ಆಟಗಾರರ ವಿರುದ್ಧ ಕಠಿಣ ಕ್ರಮವಿಲ್ಲ; ಎಚ್ಚರಿಕೆ ಮಾತ್ರ?
ವೆಸ್ಟ್‌ಇಂಡೀಸ್‌ನ ಸ್ಥಳೀಯ ಪಬ್‌ವೊಂದರಲ್ಲಿನ ಗಲಾಟೆಗೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಆಟಗಾರರ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಡಳಿಯ ಕೆಲವು ವಿಭಾಗದ ಅಧಿಕಾರಿಗಳು ಮೃದು ಧೋರಣೆ ತಳೆದಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
ನೈಟ್ ಕ್ಲಬ್‌ನಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಯುವರಾಜ್ ಸಿಂಗ್, ಜಹೀರ್ ಖಾನ್ ಸಹಿತ ಏಳು ಆಟಗಾರರ ವಿರುದ್ಧ ಬಿಸಿಸಿಐ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತಲ್ಲದೆ ಒಂದು ವಾರದೊಳಗೆ ಉತ್ತರಿಸುವಂತೆ ಗಡುವು ನೀಡಲಾಗಿತ್ತು.
ಆಟಗಾರರ ಉತ್ತರದ ನಂತರವಷ್ಟೇ ಬಿಸಿಸಿಐ ಕ್ರಮಕ್ಕೆ ಮುಂದಾಲಿದೆ. ಆಶಿಶ್ ನೆಹ್ರಾ, ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ಪಿಯೂಷ್ ಚಾವ್ಲಾ ಮತ್ತು ಮುರಳಿ ವಿಜಯ್‌ರಿಗೂ ನೋಟಿಸ್ ಜಾರಿಗೊಳಿಸಲಾಗಿತ್ತು.
ಮೂಲಗಳ ಪ್ರಕಾರ ಪಬ್ ಘಟನೆಯು ಮುಂಬರುವ ಏಷಿಯಾ ಕಪ್‌ಗಾಗಿನ ತಂಡ ಆಯ್ಕೆ ವೇಳೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ಯೋಗ್ಯತೆಯ ಆಧಾರದಲ್ಲಿಯೇ ತಂಡದ ಆಯ್ಕೆ ನಡೆಯಲಿದೆ.
ಅದೇ ವೇಳೆ ನಡವಳಿಕೆಯ ನಿಯಮಾವಳಿಗಳನ್ನು ಮಂಡಳಿ ಮತ್ತಷ್ಟು ಬಿಗುಗೊಳಿಸಲಿದ್ದು, ಪಂದ್ಯದ ನಂತರ ನಡೆಯುವ ನೈಟ್ ಪಾರ್ಟಿಗಳಿಗೆ ನಿಷೇಧ ಹೇರುವ ಸಾಧ್ಯತೆಯಿದೆ.
ಸ್ನೇಹಿತನಿಗೆ ಸಹಾಯ ಹಸ್ತ ಚಾಚಿದ ಸಚಿನ್
ಅಪಘಾತದಿಂದಾಗಿ ಹಾಸಿಗೆ ಹಿಡಿದಿರುವ ಸ್ನೇಹಿತನಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹಾಯ ಚಾಚಿದ್ದಾರೆ. ಆ ಮೂಲಕ ತನ್ನ ಜೊತೆ ಆಡಿದ ಮಾಜಿ ಕ್ರಿಕೆಟಿಗನೊಬ್ಬನ ಜೀವ ಉಳಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಿಂದ ಸಚಿನ್ ಗೆಳೆಯ ದಲ್ಬೀರ್ ಸಿಂಗ್ ಗಿಲ್ ಹಾಸಿಗೆ ಹಿಡಿದಿದ್ದರು. ಇದೀಗ ಸಚಿನ್ ಗೆಳೆಯನ ಪೂರ್ಣ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ನೆರವಿಗೆ ಬಂದಿದ್ದಾರೆ.
ತೆಂಡೂಲ್ಕರ್ ಮತ್ತು ಮಾಜಿ ಕ್ರಿಕೆಟಿಗ ದಲ್ಬೀರ್ ಅಂಡರ್-17 ತಂಡದಲ್ಲಿ ಜತೆಯಾಗಿ ಆಡಿದ್ದರು. ಆದರೆ 2002ರಲ್ಲಿ ನಡೆದ ರಸ್ತೆ ಅಪಘಾತವೊಂದದಲ್ಲಿ ಸಿಲುಕಿದ ಗಿಲ್ ಎರಡೂ ಕಾಲುಗಳಿಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು. ನಂತರ ನಡೆಯುವ ಸಾಮರ್ಥ್ಯ ಕಳೆದುಕೊಂಡ ಗಿಲ್ ಕೋಮಕ್ಕೆ ಜಾರಿದ್ದರು.
ಒಟ್ಟಿನಲ್ಲಿ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಅನೇಕ ಬಾರಿ ಬಚಾವ್ ಮಾಡಿದ್ದ ಸಚಿನ್, ಸ್ನೇಹಿತನ ಪಾಲಿಗೂ ಆಪ್ತರಕ್ಷಕನಾಗಿದ್ದಾರೆ.
ಹೆಲ್ತ್‌ಕೇರ್ ಕಂಪೆನಿಗೆ ಧೋನಿ ಕಾನೂನು ನೋಟಿಸ್
ತಮಗೆ ಬರಬೇಕಿರುವ ಜಾಹೀರಾತು ಸಂಭಾವನೆಗಾಗಿ ಚೆನ್ನೈ ಮೂಲದ ಹೆಲ್ತ್‌ಕೇರ್ ಕಂಪೆನಿಯೊಂದಕ್ಕೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
2008ರಲ್ಲಿ ಪ್ರಚಾರ ರಾಯಭಾರಿಯಾಗಿ ಧೋನಿ ಜತೆ ಸುಜಾತಾ ಬಯೋಟೆಕ್ ಎಂಬ ಹೇಲ್ತ್‌ಕೇರ್ ಕಂಪೆನಿ ಒಪ್ಪಂದ ಮಾಡಿಕೊಂಡಿತ್ತು. ಕರಾರಿನಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಕಂಪೆನಿ ಸಂಭಾವನೆ ನೀಡಬೇಕಿತ್ತು. ಆದರೆ ಮುಂಗಡ ಹಣವನ್ನು ಪಾವತಿಸಿದ್ದು ಬಿಟ್ಟರೆ ಉಳಿದ ಹಣವನ್ನು ನೀಡಿಲ್ಲ ಎಂದು ಧೋನಿಯ ಬಿಸಿನೆಸ್ ಮ್ಯಾನೇಜರ್ ಪ್ರತೀಕ್ ಸೇನ್ ತಿಳಿಸಿದ್ದಾರೆ.
ಕಂಪೆನಿಯು ಇದೀಗಲೂ ತನ್ನ ಉತ್ಪನ್ನಗಳಿಗೆ ಧೋನಿ ಹೆಸರು ಹಾಗೂ ಛಾಯಾಚಿತ್ರಗಳನ್ನು ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಬಾಕಿ ಹಣ ಪಾವತಿಗಾಗಿ ಧೋನಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ವರ್ಷಕ್ಕೆ 80 ಕೋಟಿ ಆದಾಯ...
ಮೂಲಗಳ ಪ್ರಕಾರ ಕೇವಲ ಜಾಹೀರಾತಿನ ಮೂಲಕವೇ ಭಾರತದ ತಂಡದ ನಾಯಕ ವರ್ಷಕ್ಕೆ 80 ಕೋಟಿ ಆದಾಯ ಪಡೆಯುತ್ತಿದ್ದಾರೆ. ಧೋನಿ ಇದೀಗ 22 ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ.
ಪಿಯೂಷ್ ಚಾವ್ಲಾಗೆ ಅನುಮತಿ ನಿರಾಕರಿಸಿದ ಬಿಸಿಸಿಐ
ಇಂಗ್ಲಿಂಷ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಮತಿ ನಿರಾಕರಿಸಿದೆ. ಆ ಮೂಲಕ ಸರ್ರೆ ತಂಡದ ಪರ ಆಡುವ ಚಾವ್ಲಾ ಕನಸು ಕಮರಿ ಹೋಗಿದೆ.
ಈ ಹಿಂದೆ ಸರ್ರೆ ತಂಡ ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ಕರಾರು ಜುಲೈ ಮಧ್ಯದಲ್ಲಿ ಮುಕ್ತಾಯವಾಗಲಿದೆ. ನಂತರ ಯೂನಿಸ್ ಸ್ಥಾನದಲ್ಲಿ ಚಾವ್ಲಾ ಜತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ. ಆದರೆ ಭಾರತೀಯ ಕ್ರಿಕೆಟಿಗನಿಗೆ ಬಿಸಿಸಿಐ ಅನುಮತಿ ನಿರಾಕರಿಸಿದೆ.
ಭಾರತೀಯ ಲೆಗ್ ಸ್ಪಿನ್ನರ್‌ಗೆ ಬಿಸಿಸಿಐ ಅನುಮತಿ ನಿರಾಕರಿಸಿದೆ. ಆದ್ದರಿಂದ ಪ್ರಸಕ್ತ ಋತುವಿನಲ್ಲಿ ಚಾವ್ಲಾ ತಂಡವನ್ನು ಸೇರಿಕೊಳ್ಳುತ್ತಿಲ್ಲ ಎಂದು ಸರ್ರೆ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಕ್ರಿಕೆಟ್ ದಿಗ್ಗಜ ವೆಸ್ಟ್‌ಇಂಡೀಸ್‌ನ ಬ್ರ್ಯಾನ್ ಲಾರರನ್ನು ಪಡೆಯಲು ಪ್ರಯತ್ನ ನಡೆಸಲಾಗಿತ್ತು. ಆದರೆ ಕೊನೆಗೆ ಯೂನಿಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು.
May 20, 2010
Subscribe to:
Post Comments (Atom)
No comments:
Post a Comment