
ಯಮರೂಪಿಯಾದ ಸ್ನೇಹಿತನ ಬೈಕ್!
ಮಂಗಳೂರು: ಸಹೋದರನ ಮದುವೆ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೋರ್ವ ಬಸ್ಸಿನಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಅಪಘಾತ ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದು ಈ ಸಂದರ್ಭದಲ್ಲಿ ಬಸ್ 15 ಅಡಿ ಆಳಕ್ಕೆ ಬಿದ್ದಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಜೆಪ್ಪು ಸಮೀಪದ ಮುಳಿಹಿತ್ಲು ನಿವಾಸಿ ದಾಮೋದರ ಶೆಟ್ಟಿ ಎಂಬವರ ಮಗ ಯಕ್ಷಿತ್ ಶೆಟ್ಟಿ (22) ಮೃತಪಟ್ಟವರು. ಇವರು ಐದು ವರ್ಷಗಳವರೆಗೆ ವಿದೇಶದಲ್ಲಿದ್ದು ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ನಿನ್ನೆ ಅವರ ಚಿಕ್ಕಪ್ಪನ ಮಗನ ಮದುವೆ ಕಾರ್ಯಕ್ರಮ ಸಂಕೊಳಿಗೆ ಹಾಲ್ನಲ್ಲಿದ್ದು, ಇದರಲ್ಲಿ ಭಾಗವಹಿಸಿದ್ದ ಯಕ್ಷಿತ್ ಬಳಿಕ ತನ್ನ ಸ್ನೇಹಿತನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಕಲ್ಲಾಪು ಬಳಿ ಎದುರಿನಿಂದ ಬಂದ ಕಣ್ಣೂರಿಗೆ ಹೋಗುತ್ತಿದ್ದ ಮೆಹಬೂಬ್ ಬಸ್ನಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯನ್ನು ತಪ್ಪಿಸಲು ಬಸ್ ಚಾಲಕ ಹರಸಾಹಸ ಪಟ್ಟಿದ್ದರೂ ಯಕ್ಷಿತ್ನ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ವೇಳೆ ಚಾಲಕ ನಿಯಂತ್ರಣ ತಪ್ಪಿದ ಕಾರಣ ಬಸ್ ಉರುಳಿ ಬಿದ್ದಿತ್ತು. ಬಸ್ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರೂ ಅವರ ಪೈಕಿ 14 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಹೊಸಂಗಡಿಯ ಮಹಮ್ಮದ್ (65) ಮತ್ತು ಕಾಸರಗೋಡು ಮೀಂಜ ನಿವಾಸಿ ಪ್ರಸಾದ್ (29) ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಸ್ ನಿಧಾನಗತಿಯಲ್ಲಿ ಚಲಿಸುತ್ತಿದ್ದ ವೇಳೆ ಎದುರಿನಿಂದ ಅಡ್ಡಾದಿಡ್ಡಿಯಾಗಿ ವಿರುದ್ಧ ದಿಕ್ಕಿನಿಂದ ಬೈಕ್ ಬಂದಿದ್ದು ಅದನ್ನು ತಪ್ಪಿಸಲು ಚಾಲಕ ಹರಸಾಹಸ ಪಟ್ಟಿದ್ದರೂ ಬೈಕ್ ಬಸ್ ನಡಿ ಸಿಲುಕಿದ್ದು ನಂತರ ಬಸ್ ಕೂಡಾ 15 ಅಡಿ ಆಳಕ್ಕೆ ಉರುಳಿದೆ ಎಂದು ಅಪಘಾತಕ್ಕೀಡಾದ ಬಸ್ನಲ್ಲಿದ್ದ ಪ್ರಯಾಣಿಕ ಚಂದ್ರಹಾಸ ಶೆಟ್ಟಿ ಎಂಬವರು ಪತ್ರಿಕೆಗೆ ತಿಳಿಸಿದ್ದಾರೆ.
No comments:
Post a Comment