ಮಂಗಳೂರು, ಮೇ 23: ಶನಿವಾರ ಮುಂಜಾನೆ ಕೆಂಜಾರು ಬಳಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಗುರುತು ಪತ್ತೆಯಾಗದ ಮೃತದೇಹಗಳ ಪತ್ತೆಗಾಗಿ ಡಿಎನ್‌ಎ ಪರೀಕ್ಷೆ (ವಂಶವಾಹಿನಿ ಮಾದರಿ ಪರೀಕ್ಷೆ) ಪ್ರಕ್ರಿಯೆ ಆರಂಭಗೊಂಡಿದೆ. ಈ ಪ್ರಕ್ರಿಯೆಗಾಗಿ ಹೈದಾರಾಬಾದ್‌ನ ತಜ್ಞ ಡಾ. ಮಧುಸೂದನ್ ಮತ್ತು ತಂಡ ಆಗಮಿಸಿದ್ದು, ಇವರಿಗೆ ಜಿಲ್ಲಾ ಆರೋಗ್ಯ ಇಲಾಖೆಯು ಸಹಕರಿಸುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಜಗನ್ನಾಥ್ ತಿಳಿಸಿದ್ದಾರೆ.
ಡಿಎನ್‌ಎ ಪರೀಕ್ಷೆಗಾಗಿ ಗುರುತುಪತ್ತೆಯಾಗದ ಮೃತದೇಹಗಳ ಖಾಸಾ ಸಂಬಂಧಿಗಳ (ತಾಯಿ, ತಂದೆ, ಮಗ, ಮಗಳು, ಅಣ್ಣ , ತಮ್ಮ) ರಕ್ತ ಮಾದರಿ ಹಾಗೂ ಭಾವಚಿತ್ರವನ್ನು ಸಂಗ್ರಹಿಸಲಾಗುತ್ತದೆ. ಮೃತದೇಹದಿಂದ ಪಿತ್ತಕೋಶ ಅಥವಾ ಒಂದು ದವಡೆ ಹಲ್ಲು, ಫ್ಯೂಮರ್ ಬೋನ್ (ಅಸ್ತಿಪಂಜರದ ಅತ್ಯಂತ ಗಟ್ಟಿ ಹಾಗೂ ಉದ್ದದ ಮೂಳೆ) ಅಥವಾ ಮಾಂಸಖಂಡಗಳ ಮಾದರಿಗಳನ್ನು ಸಂಗ್ರಹಿಸಿ ಮೃತಪಟ್ಟ ವ್ಯಕ್ತಿ ಮತ್ತು ಸಂಬಂಧಿಯ ವಂಶವಾಹಿನಿಯ ಹೋಲಿಕೆ ಮಾಡಿ ಗುರುತು ಪತ್ತೆ ಹಚ್ಚಲಾಗುತ್ತದೆ.
ಪ್ರಸ್ತುತ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇದೀಗ ಗುರುತು ಪತ್ತೆಯಾಗದ ಮೃತರ ರಕ್ತ ಸಂಬಂಧಿಗಳ ರಕ್ತ ಮಾದರಿ, ಭಾವಚಿತ್ರಗಳ ಸಂಗ್ರಹ ಹಾಗೂ ಮೃತದೇಹಗಳ ಅಗತ್ಯ ಮಾದರಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಹೈದರಾಬಾದ್‌ನ ಡಿಎನ್‌ಎ ಪರೀಕ್ಷಾ ತಂಡ ನಡೆಸುತ್ತಿದೆ. ಇಲ್ಲಿಂದ ಸಂಗ್ರಹಿಸಲಾದ ಮಾದರಿಗಳನ್ನು ತಕ್ಷಣವೇ ಹೈದರಾಬಾದ್‌ಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಡಿಎನ್‌ಎ ಪರೀಕ್ಷೆ ಹೈದರಾಬಾದ್‌ನಲ್ಲಿ ನಡೆಯಲಿದ್ದು, ಸುಮಾರು 10ರಿಂದ 15 ದಿನಗಳಲ್ಲಿ ಈ ಡಿಎನ್‌ಎ ಪರೀಕ್ಷೆಯ ಫಲಿತಾಂಶ ದೊರೆಯಲಿದೆ. ಅಲ್ಲಿಯವರೆಗೆ ಮೃತದೇಹಗಳನ್ನು ಕೋಲ್ಡ್ ಚೈನ್ ಬಾಕ್ಸ್ (ಶೀತಲೀಕರಣ ವ್ಯವಸ್ಥೆ)ಗಳಲ್ಲಿ ಸುಭದ್ರವಾಗಿಡಲಾಗುತ್ತದೆ ಎಂದು ಡಾ. ಜಗನ್ನಾಥ್ ವಿವರ ನೀಡಿದ್ದಾರೆ. ಇಂದು ಸಂಜೆ 3-45ರ ವೇಳೆಗೆ 23 ಮೃತದೇಹಗಳ ಗುರುತು ಪತ್ತೆಯಾಗಿರಲಿಲ್ಲ.
May 24, 2010
Subscribe to:
Post Comments (Atom)
No comments:
Post a Comment