ಮಾವೋ ಗೆರಿಲ್ಲಾ ಪಡೆಗಳ ಅಟ್ಟಹಾಸ ಮುಂದುವರಿದಿದ್ದು, ಗ್ರಾಮದ ಮುಖ್ಯಸ್ಥನೊಬ್ಬ ಸೇರಿದಂತೆ ಆರು ಮಂದಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ಛತ್ತೀಸ್‌ಗಢದ ರಾಜ್‌ನಂದಗಢ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ನಕ್ಸಲೀಯರಿಂದ ಅಪಹರಿಸಲ್ಪಟ್ಟ ಆರು ಮಂದಿ ಗ್ರಾಮಸ್ಥರನ್ನು ಕೊಂದು ರಾಜ್‌ನಂದಗಢದ ಉಚಾಪುರ ಗ್ರಾಮದ ಮನಪುರ್ ಪ್ರದೇಶದ ಅರಣ್ಯದಲ್ಲಿ ಎಸೆದು ಹೋಗಿರುವುದಾಗಿ ಛತ್ತೀಸ್‌ಗಢ ಪೊಲೀಸ್ ಮಹಾನಿರ್ದೇಶಕ ವಿಶ್ವ ರಂಜನ್ ವಿವರಿಸಿದ್ದಾರೆ.
ಮನಪುರ್ ಗ್ರಾಮದ ಸರ್‌ಪಂಚ್ ಭಿಲ್‌ಸಾಯ್ ಮಂಡವಾಯ್(36) ಸೇರಿದಂತೆ ಐದು ಮಂದಿ ಗ್ರಾಮಸ್ಥರನ್ನು ಕೆಲ ದಿನಗಳ ಹಿಂದಷ್ಟೇ ಶಸ್ತ್ರ ಸಜ್ಜಿತ ನಕ್ಸಲೀಯರು ಅಪಹರಿಸಿದ್ದರು. ನಕ್ಸಲೀಯರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ಗ್ರಾಮಸ್ಥರನ್ನು ಅಪಹರಿಸಲಾಗಿತ್ತು. ಆರು ಮಂದಿಯ ಗಂಟಲು ಸೀಳಿ ಕೊಲೆಗೈಯಲಾಗಿದೆ ಎಂದು ರಂಜನ್ ತಿಳಿಸಿದ್ದಾರೆ.
ನಕ್ಸಲೀಯರ ಅಟ್ಟಹಾಸದಿಂದಾಗಿ ಮಹಾರಾಷ್ಟ್ರ ಗಡಿಭಾಗದ ಗಡ್‌ಚಿರೋಲಿ ಜಿಲ್ಲೆಯ ರಾಜ್‌ನಂದಗಢದ ನಿವಾಸಿಗಳು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಇದೀಗ ನಕ್ಸಲ್ ನಿಗ್ರಹ ದಳ ಪಡೆ ಹಾಗೂ ಅರೆಸೇನಾ ಪಡೆಗಳು ಜಿಲ್ಲೆಗೆ ಭೇಟಿ ನೀಡಿ, ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಇದೇ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ.ಚೌಬೇ ಸೇರಿದಂತೆ 29 ಪೊಲೀಸರನ್ನು ನಕ್ಸಲೀಯರು ಹತ್ಯೆಗೈದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment