VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 7, 2010

ಸೇಡು ತೀರಿಸಿಕೊಂಡ ಚೆನ್ನೈ; ಮುಂಬೈಗೆ ಸೋಲಿನ ರುಚಿ


ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಅವತರಣಿಯಲ್ಲಿ ಅತ್ಯಂತ ಪ್ರಬಲ ತಂಡವೆನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ರುಚಿ ತೋರಿಸಿಕೊಟ್ಟಿದ್ದು, ಸೇಡು ತೀರಿಸಿಕೊಂಡಿದೆ.

ಮಂಗಳವಾರ ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಗ ಒಡ್ಡಿದ 166 ರನ್ನುಗಳ ಸವಾಲಿನ ಮೊತ್ತವನ್ನು ಬೆನ್ನತ್ತುವಲ್ಲಿ ಎಡವಿದ ಮುಂಬೈ ತಂಡ ನಿಗದಿತ 20 ಓವರುಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 24 ರನ್ನುಗಳ ಸೋಲನ್ನು ಕಂಡಿತ್ತು.

ಟೂರ್ನಮೆಂಟ್‌ನಲ್ಲಿ ಇದೀಗ ಸತತ ಮೂರನೇ ಜಯ ದಾಖಲಿಸಿರುವ ಧೋನಿ ಬಳಗ ಆಡಿದ ಹತ್ತು ಪಂದ್ಯಗಳಲ್ಲಿ ತಲಾ ಐದು ಜಯ ಹಾಗೂ ಸೋಲುಗಳೊಂದಿಗೆ ಹತ್ತು ಅಂಕ ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ನೆಗೆದಿದೆ.

ಮತ್ತೊಂದೆಡೆ ಈ ಪಂದ್ಯದಲ್ಲಿ ಸೋಲು ಕಂಡರೂ ಮುಂಬೈ ತಂಡ 9 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಇದು ಟೂರ್ನಿಯಲ್ಲಿ ಮುಂಬೈಗೆ ಎದುರಾದ ಎರಡನೇ ಸೋಲು. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸಚಿನ್ ಪಡೆ ಮುಗ್ಗರಿಸಿತು. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ 12 ಅಂಕಗಳನ್ನು ಹೊಂದಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈಗೆ ಮ್ಯಾಥ್ಯೂ ಹೇಡನ್ ಉತ್ತಮ ಆರಂಭವನ್ನೇ ಒದಗಿಸಿದರು. 31 ಎಸೆತಗಳನ್ನು ಎದುರಿಸಿದ ಹೇಡನ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದರು. ಆದರೆ ಕಳೆದ ಪಂದ್ಯದ ಶತಕ ವೀರ ಮುರಳಿ ವಿಜಯ್ (14) ಆಫ್ ಸ್ಪಿನ್ನರ್ ಹರಭಜನ್ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆದರು.

ನಂತರ ಬಂದ ರೈನಾ ವೇಗದ 23 ರನ್ ಗಳಿಸುವ ಮೂಲಕ ರನ್ ಗತಿ ಏರಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ 18 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 31 ರನ್ನುಗಳ ಉಪಯುಕ್ತ ನೆರವು ನೀಡಿದರು.

ಆದರೆ ಧೋನಿ ಹಾಗೂ ಹೇಡನ್‌ರನ್ನು ಬೆನ್ನು ಬೆನ್ನುಗೆ ಪೆವಿಲಿಯನ್‌ಗೆ ಅಟ್ಟಿದ ಕಿರೋನ್ ಪೋಲಾರ್ಡ್ ಚೆನ್ನೈ ರನ್ ಓಟಕ್ಕೆ ಕಡಿವಾಣ ಹಾಕಿದರು.

ಕೊನೆಗೆ ಬಂದ ಮೈಕಲ್ ಹಸ್ಸಿ (14*) ಹಾಗೂ ಎಸ್. ಬದ್ರೀನಾಥ್ (30*) ಚೇತರಿಯ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

ಅಂತಿಮವಾಗಿ ಚೆನ್ನೈ ತಂಡ ನಿಗದಿತ 20 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 165ರನ್ನುಗಳ ಸವಾಲಿನ ಮೊತ್ತ ಪೇರಿಸಿತು. ಪ್ರಭಾವಿ ದಾಳಿ ಸಂಘಟಿಸಿದ ಪೊಲಾರ್ಡ್ 27 ರನ್ ತೆತ್ತು ಪ್ರಮುಖ ಎರಡು ವಿಕೆಟ್ ಕಿತ್ತರು.

ಚೆನ್ನೈ ಒಡ್ಡಿದ ಸವಾಲಿನ ಮೊತ್ತವನ್ನು ದಿಟ್ಟವಾಗಿ ಎದುರಿಸಿದ ಮುಂಬೈಗೆ ನಾಯಕ ಸಚಿನ್ ತೆಂಡೂಲ್ಕರ್ ಹಾಗೂ ಶಿಖರ್ ಧವನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 6.1 ಓವರುಗಳಲ್ಲಿ 46 ರನ್ ಒಟ್ಟು ಸೇರಿಸಿದರು.

ಈ ಜೋಡಿಯನ್ನು ವೇಗಿ ತಿಲಾನ್ ತುಷಾರಾ ಬೇರ್ಪಡಿಸಿದರು. 16 ರನ್ ಗಳಿಸಿದ ಧವನ್ ಪೆವಲಿಯನ್‌ಗೆ ಸೇರಿಕೊಂಡರು. ಈ ಹಂತದಲ್ಲಿ ಗಾಯಕ್ಕೊಳಗಾದ ಸಚಿನ್ ಕೂಡಾ ನಿವೃತ್ತಿ ಪಡೆದರು. ಈ ವೇಳೆ 28 ಎಸೆತಗಳಲ್ಲಿ ಸಚಿನ್ 38 ರನ್ ಗಳಿಸಿದರು.

ಸಚಿನ್ ಕ್ರೀಸ್ ಬಿಟ್ಟು ತೆರಳಿದ ತಕ್ಷಣ ಮುಂಬೈ ಕುಸಿತವು ಆರಂಭವಾಯಿತು. ಸ್ಪಿನ್ನರುಗಳಾದ ಆರ್. ಆಶ್ವಿನ್ ಮತ್ತು ಎಸ್.ಬಿ. ಜಕಾತಿ ಮುಂಬೈ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು.

ನಂತರ ಬಂದ ಯುವ ಭರವಸೆಯ ಆಟಗಾರ ಸೌರಭ್ ತಿವಾರಿ (14), ಅಂಬಾಟಿ ರಾಯುಡು (3), ಡ್ವೇನ್ ಬ್ರಾವೋ (2), ಕಿರೋನ್ ಪೊಲಾರ್ಡ್ (5), ಆರ್. ಸತೀಶ್ (4), ಆರ್. ಮೆಕ್‌ಲಾರೆನ್ (1) ಬೇಗನೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಸಚಿನ್ ಕ್ರೀಸಿಗೆ ವಾಪಾಸಾದರೂ ಪಂದ್ಯದ ಫಲಿತಾಂಶದಲ್ಲಿ ಬದಲಾವಣೆ ತರಲಾಗಲಿಲ್ಲ. 35 ಎಸೆತಗಳನ್ನು ಎದುರಿಸಿದ ಸಚಿನ್ ಆರು ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ಹರಭಜನ್ ಸಿಂಗ್ ಕೂಡಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೂ ಅದು ತಂಡದ ಗೆಲುವಿನಲ್ಲಿ ಸಹಕಾರಿಯಾಗಲಿಲ್ಲ. 23 ಎಸೆತಗಳನ್ನು ಎದುರಿಸಿದ ಹರಭಜನ್ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಮಿಂಚಿದ ಪ್ರದರ್ಶನ ನೀಡುತ್ತಿದ್ದರೂ ಬ್ಯಾಟಿಂಗ್‌ನಲ್ಲಿ ವಿಫಲ ಕಾಣುತ್ತಿರುವ ಕಿರೋನ್ ಪೊರ್ಲಾರ್ಡ್‌ರಿಂತಲೂ ನಿರೀಕ್ಷೆಯ ಪ್ರದರ್ಶನ ಕಂಡುಬರಲಿಲ್ಲ.

ಉತ್ತಮ ದಾಳಿ ಸಂಘಟಿಸಿದ ತಿಲಾನ್ ತುಷಾರ ಮತ್ತು ಆರ್. ಆಶ್ವಿನ್ ತಲಾ ಎರಡು ಹಾಗೂ ಸುದೀಪ್ ತ್ಯಾಗಿ, ಡೌಗ್ ಬೊಲ್ಲಿಂಗರ್, ಜಕಾತಿ ಮತ್ತು ಸುರೇಶ್ ರೈನಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಸುರೇಶ್ ರೈನಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

No comments: