VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಕಾಸರಗೋಡಿನ 28 ಮಂದಿ ಸಾವು

ಪ್ರಾಥಮಿಕ ವರದಿ ಲಭಿಸಿದಾಗ ಕಾಸರಗೋಡು ಜಿಲ್ಲೆಯ 24 ಮಂದಿ ವಿಮಾನವೇರಿದ್ದರು ಎಂಬ ಮಾಹಿತಿ ಲಭಿಸಿತ್ತು.

ಕಾಸರಗೋಡು: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದ ಬಳಿ ಶನಿವಾರ ಮುಂಜಾನೆ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಕಾಸರಗೋಡು ಜಿಲ್ಲೆಯ 28 ಮಂದಿ ಸಾವನ್ನಪ್ಪಿದ್ದಾರೆ.

ತಳಂಗೆರೆ ನಿವಾಸಿ ಇಬ್ರಾಹಿಂ ಖಲೀಲ್ (45), ನೆಲ್ಲಿಕುಂಜೆಯ ಸಿದ್ದಿಖ್, ಉಪ್ಪಳದ ಅಬ್ದುಲ್ ಅಸೀಸ್ (38), ಉಪ್ಪಳ ಬಪ್ಪಾಯಿತೊಟ್ಟಿಯ ಬಶೀರ್ (40), ಇವರ ಸಹೋದರ ಸಿದ್ದೀಖ್ (35), ನೀಲೇಶ್ವರದ ಟಿ.ವಿ.ಭಾಸ್ಕರನ್, ಅವರ ಪತ್ನಿ ಕೋಮಲಂ, ಮಂಜೇಶ್ವರದ ಕೆ.ಎಂ.ಅಬ್ದುಲ್ಲ (55), ಉದುಮದ ಮಾಹಿನ್, ಮೊಗ್ರಾಲ್ ಕೊಪ್ಪಳದ ಹ್ಯಾರಿಸ್, ಮುಹಮ್ಮದ್ ಶಾಫಿ ಖಾದರ್ ಅಮ್ಮಂಗೋಡು, ಮೊಗ್ರಾಲ್ ಪುತ್ತೂರಿನ ಅಶ್ರಫ್, ವಿದ್ಯಾನಗರದ ಅಶ್ರಫ್ ಅವರ ಪತ್ನಿ ನಜ್ಮಾ, ಪಾರಕ್ಕಾಡ್‌ನ ಅಬ್ದುಲ್ಲ, ಮಂಜೇಶ್ವರದ ಇಬ್ರಾಹಿಂ ಸಅದ್, ಪತ್ನಿ ಸಮೀನಾ, ಎರ್ದುಂಕಡವಿನ ಅಬ್ದುಲ್ ನಾಸಿರ್, ಕಾರಡ್ಕ ಚೆಮ್ನಾಡಿನ ಹಸೈನ್, ಬೇನೂರಿನ ಅಬ್ದುಲ್ಲ ಅವರ ಪುತ್ರ ಅನ್ವರ್ ಸಾದಿಕ್, ಪಾಣತ್ತೂರಿನ ಕುಞ್ಞಬ್ದುಲ್ಲ, ಕಾರಡ್ಕದ ವಿಪಿನ್, ಕಾಞಂಗಾಡಿನ ಕೆ.ಕೆ.ಅಬ್ದುಲ್ಲ, ಉದುಮದ ಅಸ್ಲಾಂ, ಪುತ್ತಿಗೆ ಮುಗು ಸಮೀಪದ ಮೊಯ್ದುವಿನ ಪುತ್ರ ಹಮೀದ್, ಪೆರಿಯದ ಕುಞ್ಞಂಬು ಅವರ ಪುತ್ರ ರಾಜನ್(33), ಪೊಯಿನಾಚಿಯ ಚಾತುಕುಟ್ಟಿ ನಾಯರ್, ಪರಪ್ಪ ಕ್ಲಾಯಿಕ್ಕೋಡು ನಿವಾಸಿ ಪ್ರಭಾಕರನ್ (50), ಕೀಯೂರು ನಿವಾಸಿ ವಿಜಯನ್ ಅವರ ಪುತ್ರ ಉಮೇಶ್ (34), ಪೆರಿಯಡ್ಕ ನಿವಾಸಿ ಗಂಗಾಧರನ್ ನಾಯರ್ (43) ಸಾವನ್ನಪ್ಪಿದವರು ಎಂದು ಸಂಬಂಧಿಕರು ಗುರುತಿಸಿದ್ದಾರೆ.

ಉತ್ತಮ ಸಂಘಟಕ: ಇಬ್ರಾಹಿಂ ಖಲೀಲ್ ಸುನ್ನಿ ಯುವಜನ ಸಂಘದ ರಾಜ್ಯ ಉಪಾಧ್ಯಕ್ಷ, ಸಂಯುಕ್ತ ಜಮಾಅತ್ ಕಾಸರಗೋಡು ಘಟಕದ ಪ್ರಧಾನ ಕಾರ್ಯದರ್ಶಿ ಉತ್ತಮ ಸಂಘಟಕರಾಗಿದ್ದರು. ಉದ್ಯಮಿಯಾಗಿದ್ದ ಅವರು ಮಲಬಾರ್ ಪ್ಯಾಕೇಜ್‌ನಡಿ 5 ಕೋಟಿ ರೂ. ವೆಚ್ಚದಲ್ಲಿ ಮೊಗ್ರಾಲ್ ಪುತ್ತೂರು-ಚೇರಂಗೈ ಪಳ್ಳಂ ರಸ್ತೆಯನ್ನು ಅಭಿವೃದ್ಧಿಗೊಳಿಸುವ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ರಾಜಕೀಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ತಳಂಗೆರೆಯಲ್ಲಿ ವ್ಯಾಪಾರ ಆರಂಭಿಸುವ ಯೋಜನೆ ಹಾಕಿಕೊಂಡಿದ್ದರು. ಕಾಸರಗೋಡು ಸಂಯುಕ್ತ ಜಮಾಅತ್ ಕಾರ್ಯದರ್ಶಿಯೂ ಆಗಿದ್ದ ಇವರು ಭಾನುವಾರ ಹೊರಡಲು ಸಿದ್ಧತೆ ನಡೆಸುತ್ತಿದ್ದು, ಭಾನುವಾರ ನಗರದಲ್ಲಿ ನಡೆಯಲಿರುವ ವಿವಾಹವೊಂದರಲ್ಲಿ ಪಾಲ್ಗೊಳ್ಳಲು ಶುಕ್ರವಾರವೇ ವಿಮಾನ ಏರಿದ್ದರು.

ಅಪ್ಪನ ಜತೆ ಪುತ್ರನ ಸಾವು: ಭಾನುವಾರ ನಡೆಯಲಿರುವ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನೆಲ್ಲಿಕುಂಜೆಯ ಸಿದ್ದಿಖ್ ವಿಮಾನವೇರಿದ್ದರು. ಇವರ ತಂದೆ ಶುಕ್ರವಾರ ಸಾವನ್ನಪ್ಪಿದ್ದರು. ಸಹೋದರ ಉಸ್ಮಾನ್ ಕೂಡಾ ಇದೇ ವಿಮಾನದಲ್ಲಿ ಬರಲು ಮುಂದಾಗಿದ್ದು, ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.
ಅಶುಭವಾದ ಶುಭ ಕಾರ್ಯ

ನೀಲೇಶ್ವರ ಆನಚ್ಚಾಲಿನ ಟಿ.ಕುಞ್ಞೆರಾಮನ್ ಅವರ ಪುತ್ರ ಮುಟ್ಟತ್ತ್ ಅಜೇಶ್ (26)ಅವರ ಸಹೋದರ ಅಜಿತ್‌ನ ವಿವಾಹ ನಾಳೆ (ಭಾನುವಾರ) ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ದುಬೈಯಿಂದ ವಿಮಾನದಲ್ಲಿ ಪ್ರಯಾಣಿಸಿದ್ದರು.

ರೋಗ ಸಾವಾಗಿ ಬಂತು: ಮೊಗ್ರಾಲ್ ಪುತ್ತೂರಿನ ಅಜ್ಮೀರಿಯ ಮಂಜಿಲ್‌ನ ಅಬೂಬಕ್ಕರ್ ಅವರ ಪುತ್ರ ಮುಹಮ್ಮದ್ ಅಶ್ರಫ್ ಕೆ.ಎ. ಯಾನೆ ಅಚ್ಚಪ್ಪು (25) ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ಊರಿಗೆ ಮರಳಿದ್ದರು. ಅವರನ್ನು ಕರೆತರಲು ಶನಿವಾರ ಮುಂಜಾನೆ ಸಂಬಂಧಿಕರು ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಮಧ್ಯಾಹ್ನವರೆಗೆ ಅವರಿಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಆವರು ಕೆಲಸ ಮಾಡುತ್ತಿದ್ದ ಕಂಪೆನಿಗೆ ಕರೆ ಮಾಡಿದಾಗ ಅಪಘಾತ ಸಂಭವಿಸಿದ ವಿಮಾನದಲ್ಲಿ ಪ್ರಯಾಣಿಸಿರುವುದಾಗಿ ತಿಳಿದುಬಂತು. ಇತ್ತೀಚೆಗಷ್ಟೆ ಅವರು ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದರು. ಆರು ಮಂದಿ ಸಹೋದರಿಯರಿದ್ದಾರೆ.

ನೋಡುವ ಆಸೆ ಈಡೇರಲೇ ಇಲ್ಲ: ಅಡ್ಕತ್ತಬೈಲು ನಿವಾಸಿ ಚಾತುಟ್ಟಿ ನಾಯರ್ ಕಳೆದ 14 ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದರು. ಕುಟುಂಬದ ಕ್ಷೇಮವನ್ನು ಕಣ್ಣಾರೆ ನೋಡಲು ಊರಿಗೆ ಆಗಮಿಸಿದ್ದರು. ಪತ್ನಿ ಪ್ರೇಮ ಮತ್ತು ಇಬ್ಬರು ಮಕ್ಕಳಿದ್ದಾರೆ.

ಪಾರಾದವರು: ಪ್ರಾಥಮಿಕ ಹಂತದಲ್ಲಿ ತಳಿಪರಂಬ ಕುರುಮಾತ್ತೂರು ನಿವಾಸಿ ಮಾಹಿನ್ ಕುಟ್ಟಿ, ಮಾಂಗಾಡಿನ ಕೃಷ್ಣನ್ ಕುಳಿಕುನ್ನು ಎಂಬವರು ಪವಾಡ ಸದೃಶವಾಗಿ ಬದುಕುಳಿದ ಮಾಹಿತಿ ಲಭಿಸಿದೆ. ಅಪಘಾತಕ್ಕೆ ತುತ್ತಾದ ವಿಮಾನದ ಕಿಟಿಕಿಯಿಂದ ಹಾರಿ ಇವರು ಪಾರಾಗಿದ್ದಾರೆ.

ಪ್ರಾಥಮಿಕ ವರದಿ ಲಭಿಸಿದಾಗ ಕಾಸರಗೋಡು ಜಿಲ್ಲೆಯ 24 ಮಂದಿ ವಿಮಾನವೇರಿದ್ದರು ಎಂಬ ಮಾಹಿತಿ ಲಭಿಸಿತ್ತು.

ರದ್ದು: ಎರಡು ದಿನಗಳ ಜಿಲ್ಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

No comments: