ಮದುವೆಯ ಔತಣ ಕೂಟಕ್ಕೆ ಹೋಗುತ್ತಿದ್ದಾಗ ನಡೆದ ದುರ್ಘಟನೆ
ಸುಳ್ಯ, ಮೇ 17: ವಿವಾಹದ ಬಳಿಕ ನಡೆಯುವ ಔತಣ ಕೂಟಕ್ಕೆ ಹೋಗುತ್ತಿದ್ದ ಜೀಪೊಂದು ಲಾರಿಯೊಂದಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ವರನ ಸಹಿತ ಐವರು ಸಾವನ್ನಪ್ಪಿದ ಘಟನೆ ಸುಳ್ಯ ಕನಕಮಜಲು ಸಮೀಪದ ಆನೆಗುಂಡಿ ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಘಟನೆಯ ವಿವರ: ಸುಳ್ಯ ತಾಲೂಕಿನ ಅಡ್ತಲೆಯ ಸೋಮಯ್ಯ ಗೌಡ ಎಂಬವರ ಪುತ್ರಿ ಯಮುನಾ ಎಂಬವರ ವಿವಾಹವು ಬೆಳ್ತಂಗಡಿ ಸಮೀಪದ ಮಚ್ಚಿನ ಮರಕ್ಕಡ ಮೋಹನ್ ಎಂಬವರೊಂದಿಗೆ ಶನಿವಾರ ನಡೆದಿತ್ತು. ಸೋಮವಾರ ವಧು ಸಹಿತ ವರನ ಮನೆಯವರು ತುಪ್ಪ ಒಯ್ಯುವ ಕಾರ್ಯಕ್ರಮಕ್ಕೆ ಜೀಪಿನಲ್ಲಿ ಅಡ್ತಳೆಗೆ ಹೊರಟಿದ್ದರು. ಬೆಳಗ್ಗೆ ಸುಮಾರು 10:30ಕ್ಕೆ ಜೀಪು ಆನೆಗುಂಡಿ ತಿರುವಿಗೆ ತಲುಪಿದಾಗ ಸುಳ್ಯದಿಂದ ಪುತ್ತೂರಿನತ್ತ ಹೋಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಜೀಪಿನ ಎದುರು ಭಾಗದಲ್ಲಿ ಕುಳಿತಿದ್ದ ವರ ಮೋಹನ್(45) ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡವರನ್ನು ಮಂಗಳೂರಿಗೆ ಮತ್ತು ಸುಳ್ಯಕ್ಕೆ ಕೊಂಡೊಯ್ಯಲಾಯಿತು.
ಮದು ಮಗನ ಸಂಬಂಧಿಕರಾದ ಸೋಮಣ್ಣ(55), ನಾರಾಯಣ(40), ಅಣ್ಣು(60), ಪರಮೇಶ್ವರಿ(50) ಎಂಬವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟರು.ಗಂಭೀರವಾಗಿ ಗಾಯಗೊಂಡಿರುವ ಜೀಪು ಚಾಲಕ ನಾರಾಯಣ ಗೌಡ, ಚಂದ್ರಪ್ಪ, ನಾರಾಯಣ ಎಂಬವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮದು ಮಗಳು ಯುಮುನಾ, ಚೊಕ್ಕಯ್ಯ, ಗಾಯತ್ರಿ, ರಮಾನಂದ ಎಂಬವರು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಳ್ಯ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Subscribe to:
Post Comments (Atom)
No comments:
Post a Comment