VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 5, 2010

ಉಮಾ ಭಾರತಿ, ಗೋವಿಂದಾಚಾರ್ಯ ಮರಳಿ ಬಿಜೆಪಿ ತೆಕ್ಕೆಗೆ?

ಉಮಾ ಭಾರತಿ ತನ್ನ 'ಭಾರತೀಯ ಜನ ಶಕ್ತಿ' ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಿಗೆ ಇದೀಗ ಕೆ.ಎನ್. ಗೋವಿಂದಾಚಾರ್ಯ 'ರಾಷ್ಟ್ರೀಯ ಸ್ವಾಭಿಮಾನ್ ಆಂದೋಳನ'ಕ್ಕೆ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿಯ ಗತಕಾಲದ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಇಬ್ಬರೂ ಮೂಲ ಪಕ್ಷಕ್ಕೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

'ಭಾರತೀಯ ಜನ ಶಕ್ತಿ' ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗಷ್ಟೇ ಉಮಾ ಭಾರತಿ ರಾಜೀನಾಮೆ ನೀಡಿದ್ದರು. ಇದೀಗ ಗೋವಿಂದಾಚಾರ್ಯ ಅವರು 'ರಾಷ್ಟ್ರೀಯ ಸ್ವಾಭಿಮಾನ್ ಆಂದೋಳನ'ದ ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡಿ ದೆಹಲಿಗೆ ದೌಡಾಯಿಸಿದ್ದಾರೆ. ಒಂದು ಕಾಲದ ಬಿಜೆಪಿಯ ಪ್ರಮುಖ ನಾಯಕರಾದ ಇವರಿಬ್ಬರ ಇತ್ತೀಚಿನ ನಡೆಗಳು ಬಿಜೆಪಿಗೆ ಪೂರಕವಾಗಿ ಕಾಣುತ್ತಿದ್ದು, ಉಭಯರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಮತ್ತು ಇತರ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿರುವ ನಿಟ್ಟಿನಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಹೊಣೆ ಹೊತ್ತಿರುವ ನೂತನ ಅಧ್ಯಕ್ಷ ನಿತಿನ್ ಗಡ್ಕರಿಯವರು, ಗತಕಾಲದ ವೈಭವವನ್ನು ಮರಳಿಸಬೇಕೆಂದು ಯತ್ನಿಸುತ್ತಿದ್ದಾರೆ.

ಇದೇ ನಿಟ್ಟಿನಲ್ಲಿ ಪಕ್ಷವು ಹಿಂದುತ್ವ ಸಿದ್ಧಾಂತಕ್ಕೆ ಅಂಟಿಕೊಂಡಿದೆ ಎಂಬ ಸಂದೇಶವನ್ನು ರವಾನಿಸಲು ವರುಣ್ ಗಾಂಧಿಯಂತಹ ಫೈರ್ ಬ್ರಾಂಡ್ ವ್ಯಕ್ತಿಗಳನ್ನು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಏರಿಸಲಾಗಿದೆ. ಕಳೆದೆರಡು ದಶಕದಲ್ಲಿ ತನ್ನದೇ ಆದ ವ್ಯಕ್ತಿತ್ವದ ಮೂಲಕ ಬಿಜೆಪಿಗೆ ಒಂದು ಕಲೆಯನ್ನು ತಂದುಕೊಟ್ಟವರಲ್ಲಿ ಉಮಾ ಭಾರತಿ ಮತ್ತು ಗೋವಿಂದಾಚಾರ್ಯ ಪಾಲು ಮಹತ್ವದ್ದು ಎಂಬುದನ್ನು ಅರಿತಿರುವ ಪಕ್ಷದ ಮುಖಂಡರು, ಅವರನ್ನು ಮತ್ತೆ ಬರಸೆಳೆದುಕೊಳ್ಳುವ ಮೂಲಕ ಮುಂದಿನ ಮಹಾ ಚುನಾವಣೆಗೆ ಈಗಲೇ ಬುಡ ಗಟ್ಟಿ ಮಾಡಿಕೊಳ್ಳುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಅದೇ ಹೊತ್ತಿಗೆ ಉಮಾ ಭಾರತಿ ಕೂಡ ಇನ್ನೆರಡು ದಿನಗಳಲ್ಲಿ ದೆಹಲಿಗೆ ಹೋಗಲಿದ್ದು, ಮುಂದಿನ ನಡೆ ಕುತೂಹಲ ಮೂಡಿಸಿದೆ. ಆದರೆ ಇವರಿಬ್ಬರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಲು ರಾಷ್ಟ್ರೀಯ ಸ್ವಾಭಿಮಾನ್ ಆಂದೋಳನದ ಸಹ ಸಂಚಾಲಕ ಕೈಲಾಸ್ ತಿವಾರಿ ನಿರಾಕರಿಸಿದ್ದಾರೆ.

ಇಬ್ಬರೂ ನಾಯಕರು ಬಿಜೆಪಿಗೆ ಮರಳುವ ಕುರಿತು ಯಾವುದೇ ಹೇಳಿಕೆಯನ್ನು ನೀಡುವ ಸ್ಥಿತಿಯಲ್ಲಿ ನಾನಿಲ್ಲ ಎಂದಷ್ಟೇ ಅವರು ತಿಳಿಸಿದ್ದಾರೆ.

2004ರ ಮೇ 15ರಂದು ಸಂಸ್ಥಾಪನೆಗೊಂಡಾಗಿನಿಂದ ರಾಷ್ಟ್ರೀಯ ಸ್ವಾಭಿಮಾನ್ ಆಂದೋಳನಕ್ಕೆ ಗೋವಿಂದಾಚಾರ್ಯರೇ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಶನಿವಾರ ರಾಜೀನಾಮೆ ಸಲ್ಲಿಸಿದ ಬಳಿಕ ಅವರ ಸ್ಥಾನಕ್ಕೆ ರಾಕೇಶ್ ದುಬೇ ಅವರನ್ನು ತರಲಾಗಿದೆ.

ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವಿದ್ದಾಗ ಮಾಜಿ ಪ್ರಧಾನಿಯವರದ್ದು ಕಪಟವೇಷ ಮತ್ತು ಎಲ್‌.ಕೆ. ಅಡ್ವಾಣಿಯವರೇ ಪಕ್ಷದ ನಿಜವಾದ ಮುಖಂಡ ಎಂದು ಹೇಳಿದ್ದ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಆರೆಸ್ಸೆಸ್ ಸಿದ್ಧಾಂತವಾದಿ ಪಕ್ಷದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು.

No comments: