ಮಂಗಳೂರು, ಮೇ 29: ಸಂವಿಧಾನದತ್ತ ಅಧಿಕಾರವನ್ನು ಬಳಸಿ ದೇಶದಲ್ಲಿ ವಿಧ್ವಂಸಕ ಕೃತ್ಯ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕಾದ ಗೃಹ ಸಚಿವ ಚಿದಂಬರಂ ತಮಗೆ ನಕ್ಸಲರ ವಿರುದ್ಧ ಕ್ರಮ ಕೈಗೊಳ್ಳಲು ಸೀಮಿತ ಅಧಿಕಾರ ಮಾತ್ರ ಇದೆ ಎಂಬ ಹೇಳಿಕೆ ನೀಡಿರುವುದು ಪರೋಕ್ಷವಾಗಿ ಪ್ರಧಾನ ಮಂತ್ರಿಯನ್ನು ಟೀಕೆ ಮಾಡಿದಂತಾಗಿದೆ. ಗೃಹ ಸಚಿವರ ಈ ಹೇಳಿಕೆಯಿಂದ ಸರಕಾರಕ್ಕೆ ಮುಜುಗರವಾದಂತಾಗಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಮಾವೊವಾದಿಗಳು ಹಿಂಸಾಚಾರ ನಡೆಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ತಮ್ಮ ಹೊಣೆಗಾರಿಕೆಯನ್ನು ಸಂಪೂರ್ಣ ವಹಿಸಿಕೊಳ್ಳದೆ ಪರೋಕ್ಷವಾಗಿ ಪ್ರಧಾನ ಮಂತ್ರಿಯತ್ತ ಬೆರಳು ತೋರಿಸುತ್ತಿದ್ದಾರೆ. ಈ ರೀತಿಯ ಹೇಳಿಕೆ ಬೇಡ. ನಕ್ಸಲರ ವಿರುದ್ಧ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಹಿಂದೆ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್‌ರಂತಹವರು ಮಾದರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ವಿಮಾನ ಅಪಘಾತ ಸಂತ್ರಸ್ತರಿಗೆ ತುರ್ತು ಪರಿಹಾರಕ್ಕೆ ಆಗ್ರಹ:
ಮಂಗಳೂರು ವಿಮಾನ ಅಪಘಾತದ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡಲು ಸಮರೋಪಾದಿಯಲ್ಲಿ ಕೆಲಸ ನಡೆಯಬೇಕಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕಾಗಿದೆ.
ಉಡುಪಿಯ 12, ದ.ಕ. ಜಿಲ್ಲೆಯ 18 ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಂದರ್ಭದಲ್ಲಿ ಅವರಿಗೆ ದಾಖಲೆ ಪಡೆಯಲು ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಕೆಲವರ ಮನೆಯ ದೂರವಾಣಿ ಸಂಖ್ಯೆ ಸ್ಥಗಿತಗೊಂಡಿದೆ. (ಹಣ ಪಾವತಿ ಬಾಕಿ ಇರುವುದರಿಂದ) ಇಂತಹ ಕುಟುಂಬಗಳಿಗೆ ತಕ್ಷಣ ದೂರವಾಣಿ ಸಂಪರ್ಕವನ್ನು ಭಾರತ ಸಂಚಾರ ನಿಗಮ ಮಾಡಬೇಕು. ಕೇಂದ್ರ ಸರಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಪೂಜಾರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಎಂ.ಜಿ.ಹೆಗಡೆ, ಕಳ್ಳಿಗೆ ತಾರಾನಾಥ ಶೆಟ್ಟಿ, ಸುರೇಶ್ ಬಲ್ಲಾಳ್ ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment