* ಕರಾವಳಿಯಲ್ಲಿ ಕಾಂಗ್ರೆಸ್ ‘ಕೈ’ ಮೇಲು * ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲದಲ್ಲಿ * ಅಲ್ಲಲ್ಲಿ ಗೊಂದಲ, ಘರ್ಷಣೆ, ಲಾಠಿ ಪ್ರಹಾರ * ಬಹುತೇಕ ಶಾಂತಿಯುತ ಮತ ಎಣಿಕೆ
ಬೆಂಗಳೂರು, ಮೇ 17: ಅಲ್ಲಲ್ಲಿ ಸಣ್ಣ-ಪುಟ್ಟ ಗೊಂದಲ, ಲಾಠಿ ಪ್ರಹಾರ, ಗುಂಪು ಘರ್ಷಣೆಗಳ ಮಧ್ಯೆೆ ಒಟ್ಟು 5,474 ಗ್ರಾಮ ಪಂಚಾಯತ್‌ಗಳ ಮತ ಎಣಿಕೆ ಕಾರ್ಯ ಇಂದು ಶಾಂತಿಯುತವಾಗಿ ನಡೆದಿದ್ದು, ಶೇ.80ರಷ್ಟು ಫಲಿತಾಂಶ ಹೊರಬಿದ್ದಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮುಂಚೂಣಿ ಯಲ್ಲಿದ್ದರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಸಮ ಸ್ಪರ್ಧೆಯಲ್ಲಿವೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಅಭ್ಬಿಗೆರೆ ಗ್ರಾ.ಪಂ.ನಲ್ಲಿ ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಗುಂಪು ಘರ್ಷಣೆ ನಡೆದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಗುಲ್ಬರ್ಗ, ಮೈಸೂರು, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ಸೇರಿದಂತೆ ವಿವಿಧೆಡೆ ಮತ ಎಣಿಕೆ ಕೇಂದ್ರಗಳ ಬಳಿ ಪೊಲೀಸರು ಮತ್ತು ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ವರದಿಗಳು ಬಂದಿವೆ.
ಬೆಳಗ್ಗೆ 8 ಗಂಟೆಯಿಂದ ಆಯಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮತ ಪೆಟ್ಟಿಗೆಗಳಲ್ಲಿದ್ದ ಮತ ಪತ್ರಗಳನ್ನು ಬೆರಕೆ ಮಾಡಿ ಮತ ಎಣಿಕೆ ಕಾರ್ಯವನ್ನು ಆರಂಭಿಸಲಾಯಿತು. ರಾಜಕೀಯ ಪಕ್ಷಗಳ ತೀವ್ರ ಪೈಪೂಟಿಗೆ ಎಡೆ ಮಾಡಿ ಕೊಟ್ಟಿದ್ದ ಗ್ರಾಮ ಪಂಚಾಯತ್ ಚುನಾವಣೆ ಮೇ 8ರಂದು 2,641 ಗ್ರಾ.ಪಂ.ಗಳು ಮತ್ತು 12ರಂದು 2,833 ಗ್ರಾ.ಪಂ.ಗಳಿಗೆ ಎರಡು ಹಂತಗಳಲ್ಲಿ ನಡೆದಿತ್ತು.
ಮತದಾನಕ್ಕೆ ಮತ ಯಂತ್ರದ ಬದಲು ಮತ ಪತ್ರ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಒಟ್ಟು 5,474 ಗ್ರಾಮ ಪಂಚಾಯತ್‌ಗಳ ಫಲಿತಾಂಶ ಹೊರಬೀಳಲು ಮಧ್ಯರಾತ್ರಿಯವರೆಗೂ ಕಾಯಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ರಾತ್ರಿಯಾಗಿದ್ದರೂ ಚುನಾವಣಾ ಆಯೋಗದ ಸಿಬ್ಬಂದಿ ಮತ ಎಣಿಕೆ ಕಾರ್ಯ ಮುಂದುವರಿಸಿದ್ದು, ಫಲಿತಾಂಶ ಹೊರಬೀಳದ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಕಾತರದಲ್ಲಿ ಕಾಯುತ್ತಿದ್ದ ದೃಶ್ಯ ಮತ ಎಣಿಕಾ ಕೇಂದ್ರಗಳ ಬಳಿ ಕಂಡುಬರುತ್ತಿತ್ತು
ಗ್ರಾಮ ಸಮರಕ್ಕೆ ವೇದಿಕೆಯಾಗಿದ್ದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಗ್ರಾ.ಪಂ.ಗೆ ಹೊಸ ಮುಖಗಳ ಆಯ್ಕೆಯಾಗಿದೆ. ಅತ್ತೆಯ ವಿರುದ್ಧ ಸೊಸೆಯ ಗೆಲುವು, ಸೊಸೆಯ ವಿರುದ್ಧ ಅತ್ತೆಯ ಗೆಲುವು, ಪತಿ-ಪತ್ನಿಯರ ಗೆಲುವು, ಕಾರಾಗೃಹದಲ್ಲಿದ್ದ ಅಭ್ಯರ್ಥಿ ಕೂಡ ಜಯಗಳಿಸಿದ ಪ್ರಸಂಗಗಳು ನಡೆದಿವೆ. ಒಂದು, ಎರಡು ಮತ್ತು ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿಜಯೋತ್ಸವ ಮುಗಿಲು ಮುಟ್ಟಿತ್ತು. ಸಮಾನ ಮತ ಪಡೆದ ಕೆಲ ಗ್ರಾ.ಪಂ.ಗಳಲ್ಲಿ ಅಧಿಕಾರಿಗಳು ಲಾಟರಿ ಎತ್ತುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು.
ಗೆದ್ದ ಅಭ್ಯರ್ಥಿಗಳು ಹಾರ-ತುರಾಯಿ ಅಬ್ಬರಗಳೊಂದಿಗೆ ಮೆರೆವಣಿಗೆ ನಡೆಸಿ ಸಿಹಿ ವಿತರಣೆ ಮಾಡಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಎಲ್ಲೆಡೆ ಪೊಲೀಸರು ಬಿಗಿ ಬಂದೋ ಬಸ್ತ್ ಕೈಗೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ದೊರೆಯದಂತೆ ಎಚ್ಚರ ವಹಿಸಿದ್ದರು. ರೋಣ ತಾಲೂಕಿನ ಅಬ್ಬಿಗೆರೆ ಗ್ರಾಮದಲ್ಲಿ ನಡೆದ ಸಂಘರ್ಷದಲ್ಲಿ ಗಾಯಗೊಂಡವರನ್ನು ಮಹಾತೇಶಹಳ್ಳಿ ಮತ್ತು ಶಿವಶಂಕರ್ ಎಂದು ಗುರುತಿಸಲಾಗಿದ್ದು, ಮಹಾತೇಶಹಳ್ಳಿ ಎಂಬವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗರಂ ಗ್ರಾ.ಪಂ. ಫಲಿತಾಂಶ
ಅಭ್ಯರ್ಥಿ ಪೊಲೀಸರ ವಶಕ್ಕೆ
ತುಮಕೂರು ಜಿಲ್ಲೆಯ ಹೆಬ್ಬೂರು ಗ್ರಾಮ ಪಂಚಾಯತ್ ಅಭ್ಯರ್ಥಿಯೊಬ್ಬ ಮತ ಎಣಿಕೆಯ ಸಂದರ್ಭದಲ್ಲಿ, ಪೊಲೀಸರೊಂದಿಗೆ ಜಟಾಪಟಿ ನಡೆಸಿದ ಪರಿಣಾಮ ಆತನೀಗ ಪೊಲೀಸರ ಅತಿಥಿ.
ಅತ್ತೆ-ಸೊಸೆಯರ ಕಾದಾಟ
ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಸಮರದಲ್ಲಿ ಅತ್ತೆ-ಸೊಸೆಯರ ಕಾದಾಟ. ಗೆದ್ದುದು ಮಾತ್ರ ಅತ್ತೆ. ಆದರೆ ಮಂಡ್ಯ ಜಿಲ್ಲೆಯ ತೂಬಿನಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲೆಚಾಕನಹಳ್ಳಿಯಲ್ಲಿ ಅತ್ತೆ-ಸೊಸೆ ಕಣಕ್ಕಿಳಿದಿದ್ದು, ಅತ್ತೆ ಜಯಮ್ಮ ಎಂಬವರ ವಿರುದ್ಧ ಸೊಸೆ ಪುಷ್ಪಾ ಜಯಭೇರಿ ಬಾರಿಸಿದ್ದಾರೆ.
ಅತ್ತೆಗೆ ವಿರುದ್ಧ ಅಳಿಯ
ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಸೊಳ್ಳೆ ಪುರ ಗ್ರಾಮ ಪಂಚಾಯತ್‌ನಲ್ಲಿ ಅತ್ತೆಯ ವಿರುದ್ಧ ಅಳಿಯ ಸ್ಪರ್ಧೆಗಿಳಿದಿದ್ದು, ಅತ್ತೆ ಮಂಜುಳಾ ಎಂಬವ ರನ್ನು ಅಳಿಯ ಕೇಶವಮೂರ್ತಿ ಸೋಲಿಸಿದ್ದಾರೆ.
ಪತಿ-ಪತ್ನಿ ಆಯ್ಕೆ
ಚಾಮರಾಜನಗರ ತಾಲೂಕಿನ ಶಿವಪುರ ಗ್ರಾ.ಪಂ.ಗೆ ಪತಿ-ಪತ್ನಿ ಆಯ್ಕೆಯಾಗಿದ್ದಾರೆ. ಡಿ.ನಾಗರಾಜ್ ಮತ್ತು ಅವರ ಪತ್ನಿ ಮಹದೇವಮ್ಮ ಎಂಬವರು ಆಯ್ಕೆಯಾದವರು.
ಸೋಲಿಗೆ ವಿಷ
ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾ.ಪಂ. ಅಭ್ಯರ್ಥಿ ಸೋಲು ಸಹಿಸದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ದ್ದಾರೆ. ಅಭ್ಯರ್ಥಿ ಲೋಕೇಶ್ ದೊಡ್ಡತಮ್ಮಯ್ಯ ಎಂಬ ವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Subscribe to:
Post Comments (Atom)
No comments:
Post a Comment