VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 18, 2010

ಕನ್ನಡದ ದೊಡ್ಡಿಯಲ್ಲಿ ಆಂಧ್ರದ ಎಮ್ಮೆ

ರಾಜ್ಯಸಭೆಯ ಸಂತೆಯಲ್ಲಿ ಈ ಬಾರಿಯೂ ಬಿಜೆಪಿ ತನ್ನ ಹಳೆಯ ತೆಲುಗು ಎಮ್ಮೆಯನ್ನು ವ್ಯಾಪಾರಕ್ಕಿಳಿಸಿದೆ. ಈ ಹಾಲಿಲ್ಲದ ಗೊಡ್ಡು ಎಮ್ಮೆಯನ್ನು ನೋಡಿ, ಅಖಂಡ ಕರ್ನಾಟಕದ ದೇಸೀ ಹಸುಗಳೆಲ್ಲ ಕಣ್ಣು ಕಣ್ಣು ಬಿಡುತ್ತಿವೆ. ಕಳೆದ ಹನ್ನೆರಡು ವರ್ಷಗಳಿಂದ ವೆಂಕಯ್ಯ ನಾಯ್ಡು ಕರ್ನಾಟಕದಿಂದ ರಾಜ್ಯಸಭೆಗೆ ಪ್ರತಿನಿಧಿಸಲ್ಪಡುತ್ತಿದ್ದಾರೆ. ಈ ಬಾರಿಯೂ ಅವರ ಆಯ್ಕೆಯೇ ಅಂತಿಮಗೊಳ್ಳುವ ಎಲ್ಲ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ವೆಂಕಯ್ಯ ನಾಯ್ಡು ಅವರನ್ನು ದೂರದ ಆಂಧ್ರದಿಂದ ತಂದು, ಕರ್ನಾಟಕದ ಪ್ರತಿನಿಧಿ ಯಾಗಿ ಕಳುಹಿಸಿಕೊಡುವ ದುರ್ದೆಸೆ ಬಿಜೆಪಿಗೆ ಯಾಕೆ ಬಂತು? ಈ ಬಾರಿಯೂ ಈ ಪ್ರಶ್ನೆ ಚರ್ಚೆಗೊಳಗಾಗುವ ಲಕ್ಷಣಗಳಿವೆ.

ಮೇಲ್ಮನೆಯ ಪ್ರಾಮುಖ್ಯ ಅದರ ಹೆಸರಿನಲ್ಲೇ ಇದೆ. ಸಮಾಜದ ಚಿಂತಕರು, ಕಲಾವಿದರು ಸೇರಿದಂತೆ ಹಿರಿಯರು ಅಲಂಕರಿಸುವ ಮನೆ ಅದು. ಕೆಳ ಮನೆಗೆ ಇವರು ಮಾರ್ಗದರ್ಶಕರು. ಕೆಳಮನೆಯಲ್ಲಿರುವ ಜನಪ್ರತಿನಿಧಿಗಳ ಅಧಿಕಾರ ಬಲದಷ್ಟೇ ಮುಖ್ಯ, ಮೇಲ್ಮನೆಯ ಪ್ರತಿನಿಧಿಗಳ ಸಾಮಾಜಿಕ ವರ್ಚಸ್ಸು. ತಮ್ಮ ನಾಡಿನ ಬೇಡಿಕೆಗಳಿಗೆ ಸ್ಪಂದಿಸಿ ಅವನ್ನು ಸರಕಾರಕ್ಕೆ ತಲುಪಿಸುವ ಕೆಲಸವನ್ನು ಇವರು ಮಾಡಬೇಕು.

ಅದನ್ನು ಮಾಡಬೇಕಾದರೆ ಮೊತ್ತ ಮೊದಲು ಅವರು ತಮ್ಮ ನಾಡಿನ ಸುಖ, ಕಷ್ಟಗಳನ್ನು ಅರಿತಿರಬೇಕು. ಆ ಕಾರಣಕ್ಕಾಗಿ, ಒಂದು ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯ ಕಡ್ಡಾಯವಾಗಿ ಆ ರಾಜ್ಯಕ್ಕೆ ಸೇರಿದವನಾಗಿರಬೇಕು. ಆಗ ಮಾತ್ರ ಆತ ತನ್ನ ನಾಡಿನ ನೋವುಗಳು, ಸಮಸ್ಯೆಗಳನ್ನು ಸರಕಾರದ ಮುಂದೆ ಇಡಬಲ್ಲ. ಎಲ್ಲೋ ದೂರದ ರಾಜ್ಯದಲ್ಲಿ ಹುಟ್ಟಿ, ಇನ್ನೊಂದು ರಾಜ್ಯವನ್ನು ಪ್ರತಿನಿಧಿಸಿದಾತ ಯಾವ ಕಾರಣಕ್ಕೂ ತಾನು ಪ್ರತಿನಿಧಿಸುವ ರಾಜ್ಯಕ್ಕೆ ನ್ಯಾಯವನ್ನು ನೀಡಲಾರ.

