VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 7, 2010

ರಾಜ್ಯ ವಾರ್ತೆಗಳು

ಸೀರಿಯಲ್ ಕಿಲ್ಲರ್ ಮೋಹನ್‌ನ 20ನೇ ಬಲಿ ಪೂರ್ಣಿಮಾ

ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ, ಲೈಂಗಿಕ ತೀಟೆ ತೀರಿಸಿಕೊಂಡ ನಂತರ ಸೈನೆಡ್ ನೀಡಿ ಮಹಿಳೆಯರನ್ನು ಹತ್ಯೆಗೈಯುತ್ತಿದ್ದ ಸರಣಿ ಹಂತಕ ಮೋಹನ್ ಕುಮಾರ್‌ನ ಒಂದೊಂದೆ ಪ್ರಕರಣ ಬಯಲಿಗೆ ಬರುತ್ತಿದ್ದು, ಇದೀಗ ಕಾಸರಗೋಡು ಜಿಲ್ಲೆಯ ಬೇಕೂರು ಗ್ರಾಮದ ಪೂರ್ಣಿಮಾ (35) ಎಂಬ ಮಹಿಳೆಯನ್ನು ಕೊಲೆ ಮಾಡಿರುವುದು ಖಚಿತವಾಗಿದ್ದು, ಇದು ಈತನ 20ಕೊಲೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಮೋಹನ್ ಕುಮಾರ್ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸಮೀಪದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 2007ರ ಮೇ 29ರಂದು ಪೂರ್ಣಿಮಾ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಉಪ್ಪಾರಪೇಟೆ ಪೊಲೀಸರು ಮೃತಳ ಗುರುತು ಪತ್ತೆಯಾಗಿಲ್ಲ ಎಂದು ವರದಿ ಸಲ್ಲಿಸಿದ್ದರು.

ಕಿಲ್ಲರ್ ಮೋಹನ್ ಕುಮಾರ್ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ನಂತರ ಕೊಲೆ ಪ್ರಕರಣಗಳು ಬಯಲಿಗೆ ಬರತೊಡಗಿವೆ. ಪೂರ್ಣಿಮಾ ಅವರ ಸಹೋದರಿ ತನ್ನ ಅಕ್ಕ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಠಾಣೆಯಲ್ಲಿ ಈ ಹಿಂದೆಯೇ ದೂರು ದಾಖಲಿಸಿದ್ದರು. ಈ ಸಂಬಂಧ ಅವರ ವಿಚಾರಣೆ ನಡೆಸಿ ಮೃತಳ ಶವದ ಭಾವಚಿತ್ರ ಮತ್ತು ಆಕೆಯ ವಸ್ತುಗಳನ್ನು ನೋಡಿದ ಕುಟುಂಬದ ಸದಸ್ಯರು ಪೂರ್ಣಿಮಾಳೇ ಮೃತಪಟ್ಟಿರುವುದಾಗಿ ದೃಢಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಸರಣಿ ಹಂತಕ ಮೋಹನ್ ಕುಮಾರ್ ವಿರುದ್ಧ 13ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇನ್ನೂ ಏಳು ಪ್ರಕರಣಗಳ ತನಿಖೆ ಮುಂದುವರಿದಿದೆ ಎಂದು ಸಿಐಡಿ ಡಿಜಿಪಿ ಡಿ.ವಿ.ಗುರುಪ್ರಸಾದ್ ಹೇಳಿದ್ದಾರೆ.

ಗಂಡು ಮಗು ಹೆರದ 2ನೆ ಪತ್ನಿಯನ್ನೇ ಕೊಂದ ಪತಿರಾಯ!

ಗಂಡು ಮಗುವನ್ನು ಹೆರದ ವಿಷಯವನ್ನೇ ನೆಪವಾಗಿಟ್ಟುಕೊಂಡು ಜಗಳ ತೆಗೆದು ಎರಡನೇ ಪತ್ನಿಯನ್ನು ಪತಿರಾಯ ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಆರ್.ಟಿ.ನಗರದ ಮಠದಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಠದಹಳ್ಳಿಯ ಕೆಂಚಪ್ಪ ಬ್ಲಾಕ್‌ನಲ್ಲಿ ಹಣಕಾಸಿನ ಲೇವಾದೇವಿ ನಡೆಸುತ್ತಿದ್ದ ಆನಂದ (36) ಎರಡನೇ ಪತ್ನಿ ನೀಲಾಶ್ರೀಯನ್ನು (26) ಮಧ್ಯರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಲು ತಿಳಿಸಿವೆ.

ಆನಂದನ ಮೊದಲ ಪತ್ನಿ ಮುನಿರೆಡ್ಡಿ ಪಾಳ್ಯದಲ್ಲಿದ್ದು ಆಕೆಗೂ ಎರಡು ಮಕ್ಕಳಿವೆ. ಆದರೂ ನೀಲಾಶ್ರೀಯನ್ನು ಮೂರು ವರ್ಷಗಳ ಹಿಂದೆ ಎರಡನೇ ವಿವಾಹವಾಗಿದ್ದು ಆಕೆಗೂ ಒಂದುವರೆ ವರ್ಷದ ಹೆಣ್ಣು ಮಗುವಿದೆ.

ನೀಲಾಶ್ರೀಗೆ ಗಂಡು ಮಗುವಾಗಿಲ್ಲದಿರುವ ಕಾರಣ ಆಗಾಗ ಆಕೆಯೊಂದಿಗೆ ಜಗಳ ತೆಗೆಯುತ್ತಿದ್ದು, ನಿನ್ನೆ ರಾತ್ರಿ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ನೀಲಾಶ್ರೀಯನ್ನು ಹಾಸಿಗೆಯ ಮೇಲೆಯೇ ಉಸಿರುಗಟ್ಟಿಸಿ ಕೊಂದಿದ್ದ.

ನೀಲಾಶ್ರೀ ಅವರ ಸಹೋದರ ನಾರಾಯಣಸ್ವಾಮಿ ಅವರು ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಆರ್.ಟಿ.ನಗರದ ಪೊಲೀಸರು ಇದೀಗ ಆರೋಪಿಯ ಪತ್ತೆಗೆ ತೀವ್ರ ಶೋಧ ನಡೆಸುತ್ತಿದ್ದಾರೆ.

ಆತ್ಮಚರಿತ್ರೆಯಲ್ಲಿ ಎಲ್ಲ ಬಯಲು ಮಾಡುವೆ: ದೇವೇಗೌಡ

ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವೆ' ಎಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಬಿಎಂಪಿ ಫಲಿತಾಂಶ ಕುಮಾರಸ್ವಾಮಿ ಸಾಮರ್ಥ್ಯದ ಮಾನದಂಡವಲ್ಲ ಎಂದಿದ್ದಾರೆ. ಅಲ್ಲದೇ ತನ್ನ ಆತ್ಮಚರಿತ್ರೆಯಲ್ಲಿ ಹಲವು ಅಕ್ರಮಗಳನ್ನು ಬಯಲು ಮಾಡುವುದಾಗಿಯೂ ಘೋಷಿಸಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿರುವ ಬಗ್ಗೆ ಮಂಗಳವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಬಿಎಂಪಿ ಫಲಿತಾಂಶದ ಆಧಾರದ ಮೇಲೆ ಜೆಡಿಎಸ್ ಪಕ್ಷದ ಸಾಮರ್ಥ್ಯವನ್ನು ಅಳೆಯುವ ಅಗತ್ಯವಿಲ್ಲ ಎಂದು ಗುಡುಗಿದ್ದಾರೆ.

ಅಲ್ಲದೇ ತಾವು ಇಬ್ಬರು ಶತ್ರುಗಳನ್ನು ಎದುರಿಸುತ್ತಿರುವುದಾಗಿ ಹೇಳಿದ ಅವರು, ಭೂ ಮಾಫಿಯಾ ಮತ್ತು ಗಣಿ ಧಣಿಗಳು ಶತ್ರುಗಳಾಗಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಆ ನಿಟ್ಟಿನಲ್ಲಿ ನೈಸ್ ಅಕ್ರಮದ ವಿರುದ್ಧದ ಹೋರಾಟ ಮುಂದುವರಿಯುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ ಎಂದು ಪಕ್ಷದ ಮುಖಂಡರು, ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ ಎಂದು ಧೈರ್ಯ ತುಂಬಿದ್ದಾರೆ.

