
ಬೆಂಗಳೂರು, ಮೇ 29: ಮಂಗಳೂರಿನಲ್ಲಿ ತುಳು ಭವನ ನಿರ್ಮಾಣಕ್ಕೆ ಸರಕಾರದಿಂದ ವಿಶೇಷ ಅನುದಾನ ನೀಡಲಾಗುವುದು ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಹೇಳಿದ್ದಾರೆ.
ಕರ್ನಾಟಕದ ತುಳು ಸಾಹಿತ್ಯ ಅಕಾಡಮಿ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಕಾಡಮಿಯ 2009ನೆ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ತುಳು ಭವನ ನಿರ್ಮಾಣಕ್ಕೆ ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು, ಇದರ ನಿರ್ಮಾಣಕ್ಕೆ ಎರಡು ವರ್ಷದಲ್ಲಿ ಸರಕಾರದಿಂದ ವಿಶೇಷ ಅನುದಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ತುಳು ಭಾಷೆ ಹಾಗೂ ತುಳು ಭಾಷಿಗರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು, ಈ ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಆಚಾರ್ಯ ನುಡಿದರು.
ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ತುಳು ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಆಸಕ್ತಿ ತೋರಿದ್ದಾರೆ. ಆ ನಿರ್ಣಯ ಗಳು ಶೀಘ್ರದಲ್ಲೇ ಜಾರಿಗೊಳ್ಳಲಿವೆ ಎಂದು ಅವರು ಹೇಳಿದರು.
ತುಳು ಭಾಷೆಯ ಪಠ್ಯ ಪುಸ್ತಕ ಸದ್ಯದಲ್ಲೆ ಬಿಡುಗಡೆ: ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ತುಳು ಭಾಷೆಯನ್ನು 6ನೆ ತರಗತಿಯ ತೃತೀಯ ಭಾಷೆಯನ್ನಾಗಿ ಅಳವಡಿಸಲು ಈಗಾಗಲೆ ನಿರ್ಣಯ ಕೈಗೊಂಡಿದ್ದು, ಪಠ್ಯಕ್ರಮ ಕೂಡ ಸಿದ್ಧವಾಗಿದೆ. ಈ ಪುಸ್ತಕವನ್ನು ವಿಳಂಬ ಮಾಡದೆ ಎಲ್ಲ ಶಾಲೆಗಳಿಗೂ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಆಂಗ್ಲ ವ್ಯಾಮೋಹ ಬಿಡಿ: ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ನಮ್ಮ ಮಾತೃ ಭಾಷೆ ಕನ್ನಡ ಸೇರಿದಂತೆ ಇತರ ಭಾಷೆಗಳು ನಶಿಸಿಹೋಗುತ್ತಿವೆ. ನಮ್ಮ ಭಾಷೆಗಳನ್ನು ಉಳಿಸಿ ಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಚಿವ ಕಾಗೇರಿ ನುಡಿದರು.
ಕನ್ನಡದಷ್ಟೇ ಪ್ರಬುದ್ಧವಾದ ಭಾಷೆ: ವಿದ್ವಾಂಸ ಚಿದಾನಂದ ಮೂರ್ತಿ ಮಾತ ನಾಡಿ, ತುಳು ಇತ್ತೀಚಿನ ಭಾಷೆಯಾದರೂ, ಸಾಹಿತ್ಯದ ದೃಷ್ಟಿಯಿಂದ ಕನ್ನಡಕ್ಕಿಂತಲೂ ಪ್ರಾಚೀನವಾದುದು. ಶ್ರೇಷ್ಟ ಜಾನಪದ ಕಲೆಯನ್ನು ಹೊಂದಿರುವ ತುಳು ಭಾಷೆ ಕನ್ನಡದಷ್ಟೇ ಪ್ರಾಚೀನವಾದುದು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಡಾ.ಟಿ.ರಾಮಕೃಷ್ಣ ಶೆಟ್ಟಿ, ಭೋಜ ಸುವರ್ಣ, ಕಾಂಚನ ಸಂಜೀವ ರೈಯವರಿಗೆ 2009ನೆ ಸಾಲಿನ ಗೌರವ ಪ್ರಶಸ್ತಿ, ಮುದ್ದು ಮೂಡು ಬೆಳ್ಳೆ, ಲಲಿತಾ ರೈ ಹಾಗೂ ಡಾ.ಪೂವಪ್ಪ ಕಣಿಯೂರು ಅವರಿಗೆ 2009ನೆ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ-ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರಕಾ ರದ ಕಾರ್ಯದರ್ಶಿ ಜಯರಾಮರಾಜೇ ಅರಸು, ಅಲ್ಪಸಂಖ್ಯಾತ ಭಾಷಾ ಕಮಿಷನ್‌ನ ಅಧ್ಯಕ್ಷ ಡಾ.ಕೆ.ಕೆ.ಸೇಥಿ, ಮಾಜಿ ಕೇಂದ್ರ ಸಚಿವ ವಿ.ಧನಂಜಯ ಕುಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮುಂತಾದವರು ಉಪಸ್ಥಿತರಿದ್ದರು.
No comments:
Post a Comment