
ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 12ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್- ಬಿಜೆಪಿ ಸಮಬಲವನ್ನು ಕಾಯ್ದುಕೊಂಡಿದೆ.
ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಹೊಂದಿದ್ದರೆ, ಕುಂದಾಪುರದಲ್ಲಿ ಕಾಂಗ್ರೆಸ್ ಮೇಲು ಗೈ ಸಾಧಿಸಿದೆ. ಬಿಜೆಪಿಯ ಭದ್ರಕೋಟೆ ಎನಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗ್ರಾಮದ ಮತದಾರರು ಕಾಂಗ್ರೆಸ್‌ಗೆ ಮಣೆ ಹಾಕಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸನ್ನದ್ಧವಾಗಿದೆ. ಬಿಜೆಪಿ ಆಡಳಿತದಲ್ಲಿದ್ದ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆಬೀರಿರುವುದು ಈ ಬಾರಿಯ ವೈಶಿಷ್ಟ.
ಮಂಗಳೂರು ತಾಲೂಕಿನ 49 ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಸುಮಾರು 25 ಕಡೆ ಜಯ ಗಳಿಸಿದ್ದಾರೆ. ಜೆಡಿಎಸ್ ಬೆಂಬಲಿತರು ಮತ್ತು ಸ್ವತಂತ್ರ ಅಭ್ಯರ್ಥಿಗಳು ಒಂದೆರೆಡು ಕಡೆ ಗೆಲುವು ಸಾಧಿಸಿದ್ದರೆ, ಕೆಲವು ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಉಳಿದಂತೆ ಬಿಜೆಪಿ ಬೆಂಬಲಿತರು 15ಕ್ಕೂ ಅಧಿಕ ಕಡೆ ಜಯಗಳಿಸಿದ್ದಾರೆ.
ಪುತ್ತೂರು ತಾಲೂಕಿನ 37 ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಬೆಂಬಲಿತ 19, ಬಿಜೆಪಿ ಬೆಂಬಲಿತ 15 ಮಂದಿ ಜಯಗಳಿಸಿದ್ದರೆ, 3 ಕಡೆ ಅತಂತ್ರ ಸ್ಥಿತಿ ಎದುರಾಗಿದೆ. ಬಂಟ್ವಾಳ ತಾಲೂಕಿನ 46 ಗ್ರಾಮ ಪಂಚಾಯತ್‌ಗಳಲ್ಲಿ ರಾತ್ರಿ 8 ಗಂಟೆಯ ವೇಳೆಗೆ 42 ಗ್ರಾಮ ಪಂಚಾಯತ್‌ನ ಫಲಿತಾಂಶ ಪ್ರಕಟವಾಗಿದ್ದು, 24 ಕಡೆ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದು, 17 ಮಂದಿ ಬಿಜೆಪಿ ಬೆಂಬಲಿತರು ಮತ್ತು 1 ಕಡೆ ಸಮಬಲ ಸಾಧಿಸಿದೆ.
ಸುಳ್ಯ ತಾಲೂಕಿನ 27 ಗ್ರಾಮ ಪಂಚಾಯತ್‌ಗಳಲ್ಲಿ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದರೆ, ಚುನಾವಣೆ ನಡೆದ 26 ಗ್ರಾಮಗಳ ಪೈಕಿ 16 ಕಾಂಗ್ರೆಸ್ ಬೆಂಬಲಿತ, 8 ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. 2 ಕಡೆ ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸಿದೆ.
ಬೆಳ್ತಂಗಡಿ ತಾಲೂಕಿನ 41 ಗ್ರಾಮ ಪಂಚಾಯತ್ ಪೈಕಿ 18 ಕಾಂಗ್ರೆಸ್ ಮತ್ತು 16 ಕಡೆ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಉಳಿದ ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೂ ಈ ತಾಲೂಕಿನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
No comments:
Post a Comment