ಶನಿವಾರ ನಡೆದ ವಿಮಾನ ಅಪಘಾತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಟ್ಟು ಹತ್ತು ಮಂದಿ ಮೃತಪಟ್ಟಿದ್ದಾರೆ. 
 
ಕಾರವಾರ: ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದ ವಿಮಾನ ಅಪಘಾತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಟ್ಟು ಹತ್ತು ಮಂದಿ ಮೃತಪಟ್ಟಿದ್ದಾರೆ. ಭಟ್ಕಳ ತಾಲ್ಲೂಕಿನ ಎಂಟು, ಕಾರವಾರ ಹಾಗೂ ದಾಂಡೇಲಿಯ ತಲಾ ಒಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಮೃತಪಟ್ಟವರಲ್ಲಿ ಭಟ್ಕಳ ಮಾವಿನಕುರ್ವೆ ಬಂದರ ರಸ್ತೆಯ ಮಹಮ್ಮದ್ ನಾಸೀರ್ ದಾಮುದಿ (42), ಈತನ ಮಕ್ಕಳಾದ ಬಿಬಿಸಾರ (11) ನಬೀಹಾ (9) ಹಾಗೂ ಸುಹೇದ್ (6). ಜಾಲಿರಸ್ತೆಯ ನಿವಾಸಿ ಆಫ್ರೀನ್ (23), ಮಗ ಅಬಾನ್ (3) ಹಾಗೂ ಸಂಬಂಧಿ ಅಬ್ದುಲ್ ಬಾರ್ (11), ಸರಕಾರಿ ಆಸ್ಪತ್ರೆ ಸಮೀಪದ ನಿವಾಸಿ ಉಸ್ಮಾನ್ ಶೇಖ್ (48), ದಾಂಡೇಲಿ ಹಳೆ ದಾಂಡೇಲಿಯ ಮಹೇಂದ್ರ ಕೊಡ್ಕಣಿ ಹಾಗೂ ಕಾರವಾರ ತಾಲ್ಲೂಕಿನ ಕಡವಾಡ ಸುಲ್ತಾನ ಪುರದ ಪ್ರಸಾದ ಆನಂದು ಮಾಂಜ್ರೇಕರ್ (28) ಸೇರಿದ್ದಾರೆ. ದುಬೈನಲ್ಲಿ ಉದ್ಯಮಿ ಆಗಿರುವ ಭಟ್ಕಳ ಮೂಲದ ಮಹಮ್ಮದ್ ನಾಸೀರ್ ದಾಮುದಿ ಒಂದು ತಿಂಗಳ ಹಿಂದಷ್ಟೇ ದುಬೈಗೆ ತೆರಳಿದ್ದರು. ಒಂದೂವರೆ ತಿಂಗಳ ಹಿಂದೆ ಬೈಂದೂರು ತಾಲ್ಲೂಕಿನ ಕಂಬದಕೋಣೆಯಲ್ಲಿ ಟಾಟಾ ಸುಮೊ ಹಾಗೂ ಬಸ್ ಮಧ್ಯೆ ನಡೆದ ಅಪಘಾತದಲ್ಲಿ ನಾಸೀರ್ ದಾಮುದಿ ಅವರ ಪತ್ನಿ ಮೃತಪಟ್ಟಿದ್ದರು.
ಪತ್ನಿ ಅಗಲಿಕೆಯ ನಂತರ ಮಹಮ್ಮದ್ ದಾಮುದಿ ತಮ್ಮ ಮೂವರು ಮಕ್ಕಳಾದ ಬಿಬಿಸಾರ ಹಾಗೂ ಸುಹೇದ್ ಹಾಗೂ ನಬೀಹಾಳನ್ನು ಕರೆದುಕೊಂಡು ದುಬೈಗೆ ಹೋಗಿ, ಶನಿವಾರ ಊರಿಗೆ ಮರಳುತ್ತಿದ್ದ ವೇಳೆ ನಡೆದ ವಿಮಾನ ಅಪಘಾತದಲ್ಲಿ ಸಾವು ಕಂಡಿದ್ದಾರೆ. 
ಭಟ್ಕಳ ಜಾಲಿ ರಸ್ತೆಯ ನಿವಾಸಿ ಆಫ್ರೀನ್ ಹಾಗೂ ಈಕೆಯ ಮಗ ಅಬಾನ್ ಶಾಲೆಗೆ ರಜೆ ಇದ್ದಿದ್ದರಿಂದ ದುಬೈನಲ್ಲಿ ಉದ್ಯೋಗದಲ್ಲಿರುವ ಗಂಡನ ಹತ್ತಿರ ಹೋಗಿ ಊರಿಗೆ ಮರಳುತ್ತಿದ್ದರು ಎನ್ನಲಾಗಿದೆ. ಇವರೊಂದಿಗೆ ಸಂಬಂಧಿ ಅಬ್ದುಲ್‌ಬಾರ್ ಎಂಬುವವರೂ ಇದ್ದರು. 
 ದಾಂಡೇಲಿ, ಹಳೆದಾಂಡೇಲಿ ನಿವಾಸಿ ಮಹೇಂದ್ರ ಕೊಡ್ಕಣಿ ಉದ್ಯೋಗ ನಿಮಿತ್ತ ದುಬೈನಲ್ಲಿದ್ದರು. ಎಂಟತ್ತು ದಿನದ ಹಿಂದೆ ಊರಿಗೆ ಬಂದು ಹೋಗಿದ್ದ ಮಹೇಂದ್ರ, ದುಬೈನಲ್ಲಿದ್ದ ಹೆಂಡತಿ ತಾಯಿಯ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಕರೆದುಕೊಂಡು ಮಂಗಳೂರಿಗೆ ಮರಳುತ್ತಿದ್ದರು.
May 23, 2010
Subscribe to:
Post Comments (Atom)
No comments:
Post a Comment