ನೈಸ್ ಅಕ್ರಮದ ಕುರಿತು ವಾಗ್ದಾಳಿ ಮುಂದುವರಿಸಿದ ಗೌಡರು, ನೈಸ್ ಸಂತ್ರಸ್ತರ ರೈತರ ಭೂಮಿಗೆ ಬೆಲೆ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಸಭೆ ಕರೆಯಲು ಅಧಿಕಾರ ಕೊಟ್ಟವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಗಣಿಧಣಿಗಳ ಊರಾದ ಬಳ್ಳಾರಿಯಲ್ಲಿನ ಸ್ಥಿತಿಗತಿಗಳನ್ನು ನೋಡಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಲ್ಲಿದೆಯೇ ಎಂಬ ಬಗ್ಗೆ ಅನುಮಾನ ಮೂಡುತ್ತಿರುವುದಾಗಿ ಹೇಳಿದರು.

ಈ ಹಿಂದಿನ ಹಾಗೂ ಪ್ರಸಕ್ತ ರಾಜಕೀಯ ಚದುರಂಗದಾಟದಲ್ಲಿ ಏನೆಲ್ಲಾ ಆಗಿದೆ ಎಂಬ ಬಗ್ಗೆ ತನ್ನ ಆತ್ಮಚರಿತ್ರೆಯಲ್ಲಿ ಎಲ್ಲವನ್ನೂ ಬಯಲು ಮಾಡುವುದಾಗಿ ಮುನ್ಸೂಚನೆ ಕೊಟ್ಟ ಗೌಡರು, ಮಾಧ್ಯಮಗಳ ಶಕ್ತಿಯೇ ತನ್ನ ಸಂಪನ್ಮೂಲ ಎಂದರು.

ಮಠಗಳಿಂದ ಸರ್ಕಾರಕ್ಕೆ ಗಜಬಲ ಬಂದಂತಾಗಿದೆ: ಸಿಎಂ

ರಾಜ್ಯದ ಶೈಕ್ಷಣಿಕ ಕಾರ್ಯಗಳ ಸುಧಾರಣೆಯಲ್ಲಿ ಮಠಗಳ ಪಾತ್ರ ಪ್ರಮುಖವಾಗಿದ್ದು, ಸರ್ಕಾರಕ್ಕೆ ಗಜಬಲ ಸಿಕ್ಕಿದಂತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಹೊಸಮಠ ನಟರಾಜ ಪ್ರತಿಷ್ಠಾನ ಮಂಗಳವಾರ ಏರ್ಪಡಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೊಸಮಠ ರೀತಿಯಲ್ಲಿಯೇ ವೀರಶೈವ ಮಠಗಳು ರಾಜ್ಯದಲ್ಲಿ ನಡೆಸುತ್ತಿರುವ ಶೈಕ್ಷಣಿಕ ಸೇವೆ ಮಠಗಳಿಂದಲೇ ನಡೆಯುತ್ತಿದೆ.

ಶಾಲಾ-ಕಾಲೇಜಗಳನ್ನು ಸ್ಥಾಪಿಸುವುದು ಹಾಗೂ ಅವುಗಳ ನಿರ್ವಹಣೆ ಈಗ ಮಠಗಳಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಕಾರ್ಯವೈಖರಿ ಬಗ್ಗೆ ಹಲವು ಟೀಕೆ-ಟಿಪ್ಪಣಿಗಳಿವೆ. ಅದಕ್ಕೆ ನಾವು ಜಗ್ಗುವುದಿಲ್ಲ. ನಮಗೆ ಜನಸಾಮಾನ್ಯರ ಹಾಗೂ ಮಠಗಳ ಬೆಂಬಲ, ಆಶೀರ್ವಾದ ಸದಾ ಇರಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

No comments: