ಮಂಗಳೂರು, ಮೇ 23: ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲೆಟ್‌ಗಳಿಬ್ಬರ ಮೇಲೂ ಕೆಲಸದ ಹೊರೆ ಹಾಕಿರಲಿಲ್ಲ. ಮೂರು ದಿನಗಳ ಕಾಲ ರಜೆಯ ಬಳಿಕ ಅಹ್ಲುವಾಲಿಯಾ ಕೆಲಸಕ್ಕೆ ಹಾಜರಾಗಿದ್ದರು ಎಂದು ಏರ್ ಇಂಡಿಯಾ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅರವಿಂದ ಜಾದವ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಗ್ಲುಸಿಕಾ ಹಾಗೂ ಅಹ್ಲುವಾಲಿಯ ಅವರಿಬ್ಬರೂ ಅತ್ಯಂತ ಅನುಭವಿ ಪೈಲಟ್‌ಗಳು. 9 ಸಾವಿರಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವ ಇರುವ ಗ್ಲುಸಿಕಾ ಮಂಗಳೂರಿನಲ್ಲಿ 19 ಬಾರಿ ವಿಮಾನ ಇಳಿಸಿದ್ದಾರೆ. ಅಹ್ಲುವಾಲಿಯ 66 ಬಾರಿ ಮಂಗಳೂರಿನಲ್ಲಿ ವಿಮಾನ ಇಳಿಸಿರುವ ದಾಖಲೆ ಹೊಂದಿದ್ದಾರೆ. ಇವರಿಗಿಂತ ಉತ್ತಮ ಪೈಲಟ್‌ಗಳನ್ನು ನಾವು ಕೇಳಲು ಸಾಧ್ಯವೇ ಇಲ್ಲ. ಆದುದರಿಂದ ಪೈಲಟ್‌ಗಳ ಮೇಲೆ ವಿನಾ ಕಾರಣ ಆರೋಪ ಹೊರಿಸುವುದು ಸರಿಯಲ್ಲ ಎಂದು ಜಾದವ್ ಹೇಳಿದರು.
ಮಂಗಳೂರು ರನ್‌ವೇ ಬಗ್ಗೆ ದೂರುವುದಿಲ್ಲ
ಮಂಗಳೂರು ವಿಮಾನ ನಿಲ್ದಾಣವನ್ನು ಕಳೆದ 15 ವರ್ಷಗಳಿಂದ ಸಂಸ್ಥೆ ವಿಮಾನ ಸೇವೆಗಾಗಿ ಬಳಸುತ್ತಿದೆ. ರನ್‌ವೇ ಉತ್ತಮವಾಗಿದೆ. ಪ್ರಥಮ ಬಾರಿಗೆ ಮಂಗಳೂರಿನಿಂದ ದುಬೈಗೆ ವಿಮಾನ ಹಾರಿಸಿದ ಖ್ಯಾತಿ ಸಂಸ್ಥೆ ಹೊಂದಿದೆ. ಶನಿವಾರ ನಡೆದ ದುರ್ಘಟನೆಗೆ ಸ್ಪಷ್ಟವಾದ ಕಾರಣ ಈಗ ಹೇಳಲು ಸಾಧ್ಯವಿಲ್ಲ. ಸಂಸ್ಥೆಯಿಂದ ಬಳಕೆ ಮಾಡಿದ ವಿಮಾನ ಉತ್ತಮವಾಗಿತ್ತು. ಪೈಲಟ್‌ಗಳು ಪರಿಣಿತರಾಗಿದ್ದರು ಎಂದು ಜಾದವ್ ತಿಳಿಸಿದ್ದಾರೆ.
ಬೋಯಿಂಗ್ ಕಂಪೆನಿಯಿಂದ ತನಿಖೆ
ಪ್ರಯಾಣಿಕರನ್ನು ಸಾಗಿಸುವ ದೊಡ್ಡ ಗಾತ್ರದ ವಿಮಾನ ತಯಾರಿಸುವ ಅಮೆರಿಕದ ಬೋಯಿಂಗ್ ಸಂಸ್ಥೆ ದುರ್ಘಟನೆಯ ಬಗ್ಗೆ ತನಿಖೆ ನಡೆಸಲು ಆಸಕ್ತಿ ಹೊಂದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ವತಿಯಿಂದ ಆಂತರಿಕ ತನಿಖೆ ನಡೆಸಲಾಗುವುದು ಎಂದು ಅರವಿಂದ ಜಾದವ್ ತಿಳಿಸಿದ್ದಾರೆ. ತನಿಖೆಯ ಹೊಣೆ ಡಿಜಿಸಿಎಗೆ ವಿಮಾನ ಅಪಘಾತದ ತನಿಖೆ ನಡೆಸುವ ಅಧಿಕೃತ ಸಂಸ್ಥೆ ಡಿಜಿಸಿಎ ಮಂಗಳೂರಿನ ವಿಮಾನ ಅಪಘಾತದ ತನಿಖೆ ನಡೆಸಲಿದೆ ಎಂದು ಜಾದವ್ ತಿಳಿಸಿದ್ದಾರೆ.
ವಿಮೆ ಅಂತಾರಾಷ್ಟ್ರೀಯ ವಿಮಾ ಸಂಸ್ಥೆ ಹಲ್ ಇನ್ಸೂರೆನ್ಸ್, ಜನರಲ್ ಇನ್ಸೂರೆನ್ಸ್, ರಿಲಾಯನ್ಸ್ ಇನ್ಸೂರೆನ್ಸ್ ಕಂಪನಿಗಳು ವಿಮಾನ ಯಾನ ಸಂಸ್ಥೆಯ ಅಧಿಕೃತ ವಿಮಾ ಕಂಪೆನಿಗಳಾಗಿವೆ ಎಂದು ಜಾದವ್ ತಿಳಿಸಿದರು.
ಸಿವಿಆರ್ ಮಾತ್ರ ಪತ್ತೆ?
ವಿಮಾನ ಅಪಘಾತಕ್ಕೆ ಕಾರಣವಾದ ಘಟನೆಗಳ ಬಗ್ಗೆ ಮಾಹಿತಿ ನೀಡುವ ಸಲಕರಣೆಗಳಲ್ಲಿ ಒಂದಾದ ಸಿವಿಆರ್ (ಕಾಕ್‌ಪಿಟ್ ವಾಯ್ಸೆ ರೆಕಾರ್ಡರ್) ರವಿವಾರ ಸಂಜೆಯ ವೇಳೆ ಪತ್ತೆಯಾಗಿದೆ. ಆದರೆ ಕಪ್ಪು ಪೆಟ್ಟಿಗೆ ಮಾತ್ರ ಪತ್ತೆಯಾಗಿಲ್ಲ ಎಂದು ಏರ್ ಇಂಡಿಯಾದ ಕೆಲವು ಮೂಲಗಳು ತಿಳಿಸಿವೆ.
ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳಿಂದ ಪರಿಶೀಲನೆ
ಇಂದು ಮುಂಜಾನೆ ಬಜಪೆ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳಿದ್ದ ಪ್ರದೇಶಕ್ಕೆ ಕೇಂದ್ರ ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 2007ನೆ ಇಸವಿಯಿಂದ ಕಾರ್ಯಾಚರಣೆಯಲ್ಲಿದ್ದ ನೂತನ ರನ್‌ವೇ 24- 8000 ಅಡಿ ಉದ್ದ ಹೊಂದಿದ್ದು, ಹಳೆಯ ರನ್‌ವೇಗಿಂತ 2,200 ಅಡಿಗಳಷ್ಟು ಹೆಚ್ಚು ಉದ್ದ ಹೊಂದಿದೆ. ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗುವ ಸಲಕರಣೆಗಳನ್ನು ಹೊಂದಿದೆ ಎಂದು ದೃಢೀಕರಣ ಪತ್ರವನ್ನು ನಿರ್ದೇಶನಾಲಯ ಮೂರು ವರ್ಷಗಳ ಹಿಂದೆಯೇ ನೀಡಿತ್ತು.
Subscribe to:
Post Comments (Atom)
No comments:
Post a Comment