ಜತೆಗಿದ್ದ ಬಾಲಕಿಗೂ ಲೈಂಗಿಕ ಕಿರುಕುಳ ನೀಡಿದ್ದ ಊಟಿ ಪಾದ್ರಿ?
ಅಮೆರಿಕಾದಲ್ಲಿ ಪಾದ್ರಿಯಾಗಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿರುವ ಊಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾದ್ರಿ, ಜತೆಗಿದ್ದ ಬಾಲಕಿಯನ್ನೂ ಕಾಡಿದ್ದರು ಎಂದು ಇದೀಗ ವ್ಯಾಟಿಕನ್ ಮೂಲಗಳು ಆರೋಪಿಸಿವೆ.
ಈ ನಡುವೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಸಂಬಂಧ ವಿಚಾರಣೆಗಾಗಿ ಅಮೆರಿಕಾಕ್ಕೆ ತೆರಳಲು ಸಿದ್ಧನಿದ್ದೇನೆ, ಆದರೆ ಬಿಷಪ್ ಅನುಮತಿ ನೀಡಬೇಕು ಎಂದು ಆರೋಪಿ ರೆವೆಡೆಂಟ್ ಜೋಸೆಫ್ ಪಳನಿವೇಲ್ ಜೆಯಾಪೌಲ್ ತಿಳಿಸಿದ್ದಾರೆ.
2004ರ ಸೆಪ್ಟೆಂಬರ್‌ನಿಂದ 2005ರ ಆಗಸ್ಟ್ ತಿಂಗಳ ನಡುವೆ ಅಮೆರಿಕದ ಮಿನಿಸೊಟಾ ರಾಜ್ಯದ ಕ್ರೂಕ್‌ಸ್ಟನ್‌ನಲ್ಲಿ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ 14 ವರ್ಷ ವಯಸ್ಸಿನ ಬಾಲಕಿ ಮತ್ತು ಆಕೆಯ ಗೆಳತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವ್ಯಾಟಿಕನ್ ಆರೋಪಿಸುತ್ತಿದೆ.
ಈ ಬಗ್ಗೆ ಪಾದ್ರಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ; ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ. ಆ ಬಾಲಕಿಯರ ಪರಿಚಯವೇ ನನಗಿಲ್ಲ ಎಂದು ಆರೋಪಿ ರೆವೆಡೆಂಟ್ ಜೋಸೆಫ್ ಪಳನಿವೇಲ್ ಜೆಯಾಪೌಲ್ ತಿಳಿಸಿದ್ದಾರೆ.
ನನ್ನ ಧರ್ಮಗುರುಗಳು ಅನುಮತಿ ನೀಡಿದಲ್ಲಿ ಅಮೆರಿಕಾದ ವಿಚಾರಣೆಗಾಗಿ ನಾನು ಅಲ್ಲಿಗೆ ತೆರಳಲು ಸಿದ್ಧನಿದ್ದೇನೆ ಎಂದು ತನ್ನ ವಕೀಲರನ್ನು ಭೇಟಿ ಮಾಡಲು ಚೆನ್ನೈಗೆ ತೆರಳುತ್ತಿದ್ದ ಪಾದ್ರಿ ಹೇಳಿದ್ದಾರೆ.
ಮುಂದಿನ ಕ್ರಮಕ್ಕೆ ಶಿಫಾರಸು...
ಅಮೆರಿಕಾದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿರುವ ಪಾದ್ರಿ ಪ್ರಕರಣದ ಕುರಿತು ಮುಂದಿನ ನಿರ್ಧಾರವನ್ನು ಕೈಗೊಳ್ಳಲು ಭಾರತೀಯ ಕ್ಯಾಥೊಲಿಕ್ ಬಿಷಪ್ ಕೌನ್ಸಿಲ್‌ಗೆ ಶಿಫಾರಸು ಮಾಡಲಾಗಿದೆ ಎಂದು ಉದಕಮಂಡಲ ಬಿಷಪ್ ಎ. ಅಮಲ್‌ರಾಜ್ ತಿಳಿಸಿದ್ದಾರೆ.
ಜೆಯಾಪೌಲ್ ಮೇಲೆ ಆರೋಪಗಳು ಈ ಹಿಂದೆಯೇ ಬಂದಿರುವುದು ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಂಡಿರುವ ಬಿಷಪ್, ಅದೇ ನಿಟ್ಟಿನಲ್ಲಿ ತನಿಖೆಯನ್ನೂ ನಡೆಸಲಾಗಿತ್ತು; ಆದರೆ ಅದರಲ್ಲಿ ಅವರು ತಪ್ಪಿತಸ್ಥರು ಎಂದು ಕಂಡು ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ನಂತರದ ದಿನಗಳಲ್ಲಿ ಮಾಧ್ಯಮಗಳ ಮೂಲಕ ಅದೇ ಆರೋಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬಿಷಪ್ ಆಡಳಿತವು ಈ ವಿಚಾರದ ಕುರಿತು ಹೆಚ್ಚುವರಿ ಮಾಹಿತಿಗಳನ್ನು ಅಧ್ಯಯನ ನಡೆಸಿತ್ತು ಎಂದರು.
ಮದ್ರಾಸ್ ಆರ್ಚ್ ಬಿಷಪ್ ಸೂಚನೆ..
ಆರೋಪಿ ಪಾದ್ರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಉದಕಮಂಡಲ ಚರ್ಚ್ ಆಡಳಿತ ವ್ಯಾಪ್ತಿಯಲ್ಲಿ ಬರುವ ಊಟಿ ಬಿಷಪ್ ಅಮಲ್‌ರಾಜ್ ಅವರಿಗೆ ಮದ್ರಾಸ್ ಆರ್ಚ್ ಬಿಷಪ್ ರೆವೆಡೆಂಟ್ ಫಾದರ್ ಎಂ. ಚಿನ್ನಪ್ಪ ಸೂಚನೆ ನೀಡಿದ್ದಾರೆ.
ಅಲ್ಲದೆ ವ್ಯಾಟಿಕನ್ ಬಯಸಿದರೆ ಅಮೆರಿಕಾದಲ್ಲಿ ವಿಚಾರಣೆ ಎದುರಿಸಲು ಫಾದರ್ ಜೆಯಾಪೌಲ್ ಕಡ್ಡಾಯವಾಗಿ ಮರಳಬೇಕು. ಪ್ರಕರಣಕ್ಕೆ ಅಗತ್ಯವಿರುವ ಎಲ್ಲಾ ಸಹಕಾರಗಳನ್ನೂ ನೀಡಬೇಕು ಎಂದು ಚಿನ್ನಪ್ಪ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಿತೃತ್ವ ವಿವಾದ; ಉತ್ತರಿಸಲು ತಿವಾರಿಗೆ ಕೊನೆಯ ಅವಕಾಶ
ಸಾಕಷ್ಟು ಭಾವಚಿತ್ರಗಳಲ್ಲಿ ಮಹಿಳೆ ಮತ್ತು ಆಕೆಯ ಪುತ್ರನ ಜತೆ ಕಾಣಿಸಿಕೊಂಡಿದ್ದರೂ ಯುವಕನ ತಂದೆ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ನೀವು ಡಿಎನ್‌ಎ ಪರೀಕ್ಷೆಗೆ ಯಾಕೆ ಒಳಗಾಗಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕ ಎನ್.ಡಿ. ತಿವಾರಿಯವರನ್ನು ಪ್ರಶ್ನಿಸಿರುವ ದೆಹಲಿ ಹೈಕೋರ್ಟ್, ಉತ್ತರಿಸಲು ಕೊನೆಯ ಅವಕಾಶವನ್ನು ನೀಡಿದೆ.
34ರ ಹರೆಯದ ರೋಹಿತ್ ಶೇಖರ್ ಎಂಬ ಯುವಕ ತನ್ನ ತಂದೆ ತಿವಾರಿ ಎಂದು ವಾದಿಸುತ್ತಿದ್ದಾರೆ. ಇದನ್ನು ನ್ಯಾಯಾಲಯ ಘೋಷಿಸಬೇಕೆಂಬುದು ಅವರ ವಾದ. ಆದರೆ ತಿವಾರಿ ಅದನ್ನು ನಿರಾಕರಿಸುತ್ತಾ ಬಂದಿದ್ದಾರೆ. ಈ ಸಂಬಂಧ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು, ತಿವಾರಿಯವರು ನ್ಯಾಯಾಲಯದ ಎದುರು ಹಾಜರಾಗಲು ವಿಫಲವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಾ, ನಾಲ್ಕು ವಾರಗೊಳಗೆ ಉತ್ತರಿಸುವಂತೆ ಆದೇಶ ನೀಡಿದೆ.
ರೋಹಿತ್ ತನ್ನ ತಾಯಿಯೊಂದಿಗೆ ತಿವಾರಿಯವರ ಜತೆಗಿರುವ 200ಕ್ಕೂ ಹೆಚ್ಚು ಭಾವಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಭಿನ್ನ ಕಾರ್ಯಕ್ರಮಗಳಲ್ಲಿ ಅವರು ಜತೆಗಿರುವುದನ್ನು ತೋರಿಸುತ್ತಿದೆ. ಇದಕ್ಕೆ ಮತ್ತು ಡಿಎನ್‌ಎ ಪರೀಕ್ಷೆ ಸಂಬಂಧ ಉತ್ತರಿಸುವಂತೆ ತಿವಾರಿಯವರಿಗೆ ಆದೇಶ ನೀಡಲಾಗಿದೆ.
ನೀವು ಪ್ರತಿಕ್ರಿಯೆ ನೀಡದೇ ಇರುವ ಕಾರಣದಿಂದಾಗಿ ಇಡೀ ವಿವಾದ ಸುದೀರ್ಘ ಅವಧಿಗೆ ಮುಂದುವರಿಯುತ್ತಿದೆ. ನೀವು ಸಮರ್ಥವಾಗಿ ಉತ್ತರಿಸುತ್ತಿದ್ದರೆ ಈ ಪ್ರಕರಣ ಯಾವತ್ತೋ ಮುಗಿದು ಹೋಗುತ್ತಿತ್ತು. ಇದು ನಿಮಗೆ ಕೋರ್ಟ್ ನೀಡುತ್ತಿರುವ ಕೊನೆಯ ಅವಕಾಶ ಎಂದು ನ್ಯಾಯಾಲಯ ತಿವಾರಿಯವರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿಯವರ ವಕೀಲರು ವಿಶೇಷ ರಜಾ ಅರ್ಜಿಯನ್ನು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಅಪೆಕ್ಸ್ ಕೋರ್ಟ್ ನಿಮ್ಮ ಪರವಾಗಿ ತೀರ್ಪು ನೀಡುವವರೆಗೆ ಆ ಅರ್ಜಿ ಊರ್ಜಿತವಲ್ಲ ಎಂದು ತಿಳಿಸಿದೆ.
ತನ್ನ ತಾಯಿ ಉಜ್ವಲಾ ಶರ್ಮಾ ಮತ್ತು ಆಂಧ್ರಪ್ರದೇಶ ಮಾಜಿ ರಾಜ್ಯಪಾಲ ತಿವಾರಿಯವರ ನಡುವಿನ ಸಂಬಂಧದಿಂದ ತಾನು ಹುಟ್ಟಿದ್ದೇನೆ. ತನ್ನ ತಂದೆ ತಿವಾರಿಯವರು ಎಂದು ರೋಹಿತ್ ವಾದಿಸುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಇದನ್ನು ತಳ್ಳಿ ಹಾಕುತ್ತಿದ್ದಾರೆ. ಈ ಸಂಬಂಧ ಕೆಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಎ.ಸಿ.ಯಲ್ಲಿದ್ದ ಮುಂಭಯೋತ್ಪಾದಕರ ಶವಗಳಿಗೆ ಕೊನೆಗೂ ಮುಕ್ತಿ!
2008ರ ನವೆಂಬರ್ ತಿಂಗಳಲ್ಲಿ ಮುಂಬೈ ಮಹಾನಗರಿಯ ಮೇಲೆ ದಾಳಿ ನಡೆಸಿ ಸಾವಿರಾರು ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು 160ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣರಾಗಿ ನಂತರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕರ ಶವಗಳನ್ನು ಕೊನೆಗೂ ದಫನ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ.
ಮೂರು ದಿನಗಳ ಕಾಲ ಭಾರತದ ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿ ಗುಂಡೇಟುಗಳಿಗೆ ಬಲಿಯಾಗಿದ್ದ ಉಗ್ರರ ಶವಗಳನ್ನು ಪಾಕಿಸ್ತಾನ ಸ್ವೀಕರಿಸಲು ನಿರಾಕರಿಸಿತ್ತು. ಭಾರತದಲ್ಲಿನ ಮುಸ್ಲಿಂ ಸಂಘಟನೆಗಳು ಕೂಡ ಅವರನ್ನು ಮುಸ್ಲಿಮರೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದವು. ಈ ಹಿನ್ನೆಲೆಯಲ್ಲಿ ಭಯೋತ್ಪಾದಕರ ಶವಗಳನ್ನು ಇದೇ ವರ್ಷದ ಜನವರಿಯಲ್ಲಿ ಹೂತು ಹಾಕಲಾಗಿದೆ ಎಂದು ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಅವರ ಕಳೇಬರಗಳನ್ನು ಸುದೀರ್ಘ ಸಮಯಗಳ ಕಾಲ ರಕ್ಷಿಸಿ ಇಡುವ ಅಗತ್ಯವಿದೆ ಎಂದು ಅನ್ನಿಸಿರಲಿಲ್ಲ. ಅಲ್ಲದೆ ಇದರಿಂದ ಸರಕಾರದ ಬೊಕ್ಕಸಕ್ಕೂ ಅಪಾರ ನಷ್ಟವಾಗುತ್ತಿತ್ತು. ಹಾಗಾಗಿ ನಾವು ಅವರ ಶವಗಳನ್ನು ಮಣ್ಣು ಮಾಡಲು ನಿರ್ಧರಿಸಿದೆವು ಎಂದು ಸಚಿವರು ವಿವರಣೆ ನೀಡಿದ್ದಾರೆ.
ಭಯೋತ್ಪಾದಕರ ಶವಗಳನ್ನು ಭಾರತದ ನೆಲದಲ್ಲಿ ದಫನ ಮಾಡಬಾರದು ಎಂದು ಹಲವು ಮುಸ್ಲಿಂ ಸಂಘಟನೆಗಳು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಇದನ್ನು ಸೂಕ್ಷ್ಮ ವಿಚಾರ ಎಂದು ಪರಿಗಣಿಸಿದ ಸರಕಾರವು, ದಫನಗೊಳಿಸಲಾದ ಸ್ಥಳ, ದಿನಾಂಕ ಮತ್ತು ಇನ್ನಿತರ ಮಾಹಿತಿಗಳನ್ನು ರಹಸ್ಯವಾಗಿಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.
ಸರ್ ಜೆ.ಜೆ. ಆಸ್ಪತ್ರೆಯ ಹವಾನಿಯಂತ್ರಿತ ಶವಾಗಾರದಲ್ಲಿಟ್ಟಿದ್ದ ಉಗ್ರರ ಕಳೇಬರಗಳಿಗೆ 24 ಗಂಟೆಗಳ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಇದಕ್ಕಾಗಿ ಸರಕಾರವು ಭಾರೀ ವೆಚ್ಚ ಮಾಡುತ್ತಿತ್ತು. ಈ ಸಂಬಂಧ ಎಲ್ಲಾ ಪ್ರಕ್ರಿಯೆಗಳಿಗೆ ಕಳೇಬರಗಳ ಅಗತ್ಯ ಕಂಡು ಬರದೇ ಇರುವುದರಿಂದ ಮತ್ತು ವೆಚ್ಚ ತಡೆ ನಿಟ್ಟಿನಲ್ಲಿ ಉಗ್ರ ಶವಗಳನ್ನು ದಫನ ಮಾಡಲು ನಿರ್ಧರಿಸಲಾಯಿತು ಎಂದು ಸಚಿವ ಪಾಟೀಲ್ ತಿಳಿಸಿದರು.
ಪಾಕಿಸ್ತಾನ ವಾಯುವ್ಯ ಪ್ರಾಂತ್ಯದ ದೇರಾ ಇಸ್ಮಾಯಿಲ್ ಖಾನ್ ಪ್ರದೇಶದ ಅಬೂ ಇಸ್ಮಾಯಿಲ್ ದೇರಾ ಇಸ್ಮಾಯಿಲ್ ಖಾನ್, ಪಂಜಾಪ್ ಪ್ರಾಂತ್ಯದ ಮುಲ್ತಾನ್‌ನ ಹಫೀಜ್ ಅರ್ಷಾದ್ ಮತ್ತು ಬಾಬರ್ ಇಮ್ರಾನ್, ಒಕಾರಾದ ಜಾವೇದ್, ನಾರೊವಾಲ್‌ನ ಶೋಯಿಬ್, ಫೈಸಲಾಬಾದ್‌ನ ನಜೀಹ್ ಮತ್ತು ನಸ್ರ್, ಆರಿಫ್‌ವಾಲಾದ ಅಬ್ದುಲ್ ರೆಹಮಾನ್ ಹಾಗೂ ದಿಪಾಲ್ಪುರ ತಾಲೂಕಾ ಪ್ರದೇಶದ ಫಹಾದ್ ಉಲ್ಲಾಹ್ ಎಂಬ ಉಗ್ರರು ಮುಂಬೈ ಘಟನೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಇವರ ಶವಗಳನ್ನೇ ಇದೀಗ ಭಾರತ ಸರಕಾರ ದಫನ ಮಾಡಿರುವುದು.
ಈ ಮಾರಣಹೋಮ ನಡೆಸಿದ 10 ಉಗ್ರರಲ್ಲಿ ಬದುಕುಳಿದಿರುವುದು ಮತ್ತು ಸೆರೆ ಸಿಕ್ಕಿರುವುದು ಅಜ್ಮಲ್ ಅಮೀರ್ ಕಸಬ್ ಮಾತ್ರ. ಈತ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ಗ್ರಾಮದ ನಿವಾಸಿ. ಪ್ರಸಕ್ತ ಭಾರತ ವಶದಲ್ಲಿರುವ ಕಸಬ್, ನ್ಯಾಯಾಂಗ ವಿಚಾರಣೆಯನ್ನು ಎದುರಿಸುತ್ತಿದ್ದಾನೆ.
ಹತ್ಯಾಕಾಂಡದ ಬಳಿಕವೂ ನಕ್ಸಲರ ವಿರುದ್ಧ ಸೇನೆ ಬಳಸಲ್ವಂತೆ!
ಕೆಂಪು ಪಾಳಯದ ಮಾರಣಹೋಮದಲ್ಲಿ 76 ಭದ್ರತಾ ಸಿಬ್ಬಂದಿಗಳ ಅಮೂಲ್ಯ ಪ್ರಾಣಗಳನ್ನು ಕಳೆದುಕೊಂಡ ಬಳಿಕವೂ ಕೇಂದ್ರ ಸರಕಾರ ಮಿಲಿಟರಿಯನ್ನು ಮಾವೋವಾದಿಗಳ ದಮನಕ್ಕೆ ಬಳಸುವ ಬಗ್ಗೆ ಯೋಚನೆ ಮಾಡುತ್ತಿಲ್ಲ.
ನಿನ್ನೆ ದುರ್ಘಟನೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದ ನಂತರ ಮಾತನಾಡುತ್ತಿದ್ದ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ನಕ್ಸಲ್ ನಿಗ್ರಹಕ್ಕೆ ಜಿಲ್ಲಾ ಪೊಲೀಸ್ ಮತ್ತು ಅರೆ ಸೇನಾಪಡೆಗಳನ್ನು ಮಾತ್ರ ಬಳಸಲಾಗುತ್ತದೆ; ಸೇನೆಯನ್ನು ಬಳಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಕ್ಸಲರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ ಎಂದಿರುವ ಸಚಿವರು, ವಾಯುಪಡೆಯನ್ನು ಬಳಸುವ ಕುರಿತು ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದರು.
ಛತ್ತೀಸ್‌ಗಢದ ದಂತೇವಾಡದಲ್ಲಿ ನಕ್ಸಲರ ಗುಂಡಿಗೆ ಬಲಿಯಾದ 75 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ಗಳ ಆತ್ಮಗಳಿಗೆ ಶಾಂತಿ ಕೋರಿದ ನಂತರ ಮಾತನಾಡಿದ ಅವರು, 'ಮಾವೋವಾದಿಗಳ ವಿರುದ್ಧ ಸೇನೆಯನ್ನು ಬಳಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ನಕ್ಸಲರನ್ನು ಮಟ್ಟ ಹಾಕಲು ಕೇಂದ್ರೀಯ ಅರೆಸೇನಾ ಪಡೆಗಳೊಂದಿಗೆ ರಾಜ್ಯದ ಪೊಲೀಸರೇ ಸಾಕು ಎಂದೆನಿಸುತ್ತದೆ. ಇದು ಕೇಂದ್ರದ ಈಗಿನ ನಿಲುವು' ಎಂದರು.
ಪ್ರಸಕ್ತ ವಾಯು ಪಡೆ ಅಥವಾ ವೈಮಾನಿಕ ದಾಳಿಗಳನ್ನು ನಡೆಸುವ ಯಾವುದೇ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ. ಹಾಗೊಂದು ವೇಳೆ ಅಗತ್ಯ ಬಿದ್ದರೆ ಈ ಅವಕಾಶದ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದರು.
ರಾಜ್ಯಪಾಲ ಶೇಖರ್ ದತ್ ಮತ್ತು ಮುಖ್ಯಮಂತ್ರಿ ರಮಣ್ ಸಿಂಗ್ ಜತೆ ಸ್ಥಳಕ್ಕೇ ಭೇಟಿ ನೀಡಿದ ಚಿದಂಬರಂ, ನಕ್ಸಲರು ತಾವು ಕನಸು ಕಾಣುತ್ತಿರುವ ಗುರಿಯನ್ನು ತಲುಪಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅದು ಅಸಾಧ್ಯ ಎಂದರು.
ನಕ್ಸಲರು ಯುದ್ಧವನ್ನು ನಮ್ಮ ಮೇಲೆ ಹೇರಿದ್ದಾರೆ...
ದೇಶವನ್ನು ವೈರಿ ಮತ್ತು ಸಂಘರ್ಷವನ್ನು ಯುದ್ಧ ಎಂದು ಕರೆದುಕೊಂಡಿರುವುದು ನಕ್ಸಲರು. ಇದು ಅವರ ಪಾಲಿಗೆ ಯುದ್ಧವಾಗಿರಬಹುದು, ಆದರೆ ನಾನು ಯಾವತ್ತೂ ಆ ಶಬ್ದವನ್ನು ಬಳಸಿಲ್ಲ ಎಂದು ಹೇಳಲು ಬಯಸುತ್ತೇನೆ. ಹಾಗಿದ್ದೂ ಅದು ಯುದ್ಧವಾಗಿದ್ದರೆ, ಶಸ್ತ್ರಾಸ್ತ್ರ ಬಳಸಲು ಅಥವಾ ಯಾರನ್ನೂ ಕೊಲ್ಲಲು ಅಧಿಕಾರವಿಲ್ಲದವರಿಂದ ನಮ್ಮ ಮೇಲೆ ಹೇರಲಾಗಿದೆ ಎಂದೇ ನಾವು ಭಾವಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ನಿನ್ನೆ ಮಾವೋವಾದಿಗಳಿಂದ ಎದುರಾದ ಆಘಾತಕಾರಿ ಅನಿರೀಕ್ಷಿತ ಪ್ರತಿಕ್ರಿಯೆಗಳಿಗೆ ಎಚ್ಚರಿಕೆ ನೀಡಿರುವ ಅವರು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ನಕ್ಸಲರ ಆಳವಾದ ಬೆದರಿಕೆಯನ್ನು ಮಟ್ಟ ಹಾಕಲು ಪ್ರಸಕ್ತ ನಾವು ತಾಳ್ಮೆಯಿಂದಲೇ ಮುಂದುವರಿಯುತ್ತೇವೆ. ಯಾವುದೇ ವಿಚಾರದಲ್ಲಿ ತಕ್ಷಣವೇ ಯಶಸ್ಸು ಸಿಗುವುದು ಅಸಾಧ್ಯ ಎಂದರು.
Apr 7, 2010
Subscribe to:
Post Comments (Atom)
No comments:
Post a Comment