VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 8, 2010

ಹಾಲು ದುಬಾರಿ: ಕನಿಷ್ಠ ಮೂರು ರೂಪಾಯಿ ಹೆಚ್ಚಳ


ಬೆಂಗಳೂರು, ಎ.೭: ರಾಜ್ಯಾದ್ಯಂತ ಅನ್ವಯವಾಗುವಂತೆ ಕೆ‌ಎಂಎಫ್ ನಂದಿನಿ ಹಾಲಿನ ಪ್ರತಿ ಲೀಟರ್ ಬೆಲೆಯನ್ನು ಕನಿಷ್ಠ ಮೂರು ರೂಪಾಯಿಗಳಿಂದ ಗರಿಷ್ಠ ನಾಲ್ಕು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೆ ಬೆಲೆ ಹೆಚ್ಚಳದಿಂದ ಲಭ್ಯವಾಗುವ ಹಣದಲ್ಲಿ ಶೇ.೮೦ರಷ್ಟನ್ನು ರೈತರಿಗೆ ನೀಡಲಿದ್ದು, ವಿಶೇಷವಾಗಿ ವಿಮಾ ಯೋಜನೆಯೊಂದನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಬಿಬಿ‌ಎಂಪಿ ಚುನಾವಣೆ ಗೆಲುವಿನಿಂದ ಬೀಗುತ್ತಿರುವ ಬಿಜೆಪಿ ಸರಕಾರ ನಿನ್ನೆ ರಾತ್ರಿ ೧೦.೩೦ಕ್ಕೆ ಹಾಲಿನ ಬೆಲೆ ಹೆಚ್ಚಳಕ್ಕೆ ಅನುಮತಿಸಿದೆ.

ಮುಖ್ಯಮಂತ್ರಿಯವರ ಅನುಮತಿಯ ಮೇರೆ ಇಂದು ಬೆಳಗ್ಗೆ ದಿಡೀರ್ ಪತ್ರಿಕಾಗೋಷ್ಠಿ ನಡೆಸಿದ ಕೆ‌ಎಂಎಫ್ ಅಧ್ಯಕ್ಷ ಹಾಗೂ ಶಾಸಕ ಸೋಮಶೇಖರ್‌ರೆಡ್ಡಿ, ಬೆಲೆ ಹೆಚ್ಚಳವನ್ನು ನಾಳೆಯಿಂದಲೇ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಜನಸಾಮಾನ್ಯರು ಬಳಸುವ ರೂ.೧೬ರ ಪ್ರತಿ ಲೀಟರ್ ನಂದಿನಿ ಹಾಲಿನ ಬೆಲೆ ನಾಳೆಯಿಂದ ೧೯ ರೂಪಾಯಿಗೆ ಹೆಚ್ಚಳವಾಗಲಿದೆ. ಜಿಡ್ಡು ಮತ್ತು ವಿಟಮಿನ್ ಅಂಶಗಳು ಹೆಚ್ಚವಾದಂತೆಲ್ಲಾ ಬೆಲೆಯೂ ಹೆಚ್ಚಳವಾಗಲಿದೆ. ಫುಲ್‌ಕ್ರೀಮ್‌ಮಿಲ್ಕ್‌ನ (ವಿಶೇಷ ಹಾಲು) ಬೆಲೆ ೨೨ ರಿಂದ ೨೬ ರೂಪಾಯಿಗೆ ಹೆಚ್ಚಳವಾಗಲಿದೆ. ಕೌವ್‌ಮಿಲ್ಕ್‌ನ ಬೆಲೆ ೧೮ ರಿಂದ ೨೨ ರೂಪಾಯಿಗಳಿಗೆ ಹೆಚ್ಚಳವಾಗಲಿದೆ. ನೀಲಿ ಪ್ಯಾಕೆಟ್ ಹಾಲಿನ ಬೆಲೆ ಮಾತ್ರ ಮೂರು ರೂಪಾಯಿ ಹೆಚ್ಚಳವಾಗಲಿದ್ದು ಉಳಿದ ಎಲ್ಲ ಹಾಲಿನ ಬೆಲೆಯೂ ನಾಲ್ಕು ರೂಪಾಯಿಗೆ ಹೆಚ್ಚಳವಾಗಲಿದೆ.

ಇದೇ ಸಂದರ್ಭದಲ್ಲಿ ಮೊಸರು, ಬೆಣ್ಣೆ, ತುಪ್ಪದ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಲೀ. ಮೊಸರಿನ ಬೆಲೆಯನ್ನು ೨೦ರಿಂದ ೨೪ ರೂಪಾಯಿಗೆ ಹೆಚ್ಚಿಸಲಾಗಿದೆ.

ನಂದಿನಿ ಉತ್ಪನ್ನಗಳಾದ ಪೇಡಾ ಮತ್ತಿತರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಮಾಣವನ್ನು ನಿರ್ಧರಿಸಲಾಗುವುದು. ಎಪ್ರಿಲ್ ೧೦ರ ನಂತರ ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗಲಿದೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು.

ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡಿದ ಕೀರ್ತಿ ಕೆ‌ಎಂಎಫ್‌ಗಿದೆ. ಬೆಲೆ ಹೆಚ್ಚಳದ ನಂತರವೂ ಹಾಲಿನ ಬೆಲೆ ಇತರ ರಾಜ್ಯಗಳಿಗಿಂತ ಕಡಿಮೆಯಿದೆ. ಜನಸಾಮಾನ್ಯರು ಬಳಸುವ ಹಾಲನ್ನು ಈವರೆಗೆ ೧೫.೬೯ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು.

ಇದರಿಂದ ಲೀಟರ್‌ಗೆ ಕೆ‌ಎಂಎಫ್ ೬೯ ಪೈಸೆ ನಷ್ಟ ಅನುಭವಿಸುತ್ತಿತ್ತು. ಇದನ್ನು ತಪ್ಪಿಸಲು ಮತ್ತು ರೈತರಿಗೆ ಅನುಕೂಲ ಮಾಡಿಕೊಡಲು ಬೆಲೆ ಹೆಚ್ಚಳ ಮಾಡಲಾಗಿದೆ. ೧೩ ಒಕ್ಕೂಟಗಳೂ ಸಾಗಾಣಿಕೆ ಮತ್ತು ನಿರ್ವಹಣೆ ವೆಚ್ಚವನ್ನು ಆಧಾರಿಸಿ ಸ್ಥಳೀಯವಾಗಿ ಹಾಲಿನ ಬೆಲೆಯನ್ನು ಪರಿಷ್ಕರಿಸಲಿದ್ದಾರೆ. ಕೆ‌ಎಂಎಫ್ ಸೂಚನೆಯಂತೆ ಎಲ್ಲೆಡೆಯೂ ಹಾಲಿ ದರಕ್ಕಿಂತ ಮೂರು ಮತ್ತು ನಾಲ್ಕು ರೂಪಾಯಿ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು.

ಇತರ ರಾಜ್ಯಗಳ ಹಾಲಿನ ಬೆಲೆಯನ್ನು ವಿವರಿಸಿದ ಅವರು, ಗುಜರಾತ್ ೨೬, ಮುಂಬೈ ೩೫, ಆಂಧ್ರ ಪ್ರದೇಶ ೨೪, ದಿಲ್ಲಿ ೨೧ ರೂಪಾಯಿಗೆ ಹಾಲು ಮಾರಾಟವಾಗುತ್ತಿದೆ. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು.

ರೈತರಿಗೆ ಲಾಭ: ಬೆಲೆ ಹೆಚ್ಚಳದಿಂದ ದೊರೆಯುವ ೩ ರೂಪಾಯಿಯಲ್ಲಿ ಶೇ.೮೦ರಷ್ಟು ಅಂದರೆ ೨.೫೦ ರೂಪಾಯಿಗೂ ಹೆಚ್ಚು ಹಣವನ್ನು ರೈತರಿಗೆ ನೀಡಲಾಗುತ್ತಿದೆ. ೨೦ ಪೈಸೆಯನ್ನು ಹಾಲಿ ಸಂಗ್ರಹಣಾ ಸಂಸ್ಥೆಗಳ ಸಿಬ್ಬಂದಿಗಳ ವೇತನ ಮತ್ತು ಇತರ ಉದ್ದೇಶಗಳಿಗೆ ಖರ್ಚು ಮಾಡಲು ಕಾರ್ಯದರ್ಶಿಗಳಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡಲಾಗುವುದು ಎಂದು ಅವರು ಹೇಳಿದರು.

ಹೈನುಗಾರಿಕೆ ಕೈಗೊಳ್ಳುವ ಕುಟುಂಬಗಳಿಗೆ ಸುಮಾರು ೩.೫ ಲಕ್ಷ ರೂಪಾಯಿವರೆಗೂ ವಿಮೆ ಮಾಡಿಸುವ ನೂತನ ಪ್ರಸ್ತಾವಪವನ್ನು ಕೆ‌ಎಂಎಫ್ ಮಂಡಿಸಿದೆ. ಈ ಕುರಿತು ವಿಮಾ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ೭ ಲಕ್ಷ ಕುಟುಂಬಗಳು ವಿಮೆ ಸೌಲಭ್ಯ ಪಡೆಯಲಿವೆ ಎಂದು ಅಂದಾಜಿಸಲಾಗಿದ್ದು, ರೈತರು ೪೫೦ ರೂಪಾಯಿ ಕಂತು ಪಾವತಿಸಬೇಕಾಗಬಹುದು ಎಂದು ಹೇಳಿದರು.

ರಾಜ್ಯದಲ್ಲಿ ಈ ಮೊದಲು ೪೦ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು, ನೆರೆ ರಾಜ್ಯದಲ್ಲಿ ಅತ್ಯಧಿಕ ಮೊತ್ತ ನೀಡುತ್ತಿದ್ದರಿಂದ ಖಾಸಗಿ ಸಂಸ್ಥೆಗಳಿಗೆ ರೈತರು ಹಾಲು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ‌ಎಂಎಫ್ ಬೆಲೆ ಹೆಚ್ಚಳ ಮಾಡಿದೆ ಎಂದು ಅವರು ಸಮರ್ಥಿಸಿಕೊಂಡರು.

ಹೈನುಗಾರಿಕೆಗೂ ಶೇ.೩ರ ಬಡ್ಡಿದರದಲ್ಲಿ ಸಾಲ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

No comments: