನಾರ ಹೊಂದಿರುವ ಕಾಂಗ್ರೆಸ್ ವಿರುದ್ಧ ಪ್ರಬಲ ಹೋರಾಟ ನಡೆಸಲಾಗುವುದು. ಬಿಬಿಎಂಪಿ ಚುನಾವಣೆಯನ್ನು ಜೆಡಿಎಸ್ ಸವಾಲಾಗಿ ಸ್ವೀಕರಿಸಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಆಹಾರ ಪದಾರ್ಥಗಳ ಬೆಲೆ ಇಳಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಟೀಕಿಸಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುವ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿದ್ದರೂ ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ಇತ್ತೀಚೆಗೆ ಪ್ರಯಾಣದರ ಏರಿಕೆ ಮಾಡಿದೆ, ಬಿಬಿಎಂಪಿ ಚುನಾವಣೆ ಇಲ್ಲದಿದ್ದರೆ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ೪ ರೂಪಾಯಿಗೆ ಹೆಚ್ಚಿಸುತ್ತಿತ್ತು. ವಿದ್ಯುತ್ ದರ ಏರಿಕೆಗೆ ಐದು ಎಸ್ಕಾಂಗಳು ಈಗಾಗಲೇ ಕೆಇಆರ್‌ಸಿಗೆ ಮೇಲ್ಮನವಿ ಸಲ್ಲಿಸಿವೆ. ಎರಡು ರಾಷ್ಟ್ರೀಯ ಪಕ್ಷಗಳು ಮಧ್ಯಮ ವರ್ಗದ ಜನರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿವೆ ಎಂದು ದೂರಿದರು.
ರಾಜ್ಯ ಸರಕಾರ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಜನ ವಿರೋಧಿಯಾಗಿದೆ. ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ರಾಜ್ಯಕ್ಕೆ ಹರಿದು ಬಂದಿರುವ ಬಂಡವಾಳ ಮತ್ತು ಬಿಜೆಪಿ ಸರಕಾರದಲ್ಲಿ ಸ್ಥಾಪನೆಯಾದ ನೂತನ ಕೈಗಾರಿಕೆಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಿ. ಅನಂತರ ಭೂ ಸ್ವಾಧೀನದ ಬಣ್ಣ ಬಯಲಾಗಲಿದೆ ಎಂದು ಹೇಳಿದರು.
ಕಮ್ಯೂನಿಸ್ಟ್ ಪಕ್ಷಗಳು ಸೇರಿದಂತೆ ಇತರ ಸಣ್ಣ ಪಕ್ಷಗಳು ಒಕ್ಕೂಟ ರಚಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಜೆಡಿಎಸ್ ಸ್ಪತಂತ್ರವಾಗಿ ಕಣಕ್ಕಿಳಿಯಲಿದೆ ಎಂದರು. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ, ಎಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಝಮೀರ್ ಅಹ್ಮದ್ ಟಿಕೆಟ್ ಹಂಚಿಕೆಯಿಂದ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ಕುಮಾರಸ್ವಾಮಿ ತಳ್ಳಿಹಾಕಿದರು. ಪಕ್ಕದಲ್ಲೆ ಇದ್ದ ಝಮೀರ್ ಅಹ್ಮದ್ ಇದಕ್ಕೆ ಸಹಮತಿ ವ್ಯಕ್ತಪಡಿಸಿದರು.
ಬುಧವಾರು ಜೆಡಿಎಸ್ ಚುನಾವಣಾ ಪ್ರನಾಳಿಕೆ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು. ಝಮೀರ್ ಅಹ್ಮದ್, ಮಾಜಿ ಸಚಿವ ರಘುಪತಿ, ಸಂಸದ ಚಲುವರಾಯಸ್ವಾಮಿ, ಶಾಸಕ ಬಂಡೇಪ್ಪ ಕಾಶೇಂಪುರ್, ಬಸವನಗೌಡಪಾಟೀಲ್ ಯತ್ನಾಳ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Subscribe to:
Post Comments (Atom)
No comments:
Post a Comment