ವೆಂಕಯ್ಯ ನಾಯ್ಡು ಅವರನ್ನೇ ತೆಗೆದುಕೊಳ್ಳಿ. ಹನ್ನೆರಡು ವರ್ಷಗಳಿಂದ ರಾಜ್ಯದಿಂದ ರಾಜ್ಯಸಭೆಯ ಸವಲತ್ತುಗಳನ್ನು ಉಣ್ಣುತ್ತಿದ್ದಾರೆ. ಆ ಋಣಕ್ಕಾದರೂ ಕನಿಷ್ಠ ನಾಲ್ಕಕ್ಷರ ಕನ್ನಡವನ್ನಾದರೂ ಮಾತನಾಡಲು ಕಲಿತಿದ್ದರೆ ನಾವು ಅವರನ್ನು ಮಚ್ಚಬಹುದು. ಕನ್ನಡವನ್ನು ಮಾತನಾಡುವುದು ಮಾತ್ರವಲ್ಲ, ಅರ್ಥಮಾಡಿಕೊಳ್ಳಲೂ ಅವರಿಗೆ ಸಾಧ್ಯವಾಗುವುದಿಲ್ಲವೆಂದ ಮೇಲೆ, ಅವರು ಕನ್ನಡದ ಸಮಸ್ಯೆಯನ್ನು ಎಷ್ಟು ಅರ್ಥಮಾಡಿಕೊಳ್ಳಬಲ್ಲರು?

ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದಾದ ಮೇಲೆ, ಅದನ್ನು ಅವರು ರಾಜ್ಯಸಭೆಯಲ್ಲಿ ಮಂಡಿಸುವುದಾದರೂ ಹೇಗೆ? ಕಳೆದ ಹನ್ನೆರಡು ವರ್ಷಗಳಲ್ಲಿ ಕನ್ನಡದ ಯಾವುದೇ ಸಮಸ್ಯೆಯ ಕುರಿತಂತೆ ವೆಂಕಯ್ಯ ನಾಯ್ಡು ಧ್ವನಿಯೆತ್ತಿದವರಲ್ಲ. ಕಾವೇರಿ, ಕೃಷ್ಣಾ ನದಿ ವಿವಾದದ ಸಂದರ್ಭದಲ್ಲಿಯೂ ಕನ್ನಡದ ಪರವಾಗಿ ನಾಯ್ಡು ಕೆಲಸ ಮಾಡಿಲ್ಲ. ಗಣಿಗಾರಿಕೆ ವಿವಾದ ತಾರಕಕ್ಕೇರಿದಾಗಲೂ, ಇವರು ಮಾತ್ರ ತುಟಿ ಹೊಲಿದುಕೊಂಡು ಓಡಾಡುತ್ತಿದ್ದರು. ಕರ್ನಾಟಕದಿಂದ ಪ್ರತಿನಿಧಿಸಿದ್ದರೂ ಅವರೆಂದೆಂದಿಗೂ ತೆಲುಗರಾಗಿಯೇ ರಾಜ್ಯಸಭೆಯಲ್ಲಿ ಕುಳಿತಿದ್ದರು. ನಮ್ಮಿಳಗಿದ್ದೂ, ಅವರಿಗೆ ನಮ್ಮವರಾಗಲು ಸಾಧ್ಯವಾಗಲೇ ಇಲ್ಲ.

ಇಂತಹ ನಾಯಕರನ್ನು ಮತ್ತೆ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆಗೆ ಕಳುಹಿಸುವುದರಲ್ಲಿ ಏನು ಅರ್ಥವಿದೆ? ಈ ಪ್ರಶ್ನೆಯನ್ನು ಕರ್ನಾಟಕದ ಬಿಜೆಪಿ ಮುಖಂಡರು ತಮ್ಮ ವರಿಷ್ಠರಿಗೆ ಕೇಳಬೇಕಾಗಿದೆ. ವಿಪರ್ಯಾಸವೆಂದರೆ, ಇಂದು ಬಿಜೆಪಿಯೊಳಗೇ ಒಂದು ಗುಂಪು ನಾಯ್ಡು ವಿರುದ್ಧ ಕೆಲಸ ಮಾಡುತ್ತಿದೆ. ಆದರೆ ಅದಕ್ಕೆ ಕಾರಣ, ನಾಯ್ಡು ಕನ್ನಡೇತರರು ಎನ್ನುವುದಲ್ಲ. ಬಿಜೆಪಿಯೊಳಗಿನ, ಬ್ರಾಹ್ಮಣ ಮತ್ತು ಆರೆಸ್ಸೆಸ್ ರಾಜಕೀಯ, ನಾಯ್ಡು ಅವರ ಮರು ಆಯ್ಕೆಯನ್ನು ತಡೆಯುವುದಕ್ಕಾಗಿ ಒಳಸಂಚು ರೂಪಿಸುತ್ತಿದೆ.

ಈ ಸಂಚಿನ ನೇತೃತ್ವವನ್ನು ಕನ್ನಡಿಗರೇ ಆದ ಅನಂತಕುಮಾರ್ ವಹಿಸಿದ್ದಾರೆ. ನಾಯ್ಡು ಬದಲಿಗೆ ಸಂಘಪರಿವಾರದ ಹಿನ್ನೆಲೆಯಿರುವ ಓರ್ವನನ್ನು ರಾಜ್ಯಸಭೆಗೆ ಕಳುಹಿಸಬೇಕೆಂದು ಬಿಜೆಪಿಯ ಒಂದು ಗುಂಪು ವಾದಿಸುತ್ತಿದೆ. ನಾಯ್ಡು ಬದಲಿಗೆ ಓರ್ವ ಒಳ್ಳೆಯ ಕನ್ನಡಿಗನನ್ನು ರಾಜ್ಯಸಭೆಗೆ ಕಳುಹಿಸೋಣವೆಂಬ ಆಶಯ ಯಾರಲ್ಲೂ ಕಾಣಿಸುತ್ತಿಲ್ಲ. ಅನಂತಕುಮಾರ್ ಬಣ ನಾಯ್ಡು ಅವರ ವಿರುದ್ಧ ಕೆಲಸ ಮಾಡುತ್ತಿದ್ದರೂ, ಇಲ್ಲಿ ಕನ್ನಡ, ಕರ್ನಾಟಕ ಮುಖ್ಯ ಪ್ರಶ್ನೆಯಾಗಿಲ್ಲ. ನಾಳೆ, ಇನ್ನೊಂದು ರಾಜ್ಯದ ಆರೆಸ್ಸೆಸ್ ವರಿಷ್ಠನೊಬ್ಬ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದರೂ ಅದರಲ್ಲಿ ಅಚ್ಚರಿಯಿಲ್ಲ.

ತನ್ನ ಪಕ್ಷದಿಂದ ರಾಜ್ಯಸಭೆಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಬಿಜೆಪಿಯೊಳಗಿನ ವಿಚಾರವಾದರೂ, ಆ ಸದಸ್ಯ ಕನ್ನಡಿಗನಾಗಿರುವಂತೆ ನೋಡಿಕೊಳ್ಳುವುದು ಬಿಜೆಪಿಯ ರಾಜ್ಯ ಮುಖಂಡರ ಹೊಣೆಗಾರಿಕೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದೆ.

ಹೀಗಿರುವಾಗ, ರಾಜ್ಯದ ಸಮಸ್ಯೆಯನ್ನು ಅರಿತಿರುವ ಹಾಗೂ ಅದನ್ನು ಪರಿಣಾಮಕಾರಿಯಾಗಿ ಕೇಂದ್ರಕ್ಕೆ ತಲುಪಿಸುವ ಯೋಗ್ಯತೆಯಿರುವ, ರಾಜ್ಯವನ್ನು ಅರಿತ ಸದಸ್ಯನೊಬ್ಬನನ್ನು ರಾಜ್ಯಸಭೆಗೆ ಕಳುಹಿಸುವುದು ಬಿಜೆಪಿ ಮುಖಂಡರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ರಾಜ್ಯ ನಾಯಕರು ಒಂದಾಗಿ ದಿಲ್ಲಿಯ ವರಿಷ್ಠರ ಮೇಲೆ ಒತ್ತಡವನ್ನು ಹೇರಬೇಕಾಗಿದೆ. ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಪ್ರತಿನಿಧಿ ಆಯ್ಕೆಯಾಗುವಂತೆ ನೋಡಿಕೊಂಡು ಕನ್ನಡದ ಋಣವನ್ನು ತೀರಿಸಬೇಕಾಗಿದೆ.

No comments: