VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ಕನಗನಹಳ್ಳಿ ಗೇಟ್ ಬಳಿ ಭೀಕರ ರಸ್ತೆ ದುರಂತ: 8 ಮಂದಿ ಬಲಿ

ಮಂಡ್ಯ, ಮೇ 29: ಅಪೆ ಆಟೊ ಹಾಗೂ ಗೂಡ್ಸ್ ಟೆಂಪೋ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿ ಸಾವನ್ನಪ್ಪಿ, 6 ಮಂದಿ ತೀವ್ರವಾಗಿ ಗಾಯಗೊಂಡಿರುವ ದುರಂತ ಘಟನೆ ಪಾಂಡವಪುರ ತಾಲೂಕು ಕನಗನಹಳ್ಳಿ ಗೇಟ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ನೆಲಮನೆ ಗ್ರಾಮದ ದೇವರಾಜು (35), ಶ್ರೀನಿವಾಸ (33), ರಾಮಯ್ಯ (60), ಸಿಂಗ್ರಯ್ಯ (65), ಚಂದ್ರಾಚಾರಿ (50) ಸ್ಥಳದಲ್ಲೇ ಮೃತಪಟ್ಟರೆ, ಜಗದೀಶ್ (35) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹಾಗೂ ನಿಂಗಮ್ಮ (50) ಹಾಗೂ ಸಣ್ಣಮ್ಮ(21) ಮೈಸೂರು ಕೆ. ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪ್ರತಿಬಾಬು (35), ವಿಶೇಷ (47), ಕೃಷ್ಣ (45), ಸ್ವಾಮಿ (55), ಚಿಕ್ಕಕಾಳೇಗೌಡ (65), ಆಟೋ ಚಾಲಕ ಪುಟ್ಟರಾಜು (35) ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರೆಲ್ಲರೂ ಆಪೆ ಆಟೊದಲ್ಲಿದವರೆಂದು ತಿಳಿದುಬಂದಿದೆ.

ನೆಲಮನೆಯವರೇ ಆದ ಮಹದೇವ ಹಾಗೂ ಸಣ್ಣಮ್ಮ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕೆಲವು ತಿಂಗಳ ನಂತರ ಇಬ್ಬರಲ್ಲೂ ವಿರಸಬಂದು ಬೇರ್ಪಟ್ಟಿದ್ದರು. ನಂತರ ಸಣ್ಣಮ್ಮ ಮತ್ತು ಆಕೆಯ ತಾಯಿ ನಿಂಗಮ್ಮ ಗ್ರಾಮ ತೊರೆದು ಕೆ.ಆರ್.ಪೇಟೆ ತಾಲೂಕು ಬಲ್ಲೇನಹಳ್ಳಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.

ಈ ದಂಪತಿಯನ್ನು ಒಂದು ಮಾಡುವ ಸಲುವಾಗಿ ನೆಲಮನೆ ಗ್ರಾಮದ 12 ಮುಖಂಡರು ಗೂಡ್ಸ್ ಆಟೊ ಬಾಡಿಗೆ ಪಡೆದು ನ್ಯಾಯ ಪಂಚಾಯತ್ ನಡೆಸಿ ಮಹದೇವನ ಹೆಂಡತಿ ಸಣ್ಣಮ್ಮನನ್ನು ಕರೆತರಲು ಶನಿವಾರ ಬೆಳಗ್ಗೆ ಬಲ್ಲೇನಹಳ್ಳಿಗೆ ತೆರಳಿದ್ದರು.

ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ಮೈಸೂರು-ಕೆ.ಆರ್.ಪೇಟೆ ಮುಖ್ಯರಸ್ತೆಯ ಕನಗನಹಳ್ಳಿ ಗೇಟ್ ಬಳಿ ಎದುರಿನಿಂದ ಬರುತ್ತಿದ್ದ ಗೂಡ್ಸ್ ಟೆಂಪೋ ಆಟೊಗೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿತು. ಅಪಘಾತದ ರಭಸಕ್ಕೆ ಆಟೊ ನಜ್ಜುಗುಜ್ಜಾಗಿದ್ದು, ಗೂಡ್ಸ್ ಟೆಂಪೋ ಜಖಂಗೊಂಡಿದೆ.

ಅಪಘಾತ ಸ್ಥಳದಲ್ಲಿ ಸತ್ತವರು ಹಾಗೂ ಗಾಯಗೊಂಡವರನ್ನು ಸುತ್ತಮುತ್ತಲ ಗ್ರಾಮಸ್ಥರು ವಾಹನಗಳನ್ನು ಪಡೆದು ತಕ್ಷಣ ಪಾಂಡವಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ಎದುರು ಸತ್ತವರ ಬಂಧುಗಳ ರೋದನ ಮುಗಿಲುಮಟ್ಟಿತ್ತು.

ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಸಂತ್ರಸ್ತ ಕುಟುಂದವರನ್ನು ಸಂತೈಸಿದ್ದಲ್ಲದೆ, ವೈಯಕ್ತಿಕವಾಗಿ ಸತ್ತವರ ಕುಟುಂಬಕ್ಕೆ 5 ಸಾವಿರ ರೂ. ಪರಿಹಾರ ನೀಡಿದರು. ಚಿನಕುರಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

No comments: