VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

13 ವರ್ಷದಲ್ಲಿ 380 ದುರಂತ; 6 ಸಾವಿರ ಬಲಿ

ಕಳೆದ 13 ವರ್ಷಗಳಲ್ಲಿ ವಿಶ್ವದಾದ್ಯಂತ ನಡೆದ 380 ಪ್ರಮುಖ ವಿಮಾನ ದುರಂತಗಳಲ್ಲಿ ಸುಮಾರು 6 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನವದೆಹಲಿ (ಪಿಟಿಐ): ಅಮೆರಿಕ ಮೂಲದ ವಿಮಾನಯಾನ ಸಂಸ್ಥೆ ಬೋಯಿಂಗ್‌ನ 2007ರ ವರದಿಯ ಪ್ರಕಾರ, 1998ರಿಂದ 2007ರ ನಡುವೆ ನಡೆದ 286 ವಾಣಿಜ್ಯ ಹಾಗೂ 70 ಸರಕು ಸಾಗಣೆ ಜೆಟ್ ವಿಮಾನಗಳನ್ನು ಒಳಗೊಂಡ 346 ಅಪಘಾತಗಳಲ್ಲಿ 5147 ಮಂದಿ ಸಾವಿಗೀಡಾಗಿದ್ದಾರೆ.

ಇವುಗಳ ಪೈಕಿ 78 ಅಪಘಾತಗಳು ಮಾರಣಾಂತಿಕವಾಗಿದ್ದರೆ 146 ಅಪಘಾತಗಳಲ್ಲಿ ವಿಮಾನಗಳು ದುರಸ್ತಿ ಮಾಡಲಾಗದಷ್ಟು ಸಂಪೂರ್ಣ ನಾಶವಾಗಿವೆ ಎಂದು ವಾಣಿಜ್ಯ ಜೆಟ್ ವಿಮಾನ ಅಪಘಾತ 1959- 2008ರ ವರದಿಯ ಅಂಕಿಅಂಶ ತಿಳಿಸಿದೆ. ಶನಿವಾರ ಬೆಳಿಗ್ಗೆ ನಡೆದ ಮಂಗಳೂರು ದುರಂತವೂ ಸೇರಿದಂತೆ 2008ರಿಂದೀಚೆಗೆ 40 ಅಪಘಾತಗಳು ಸಂಭವಿಸಿದ್ದು ಕಳೆದ ಮೂರು ವರ್ಷಗಳಲ್ಲಿ ಸುಮಾರು ಒಂದು ಸಾವಿರ ಮಂದಿ ಕೊನೆಯುಸಿರೆಳೆದಿದ್ದಾರೆ.
ಕಳೆದ 10 ವರ್ಷಗಳಲ್ಲಿ ನಡೆದ ಪ್ರಮುಖ ವಿಮಾನ ದುರಂತಗಳ ವಿವರ ಇಲ್ಲಿದೆ:

2010
ಮಂಗಳೂರು ಅಪಘಾತಕ್ಕೆ ಕೇವಲ 10 ದಿನಗಳ ಹಿಂದೆ ಜೋಹಾನ್ಸ್‌ಬರ್ಗ್‌ನಿಂದ ಹೊರಟಿದ್ದ ‘ಆಫ್ರಿಕಿಯಾ ಏರ್‌ವೇಸ್’ನ ವಿಮಾನ ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಇಳಿಯುವ ಹಂತದಲ್ಲಿದ್ದಾಗ ನೆಲಕ್ಕೆ ಅಪ್ಪಳಿಸಿ 103 ಮಂದಿ ಮೃತರಾಗಿದ್ದರು. 9 ವರ್ಷದ ಬಾಲಕ ಮಾತ್ರ ಅಚ್ಚರಿದಾಯಕವಾಗಿ ಬದುಕುಳಿದಿದ್ದ.


ಇದಕ್ಕೆ ಒಂದು ತಿಂಗಳ ಮುನ್ನ ರಷ್ಯಾದ ಸ್ಮೋಲೆನ್ಸ್‌ಕ್ ಎಂಬಲ್ಲಿ ಪೋಲೆಂಡ್‌ನ ಅಧ್ಯಕ್ಷ ಲೆಚ್ ಕಜಿನ್ಸ್‌ಸ್ಕಿ ಸೇರಿದಂತೆ 93 ಮಂದಿ ಇದ್ದ ವಿಮಾನ ಅಪಘಾತಕ್ಕೀಡಾಗಿ ಎಲ್ಲರೂ ಪ್ರಾಣ ಕಳೆದುಕೊಂಡಿದ್ದರು.

2009
228 ಜನರನ್ನು ಹೊತ್ತಿದ್ದ ‘ಏರ್‌ಫ್ರಾನ್ಸ್ ಏರ್‌ಬಸ್ ಎ- 330’ ಜೂನ್ 1ರಂದು ರಿಯೊ ಡಿ ಜನೈರೊದಿಂದ ಪ್ಯಾರಿಸ್ ತಲುಪುವ ಮಾರ್ಗದಲ್ಲಿ ಚಂಡಮಾರುತದ ಬಿರುಮಳೆಯಿಂದಾಗಿ ಅಟ್ಲಾಂಟಿಕ್ ಸಾಗರಕ್ಕೆ ಕುಸಿದುಬಿದ್ದು ಸರ್ವ ನಾಶವಾಗಿತ್ತು.

ಅದೇ ತಿಂಗಳ 30ರಂದು ಕೊಮೊರೋಸ್ ದ್ವೀಪ ತಲುಪಬೇಕಿದ್ದ ‘ಯೆಮಿನಿಯ ಏರ್‌ಬಸ್- 310’ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿ 153 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಇದಾದ ಕೇವಲ 15 ದಿನಗಳಲ್ಲೇ ಇರಾನ್‌ನ ವಿಮಾನ ಖಾಜ್‌ವಿನ್ ನಗರದಲ್ಲಿ ಅಪಘಾತಕ್ಕೀಡಾಗಿ ಎಲ್ಲ 168 ಮಂದಿಯೂ ಸಾವಿಗೀಡಾಗಿದ್ದರು.

2008
ಆಗಸ್ಟ್‌ನಲ್ಲಿ ಸ್ಪೇನ್‌ನ ಮ್ಯಾಡ್ರಿಡ್ ಬರಾಜಸ್ ನಿಲ್ದಾಣದಲ್ಲಿ ವಿಮಾನವೊಂದು ಟೇಕಾಫ್ ಆಗುತ್ತಿದ್ದಾಗ ಕುಸಿದು ಅದರಲ್ಲಿದ್ದ 172 ಮಂದಿಯಲ್ಲಿ 154 ಜನ ಇಹಲೋಕ ತ್ಯಜಿಸಿದ್ದರು.

ಈ ವರ್ಷ ನಡೆದ ಇನ್ನೆರಡು ಪ್ರಮುಖ ಅಪಘಾತಗಳೆಂದರೆ 46 ಜನರನ್ನು ಬಲಿ ತೆಗೆದುಕೊಂಡ ‘ಸಾಂತಾ ಬಾರ್ಬರಾ ಏರ್‌ಲೈನ್ಸ್’ ವಿಮಾನ ಹಾಗೂ 71 ಜನರನ್ನು ಕೊಂದು ಹಾಕಿದ ಕಿರ್ಗಿಸ್ತಾನದ ಬಿಷ್ಕೇಕ್ ಎಂಬಲ್ಲಿ ನಡೆದ ‘ಐಟೆಕ್ ಏರ್’ ವಿಮಾನ ದುರಂತ.

2007
119 ಜನರಿದ್ದ ‘ಟ್ಯಾಮ್ ಏರ್‌ಬಸ್’ ಬ್ರೆಜಿಲ್‌ನ ಸೌ ಪೌಲೊ ನಗರದ ರನ್‌ವೇಯ ಕೊನೆಯಲ್ಲಿ ನಿಯಂತ್ರಣ ಕಳೆದುಕೊಂಡು ಅನಿಲ ಕೇಂದ್ರ ಹಾಗೂ ಕಟ್ಟಡಕ್ಕೆ ಅಪ್ಪಳಿಸಿ ಬೆಂಕಿಯ ಕೆನ್ನಾಲಿಗೆಯಲ್ಲಿ ಉರಿದುಹೋಗಿತ್ತು.

2006
ಇದು ಮೂರು ಪ್ರಮುಖ ದುರಂತಗಳಲ್ಲಿ 450ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಕರಾಳ ವರ್ಷ. ‘ಸಿಬಿರ್’ (ಎಸ್7) ವಿಮಾನ ಜುಲೈನಲ್ಲಿ ರಷ್ಯಾದ ಇರ್‌ಕುತ್ಸ್‌ಕ್ ಪ್ರದೇಶದಲ್ಲಿ ಅಪ್ಪಳಿಸಿದಾಗ 128 ಮಂದಿ ಹಾಗೂ ಉಕ್ರೇನ್ ಡೋಂಟ್ಸ್‌ಕ್‌ನಲ್ಲಿ ನಡೆದ ‘ಪುಲ್ಕೋವೊ ಏರ್‌ಲೈನ್ಸ್’ ದುರಂತದಲ್ಲಿ 170 ಮಂದಿ ಸತ್ತಿದ್ದರು. ಇದಾದ ಒಂದು ತಿಂಗಳಲ್ಲೇ ಬ್ರೆಜಿಲ್‌ನಲ್ಲಿ ನಡೆದ ‘ಗೋಲ್ ಏರ್‌ಲೈನ್ಸ್’ ವಿಮಾನ ಪತನ 154 ಮಂದಿಯನ್ನು ಕೊಂದು ಹಾಕಿತ್ತು.

2005
ಆಗಸ್ಟ್‌ನಲ್ಲಿ ‘ವೆಸ್ಟ್ ಕೆರಿಬಿಯನ್ ಏರ್‌ವೇಸ್’ನ ವಿಮಾನ ಕೊಲಂಬಿಯ- ವೆನಿಜುವೆಲ ಗಡಿಯಲ್ಲಿರುವ ಸಿಯಾರ ಡಿ ಪೆರಿಜ ಕಣಿವೆಗೆ ಅಪ್ಪಳಿಸಿದಾಗ ಒಳಗಿದ್ದ ಎಲ್ಲ 160 ಜನರೂ ಸತ್ತಿದ್ದರು.

ಇಂಡೊನೇಷ್ಯಾದ ಮೇಡನ್ ಎಂಬಲ್ಲಿ ರನ್‌ವೇಯಿಂದ ಹೊರಟ ‘ಮಂಡಲ ಏರ್‌ಲೈನ್ಸ್’ನ ‘ಬೋಯಿಂಗ್ 737- 230’ ಕೆಲವೇ ಸೆಕೆಂಡುಗಳಲ್ಲಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸಮೀಪದ ವಸತಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಆಗ 143 ಮಂದಿ ಸತ್ತಿದ್ದರು.

ಫೆಬ್ರುವರಿಯಲ್ಲಿ ‘ಕಾಮ್ ಏರ್’ ವಿಮಾನ ಕಾಬೂಲ್ ಸಮೀಪ 11 ಸಾವಿರ ಅಡಿ ಎತ್ತರದ ಚಪೇರಿ ಬೆಟ್ಟಕ್ಕೆ ಡಿಕ್ಕಿ ಹೊಡೆದು 104 ಮಂದಿ ಸಮಾಧಿಯಾಗಿದ್ದರು.

2003
2003ರ ಫೆಬ್ರುವರಿಯಲ್ಲಿ ಇರಾನ್ ಸೇನೆಯ ಕ್ರಾಂತಿಕಾರಿ ಪಡೆಗೆ ಸೇರಿದ ವಿಮಾನ ಕಣಿವೆಗೆ ಅಪ್ಪಳಿಸಿ 275 ಮಂದಿಯನ್ನು ಕೊಂದು ಹಾಕಿದ್ದರೆ, ಸೂಡಾನ್ ಬಂದರಿನ ಬಳಿ ಅಪಘಾತಕ್ಕೀಡಾದ ‘ಸೂಡಾನ್ ಏರ್‌ವೇಸ್’ ವಿಮಾನ 116 ಜನರ ಪ್ರಾಣ ಕಳೆದಿತ್ತು. ಆಲ್ಜೀರಿಯಾ ನಿಲ್ದಾಣದಿಂದ ಟೇಕಾಫ್ ಯತ್ನದಲ್ಲಿದ್ದಾಗ ನಿಯಂತ್ರಣ ಕಳೆದುಕೊಂಡ ‘ಏರ್ ಆಲ್ಜೀರ್’ ವಿಮಾನದಲ್ಲಿದ್ದ 100ಕ್ಕೂ ಹೆಚ್ಚು ಮಂದಿ ಇಹಲೋಕ ತ್ಯಜಿಸಿದ್ದರು.

2002
ಈ ವರ್ಷ ನಡೆದ ನಾಲ್ಕು ವಿಮಾನ ದುರಂತಗಳಲ್ಲಿ ಎರಡು ‘ಚೀನಾ ಏರ್‌ಲೈನ್ಸ್’ಗೆ ಸೇರಿದವು. ಇವುಗಳಲ್ಲಿ ಭೀಕರವಾದದ್ದೆಂದರೆ ಮೇ 25ರ ‘ಚೀನಾ ಏರ್‌ಲೈನ್ಸ್’ನ ‘ಬೋಯಿಂಗ್ 747’ಕ್ಕೆ ಸೇರಿದ್ದು. ಆ ನತದೃಷ್ಟ ವಿಮಾನ ಮಾರ್ಗ ಮಧ್ಯೆ ಸಿಡಿದು ಹೋಳಾಗಿ ತೈವಾನ್ ಜಲಸಂಧಿಗೆ ಕುಸಿದುಬಿದ್ದಿತ್ತು. ಒಳಗಿದ್ದ 225 ಮಂದಿ ಜಲಸಮಾಧಿಯಾಗಿದ್ದರು.

ಇದಕ್ಕೆ ಮುನ್ನ ನಡೆದ ಮತ್ತೊಂದು ದುರಂತದಲ್ಲಿ ‘ಏರ್ ಚೀನಾ’ ವಿಮಾನ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿರುವ ಕಿಮ್ಹೆ ನಿಲ್ದಾಣದಲ್ಲಿ ಇಳಿಯುವ ಸನ್ನಾಹದಲ್ಲಿದ್ದಾಗ ತೀವ್ರ ಗಾಳಿ, ಮಳೆ ಮತ್ತು ಮಂಜಿನಿಂದಾಗಿ ಪರ್ವತವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಸಿಬ್ಬಂದಿಯೂ ಸೇರಿದಂತೆ 166 ಪ್ರಯಾಣಿಕರಲ್ಲಿ 128 ಜನ ಸತ್ತಿದ್ದರು.

ಕೊಲಂಬಿಯಾದಲ್ಲಿ ಜನವರಿ 28ರಂದು ನಡೆದ ‘ಟೇಮ್ ಏರ್‌ಲೈನರ್’ ಅವಘಡ, ನೈಜೀರಿಯಾದ ‘ಇಎಎಸ್ ಏರ್‌ಲೈನ್ಸ್’ ದುರಂತ ಮತ್ತು ಜರ್ಮನಿಯ ಉಬೇರ್‌ಲಿಂಗನ್ ಬಳಿ ಮೋಡಗಳ ನಡುವೆ ನಡೆದ ‘ಬಷ್ಕಿರಿಯನ್ ಏರ್‌ಲೈನ್ಸ್’ ಹಾಗೂ ಡಿಎಚ್‌ಎಲ್ ಸರಕು ಸಾಗಣೆ ವಿಮಾನಗಳ ಡಿಕ್ಕಿಯಲ್ಲಿ ಕ್ರಮವಾಗಿ 92, 77 ಮತ್ತು 71 ಮಂದಿ ಸಾವಿಗೀಡಾಗಿದ್ದರು.

2001
ನವೆಂಬರ್‌ನಲ್ಲಿ ‘ಅಮೆರಿಕನ್ ಏರ್‌ಲೈನ್ಸ್’ನ ಎ- 300 ವಿಮಾನ ಜೆಎಫ್‌ಕೆ ನಿಲ್ದಾಣದಿಂದ ನ್ಯೂಯಾರ್ಕ್‌ಗೆ ಟೇಕ್‌ಆಫ್ ಆಗುತ್ತಿದ್ದಂತೆಯೇ ದುರಂತ ಸಂಭವಿಸಿ ನೆಲದ ಮೇಲಿದ್ದವರೂ ಸೇರಿ 265 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಜುಲೈನಲ್ಲಿ ‘ಅಮೆರಿಕನ್ ಏರ್‌ಲೈನ್ಸ್’ನ ವಿಮಾನ ವರ್ಜೀನಿಯಾದ ಆರ್ಲಿಂಗ್ಟನ್‌ನಲ್ಲಿ ಪತನಗೊಂಡು 189 ಮಂದಿ ಹಾಗೂ ಅದೇ ತಿಂಗಳು ‘ವ್ಲಾಡಿವೊಸ್ಟೊಕಾವಿಯ ಏರ್‌ಲೈನರ್’ನ ವಿಮಾನಕ್ಕೆ ಸೈಬೀರಿಯಾದಲ್ಲಿ ಬೆಂಕಿ ಹೊತ್ತಿಕೊಂಡು 145 ಮಂದಿ ಅಂತ್ಯ ಕಂಡಿದ್ದರು.

ಇಷ್ಟೇ ಅಲ್ಲದೆ ಕಳೆದ 10 ವರ್ಷಗಳಲ್ಲಿ ದೊಡ್ಡ ಮತ್ತು ಸಣ್ಣ ವಿಮಾನಗಳ ಚಿಕ್ಕ ಪುಟ್ಟ ಅಪಘಾತಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಭವಿಸಿವೆ.

No comments: