
ಹಾಸನ, ಮೇ ೧೧: ಹಣದ ಆಸೆಗಾಗಿ ಗರ್ಭಿಣಿ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಆರೋಪಿ ಹಾಸನದ ಆಯುರ್ವೇದ ವೈದ್ಯ ಡಾ.ಸ್ವಾಗತ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಡಾ.ಸ್ವಾಗತ್ ಇದೀಗ ವಿಚ್ಛೇದನ ಕೋರಿ ಪತ್ನಿಗೆ ನೋಟಿಸ್ ರವಾನಿಸಿದ್ದಾನೆ ಎನ್ನಲಾಗಿದೆ. ಈ ಮಧ್ಯೆ ಚೈತ್ರಪಲ್ಲವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಯಾವುದೇ ಕಾರಣಕ್ಕೂ ವಿಚ್ಛೇದನಕ್ಕೆ ಒಪ್ಪುವುದಿಲ್ಲ ಎಂದು ಆಕೆಯ ಪೋಷಕರು ಪಟ್ಟು ಹಿಡಿದಿದ್ದಾರೆ.ಕಳೆದ ಮಾರ್ಚ್ ೧೯ರಂದು ರೈತ ಮುಖಂಡ ಮೈಲನಹಳ್ಳಿ ಮಂಜೇಗೌಡ ಅವರ ಪುತ್ರಿ ಚೈತ್ರಾಪಲ್ಲವಿಯನ್ನು ಪತಿ ಡಾ.ಸ್ವಾಗತ್ ಮತ್ತವರ ಕುಟುಂಬ ಮನೆಯಿಂದ ಹೊರ ದಬ್ಬಿತ್ತು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಗರ್ಭಿಣಿ ಚೈತ್ರಾ ತನ್ನ ಪತಿಯ ಮನೆಯೆದುರು ಪೋಷಕರು ಮತ್ತು ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಪೊಲೀಸರಿಗೆ ದೂರು ನೀಡಿದ ಪರಿಣಾಮ ಡಾ.ಸ್ವಾಗತ್ ಮತ್ತು ಆತನ ತಂದೆ ತಾಯಿಯನ್ನು ಬಂಧಿಸಲಾಗಿತ್ತು. ಮೂವರು ಈಗಲೂ ಜೈಲಿನಲ್ಲಿದ್ದು, ಜಾಮೀನು ದೊರೆತಿಲ್ಲ. ಈ ನಡುವೆ ಚೈತ್ರಪಲ್ಲವಿಯಿಂದ ವಿಚ್ಛೇದನ ಕೋರಿ ಡಾ.ಸ್ವಾಗತ್ ನೋಟಿಸ್ ರವಾನಿಸಿದ್ದಾನೆ ಎನ್ನಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಸ್ವಾಗತ್ ಮತ್ತವನ ಮನೆಯವರು ಚೈತ್ರಪಲ್ಲವಿಯನ್ನು ಮನೆಯಿಂದ ಹೊರಹಾಕಿದ್ದು, ಮಾರ್ಚ್ ೧೯ ರಂದು. ಆದರೆ ಸ್ವಾಗತ್ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿರುವುದು ಮಾರ್ಚ್ ೧೮ರಂದು. ಸ್ವಾಗತ್ ಬೇರೆ ಮದುವೆಯಾಗುವ ಉದ್ದೇಶವನ್ನು ಮೊದಲೇ ಹೊಂದಿದ್ದು, ನಂತರವೇ ಈ ನಾಟಕ ಆಡಿದ್ದ ಎಂಬುದು ಸ್ಪಷ್ಟವಾಗುತ್ತಿದ್ದು, ಯಾವುದೇ ಕಾರಣಕ್ಕೂ ವಿವಾಹ ವಿಚ್ಛೇದನಕ್ಕೆ ಅವಕಾಶ ನೀಡುವುದಿಲ್ಲ. ಅಳಿಯ ಮತ್ತು ಮಗಳು ಜೊತೆಯಲ್ಲೇ ಇದ್ದು ಸಂಸಾರ ನಡೆಸಬೇಕೆಂದು ಪೋಷಕರು ಹೇಳುತ್ತಿದ್ದಾರೆ.ಅಲ್ಲದೆ ಚಿಕ್ಕಮಗಳೂರಿನಲ್ಲಿ ವಿಧವೆಯೋರ್ವಳಿಗೆ ಬಾಳುಕೊಟ್ಟು ಸಮಾಜದ ದೃಷ್ಟಿಯಲ್ಲಿ ಮಾದರಿ ಎನಿಸಿಕೊಳ್ಳಬೇಕು ಎಂದು ತಂತ್ರ ಹೆಣೆದಿದ್ದ ಸ್ವಾಗತ್, ವಿಧವೆಯ ಹೆಸರಿನಲ್ಲಿರುವ ೫೦ ಎಕರೆ ತೋಟ ಕಬಳಿಸುವ ಹುನ್ನಾರ ಹೆಣೆದಿದ್ದ ಎಂದು ಚೈತ್ರಾಳ ತಂದೆ ಮಂಜೇಗೌಡ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಗತ್ ಮಾಡಿರುವ ಅನ್ಯಾಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿ ಸಲು ಚೈತ್ರ ಪೋಷಕರು ನಿರ್ಧರಿಸಿದ್ದಾರೆ. ಅಲ್ಲದೆ ಪ್ರಕರಣದ ಸಂಬಂಧ ಮೂವರನ್ನು ಮಾತ್ರ ಬಂಧಿಸಿ ರುವ ಪೊಲೀಸರು ಡಾ.ಸ್ವಾಗತ್‌ನ ಸಹೋದರ ಸಜೀತ್‌ನನ್ನು ಬಂಧಿಸಿಲ್ಲ. ಆತನಿಂತ ತಮ್ಮ ಕುಟುಂಬಕ್ಕೆ ಜೀವಭಯ ಆರಂಭವಾಗಿದ್ದು, ಆತನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.ಚೈತ್ರಪಲ್ಲವಿಯ ಜೊತೆಯಲ್ಲಿದ್ದುಕೊಂಡೇ ಜೀವನ್ ಸಾತಿ ಡಾಟ್ ಕಾಮ್ ಮೊದಲಾದ ವೆಬ್‌ಸೈಟ್‌ಗಳಲ್ಲಿ ತಾನು ಅವಿವಾಹಿತ. ಹುಡುಗಿ ಬೇಕು ಎಂದು ಅರ್ಜಿ ಹಾಕಿದ್ದ ಸ್ವಾಗತ್, ಆಗಲೇ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದ ಎಂಬುದು ಬಯಲಾಗಿದೆ. ಇದೀಗ ಚೈತ್ರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
No comments:
Post a Comment