VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 23, 2010

ಇಳಿಜಾರು ಹಾದಿ ,ರಕ್ಷಣಾ ಕಾರ್ಯ ಕಠಿಣ

ಅವಶೇಷಗಳಡಿ ಕರಕಲಾದ ಮೃತದೇಹ

ಸ್ಟ್ರೆಚರ್‌ನಲ್ಲಿ ಮಲಗಿಸಿದ್ದ ಮಣ ಭಾರದ ಹೆಣಗಳನ್ನು ಸುಮಾರು 100 ಅಡಿಗಳಷ್ಟು ಎತ್ತರದಲ್ಲಿದ್ದ ರಸ್ತೆವರೆಗೆ ಸಾಗಿಸಲು ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಡಬೇಕಾಯಿತು.

ಬಜಪೆ (ಮಂಗಳೂರು): ಯಾವುದೇ ಭಾರವನ್ನು ಹೊರದೆಯೇ ನಡೆದು ಮೇಲೇರಲು ಕಷ್ಟಸಾಧ್ಯ ಎಂಬಂತಹ 300 ಅಡಿ ಆಳದ ಕಡಿದಾದ ಕಂದಕ ಅದು.

ಸ್ಟ್ರೆಚರ್‌ನಲ್ಲಿ ಮಲಗಿಸಿದ್ದ ಮಣ ಭಾರದ ಹೆಣಗಳನ್ನು ಸುಮಾರು 100 ಅಡಿಗಳಷ್ಟು ಎತ್ತರದಲ್ಲಿದ್ದ ರಸ್ತೆವರೆಗೆ ಸಾಗಿಸಲು ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಡಬೇಕಾಯಿತು.

ಅವಘಡದಲ್ಲಿ ನೆಲಕ್ಕೆ ಅಪ್ಪಳಿಸಿ ಸಿಡಿದು ಛಿದ್ರಗೊಂಡ ಏರ್ ಇಂಡಿಯ ಎಕ್ಸ್‌ಪ್ರೆಸ್ ವಿಮಾನದ ಅವಶೇಷಗಳ ನಡುವೆ ಸಿಲುಕಿದ್ದ ಮೃತದೇಹಗಳನ್ನು ಹುಡುಕಿ ಹೊರತೆಗೆಯುವುದು ರಕ್ಷಣಾ ಕಾರ್ಯ ನಿರತ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ನಾಗರಿಕರಿಗೆ ಕಠಿಣ ಸವಾಲಾಗಿತ್ತು.

ಕಾರ್ಯಾಚರಣೆ ಆರಂಭದಲ್ಲಿ ದುರಂತದ ಸ್ಥಳ ತಲುಪುವುದೇ ಕಷ್ಟ ಎಂಬ ಪರಿಸ್ಥಿತಿ ಇತ್ತು. ಬಳಿಕ ಜೆಸಿಬಿ ಯಂತ್ರವನ್ನು ತರಿಸಿ ಕೆಳಗೆ ಇಳಿಯುವುದಕ್ಕೆ ಅನುಕೂಲ ಆಗುವಂತೆ ಇಳಿಜಾರು ದಾರಿ ನಿರ್ಮಿಸಿ ರಕ್ಷಣಾ ಕಾರ್ಯ ಆರಂಭಿಸಲಾಯಿತು.
ನೂರಾರು ಸ್ಥಳೀಯರು, 75ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ, 80ಕ್ಕೂ ಹೆಚ್ಚು ಗೃಹರಕ್ಷಕ ಸಿಬ್ಬಂದಿ ಹಾಗೂ ಪೊಲೀಸರು ಬೆಳಿಗ್ಗೆಯಿಂದ ಸಂಜೆವರೆಗೆ ಬೆವರಿಳಿಸಿದರೂ ಎಲ್ಲ ಶವಗಳನ್ನೂ ಮೇಲೆತ್ತುವುದು ಸಾಧ್ಯವಾಗಿರಲಿಲ್ಲ.

ಒಂದು ಕೈಯಲ್ಲಿ ಹಗ್ಗ- ಇನ್ನೊಂದರಲ್ಲಿ ಶವ: ಮೊದಲಿಗೆ ಕಂದಕಕ್ಕೆ ಎರಡು ಕಡೆ ಒಂದಿಂಚು ದಪ್ಪದ ಹಗ್ಗಗಳನ್ನು ಇಳಿಬಿಡಲಾಯಿತು. ಒಂದು ಕೈಯಲ್ಲಿ ಹಗ್ಗ ಇನ್ನೊಂದು ಕೈಯಲ್ಲಿ ಸ್ಟ್ರೆಚರ್ ಹಿಡಿದು ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಕಾರ್ಯಾಚರಣೆಗೆ ನಿಂತವರದ್ದು. ಕೈಯಿಂದ ಕೈಗೆ ಸ್ಟ್ರೆಚರ್ ಬದಲಾಯಿಸುತ್ತಲೇ ವಿಮಾನದ ಅವಶೇಷ ಇರುವ ಕಡೆಯಿಂದ ರಸ್ತೆಯವರೆಗೆ ತಲುಪಲು ಕನಿಷ್ಠ 20 ನಿಮಿಷ ತಗುಲುತ್ತಿತ್ತು.

‘ಮೆಲ್ಲ ಮೆಲ್ಲ...’ ಎಂದು ಬೊಬ್ಬೆ ಹಾಕುತ್ತಲೇ.. ಪಕ್ಕದಲ್ಲಿ ನಿಂತಿದ್ದವರನ್ನು ‘ಜಾರುತ್ತದೆ ಜಾಗ್ರತೆ... ಗಟ್ಟಿಯಾಗಿ ಹಿಡಿದುಕೊಳ್ಳಿ...’ ಎಂದು ಏರುಧ್ವನಿಯಿಂದ ಎಚ್ಚರಿಸುತ್ತಲೇ ಶವಗಳನ್ನು ಮೇಲಕ್ಕೆತ್ತುವ ಕಾರ್ಯದಲ್ಲಿ ಎಲ್ಲರೂ ಮಗ್ನರಾಗಿದ್ದರು.

ಕರಕಲು ಶವಗಳು: ಅವಶೇಷಗಳ ನಡುವಿನಿಂದ ಶವಗಳನ್ನು ಹುಡುಕಿ ಹೊರ ತೆಗೆಯುವುದು ಮತ್ತಷ್ಟು ಕಠಿಣ ಕೆಲಸವಾಗಿತ್ತು. ಬೆಂಕಿ ಆರಿದ ಬಳಿಕವೂ ತಣ್ಣಗಾಗದ ವಿಮಾನದ ಪರಿಕರಗಳು, ಅರ್ಧಂಬರ್ದ ಸುಟ್ಟ ಶವಗಳಿಂದ ಹೊಮ್ಮುತ್ತಿದ್ದ ಕಮಟು ವಾಸನೆಗಳನ್ನು ಲೆಕ್ಕಿಸದೆ ಕಾರ್ಯಾಚರಣೆ ನಡೆಸಬೇಕಾಗಿತ್ತು. ಗಳಗಳನೆ ಅಳುತ್ತಲೇ ಪುಟಾಣಿಗಳ ಶವಗಳನ್ನು ಮೇಲೆತ್ತಿದರು. ಹೆಚ್ಚಿನ ಶವಗಳಲ್ಲಿ ಕಾಲಿನ ಶೂ ಎಲುಬುಗಳು ಮಾತ್ರ ಸುಡದೆ ಉಳಿದಿದ್ದವು. ಬಹುತೇಕ ಶವಗಳು ಒಂಚೂರು ಗುರುತು ಸಿಗದಷ್ಟು ಕರಕಲಾಗಿದ್ದವು.

ಮಾಹಿತಿ ಸಿಗದೆ ಪರದಾಡಿದರು: ಸುದ್ದಿ ತಿಳಿದ ತಕ್ಷಣವೇ ದೂರದ ಊರುಗಳಿಂದ ದೌಡಾಯಿಸಿದ್ದ ಕುಟುಂಬವರ್ಗದವರು, ಕಂದಕದಿಂದ ಒಂದಾದ ಮೇಲೊಂದರಂತೆ ಮೇಲೆ ಬರುತ್ತಿದ್ದ ಶವಗಳನ್ನು ನೋಡಿ ದುಃಖ ತಡೆಯಲಾರದೆ ಅಳುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ವಿಮಾನದಲ್ಲಿದ್ದ ಸಂಬಂಧಿಕರ ಬಗ್ಗೆ ಯಾರಲ್ಲಿ ವಿಚಾರಿಸಬೇಕು, ಎಲ್ಲಿ ಶವ ಪಡೆಯಬೇಕು ಮೊದಲಾದ ಮಾಹಿತಿ ಸಿಗದೆ ಕುಟುಂಬವರ್ಗದವರು ಪರದಾಡಿದರು.

ನಗರದ ಆಸ್ಪತ್ರೆಗಳಿಗೆ ಇದ್ದ ಎಲ್ಲ ತುರ್ತುಚಿಕಿತ್ಸಾ ವಾಹನ ಕಳುಹಿಸಿ ಕೊಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಅಲ್ಲದೇ ದೂರದ ಊರುಗಳಿಂದಲೂ ಹತ್ತಾರು ಆಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದವು.

ವಿಮಾನದ ಅವಶೇಷ ಬಿದ್ದ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಕ್ಕಟ್ಟಾಗಿದ್ದರಿಂದ ಶವಗಳನ್ನು 18 ಕಿ.ಮೀ. ದೂರದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಚಾಲಕರು ಪರದಾಡಬೇಕಾಯಿತು.

ವಾಹನ ಸಂಚಾರ ಸ್ಥಗಿತ: ಬೆಳಿಗ್ಗೆ ಘಟನಾ ಸ್ಥಳದಲ್ಲಿ ಒಮ್ಮೆಲೇ ಜನ ಜಮಾಯಿಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಡಕುಂಟಾಯಿತು. ಮಧ್ಯಾಹ್ನದ ವೇಳೆ ಮತ್ತಷ್ಟು ತೊಡಕಾಗಬಹುದು ಎಂಬ ಮುನ್ಸೂಚನೆ ದೊರೆತ ಕೂಡಲೇ ಪೊಲೀಸರು ದುರಂತ ಸ್ಥಳದ ಆರು ಕಿ.ಮೀ. ದೂರದಿಂದ ಎರಡೂ ಕಡೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು.

ಮೃತರ ಸಂಬಂಧಿಗಳು, ಗಣ್ಯರು, ಜಿಲ್ಲಾಡಳಿತದಿಂದ ವಿಶೇಷ ಪರವಾನಗಿ ಪತ್ರ ಪಡೆದವರ ವಾಹನ ಮಾತ್ರ ಸ್ಥಳಕ್ಕೆ ಬಿಡಲಾಯಿತು. ವಿಮಾನದ ಅವಶೇಷ ವೀಕ್ಷಿಸುವ ಕುತೂಹಲದಿಂದ ಸಾವಿರಾರು ಮಂದಿ ಆರು ಕಿ.ಮಿ. ದೂರ ನಡೆದೇ ಘಟನಾ ಸ್ಥಳಕ್ಕೆ ಆಗಮಿಸುತ್ತಲೇ ಇದ್ದರು.

ಊಟ-ತಿಂಡಿ ಬಿಟ್ಟು ಸೇವೆ ಮಾಡಿದರು....
ವಿಮಾನ ದುರಂತದ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ವಿಮಾನಕ್ಕೆ ಹಿಡಿದ ಬೆಂಕಿ ನಂದಿಸುವ ಕಾರ್ಯ ಮುಗಿಯುತ್ತಿದ್ದಂತೆಯೇ ಅಲ್ಲಿ ನೆರೆದವರೆಲ್ಲ ಹಿಂದೆ ಮುಂದೆ ನೋಡದೆ ಕಾರ್ಯಚರಣೆಗಿಳಿದರು.

ತಮ್ಮ ಎಲ್ಲ ಕೆಲಸ ಬದಿಗಿಟ್ಟು ಗಾಯಗೊಂಡವರನ್ನು ರಕ್ಷಿಸುವ, ಮೃತದೇಹ ಮೇಲೆತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಅಲ್ಲಿದ್ದ ಬಹುತೇಕರು ಬೆವರು ಸುರಿಸುತ್ತಾ, ಮೈಕೈ ತುಂಬಾ ಕೆಸರು ಮೆತ್ತಿಕೊಂಡು ಶ್ರಮಿಸುತ್ತಿದ್ದುದು ಮಾನವೀಯತೆಗೆ ಸಾಕ್ಷಿಯಂತ್ತಿತ್ತು.

ಸ್ಥಳೀಯ ಮುಖಂಡರು ಹಾಗೂ ರಾಜಕಾರಣಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಬಿಸ್ಲೇರಿ ನೀರು ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಮುಖವಾಡ ಹಾಗೂ ಕೈಗವಸು ತೊಟ್ಟು ರಕ್ಷಣಾ ಕಾರ್ಯದಲ್ಲಿ ತಲ್ಲೆನರಾಗಿದ್ದ ಜನರು ಉಪಹಾರ ಸೇವಿಸಲೂ ಮನ ಮಾಡುತ್ತಿರಲಿಲ್ಲ.

ನೀರಿನ ಕೊರತೆ: ವಿಮಾನಕ್ಕೆ ಹೊತ್ತಿದ್ದ ಬೆಂಕಿ ನಂದಿಸಲಾಗಿತ್ತಾದರೂ ಅದರ ಬಿಸಿ ತಣ್ಣಗಾಗಿರಲಿಲ್ಲ. ಕೆಲವರಂತೂ ಗರಗಸ ಇನ್ನಿತರ ಪರಿಕರಗಳಿಂದ ಅವಶೇಷಗಳನ್ನು ಪಕ್ಕಕ್ಕೆ ಸರಿಸಿ ಹೆಣ ಹೊರಗೆ ತೆಗೆಯುವಾಗ ಕೈ ಸುಟ್ಟುಕೊಂಡರು. ಅಗ್ನಿ ಶಾಮಕ ಸಿಬ್ಬಂದಿ ಬಳಿ ನೀರು ಹಾಯಿಸಿ ಎಂದು ಕೋರುತ್ತಿದ್ದರು.

ಮಳೆ ಅಡ್ಡಿ: ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಕ್ಷಣಾರ್ಧದಲ್ಲಿ ಆಯಾಸವಾಗುತ್ತಿತ್ತು. ಬೆಳಿಗ್ಗೆ ಏಕಾಏಕಿ ಸುರಿದ ಮಳೆಯಿಂದ ಹಾಗೂ ಜೆಸಿಬಿಯಿಂದ ಕಂದಕವನ್ನು ಅಗೆದಿದ್ದರಿಂದ ಮಣ್ಣೆಲ್ಲ ಕೆಸರಾಗಿತ್ತು. ಇದು ಇಳಿಜಾರಿನಲ್ಲಿ ನಿಂತು ಕೆಲಸ ಮಾಡುವುದನ್ನು ಮತ್ತಷ್ಟು ಕಠಿಣಗೊಳಿಸಿತ್ತು.

No comments: