
ವಿಮಾನ ದುರಂತ: ಗಾಯಾಳುಗಳಿಗೆ ನೆರವು
ಮಂಗಳೂರು, ಮೇ 28: ಬಜಪೆಯಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಜೀವ ವುಳಿಸಿಕೊಂಡವರಿಗೆ ಸಹಾಯ ಮಾಡಿರುವುದು ಪ್ರಚಾರ ಬಯಸಿ ಅಲ್ಲ. ಆದರೆ ತನ್ನ ಬಗ್ಗೆ ಸತೀಶ್ ದೇವಾಡಿಗ ಎಂಬವರು ಮಾಧ್ಯಮಗಳ ಮುಂದೆ ಅಪಪ್ರಚಾರ ಮಾಡಿರು ವುದರಿಂದ ನೊಂದಿರುವುದಾಗಿ ದುರಂತದ ಮೊದಲ ಪ್ರತ್ಯಕ್ಷದರ್ಶಿ ಮುಹಮ್ಮದ್ ಶಮೀರ್ ಇಂದು ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಘಟನೆಯ ಬಗ್ಗೆ ತಾನು ಪೊಲೀಸರಿಗೆ ಪ್ರಥಮ ಮಾಹಿತಿ ನೀಡಿರುವುದಕ್ಕೆ ದಾಖಲೆಗಳಿವೆ. ಅದನ್ನು ಪೊಲೀಸರೇ ಮಾಧ್ಯಮಗಳಿಗೆ ತಿಳಿಸಿದ್ದು, ಮಾಧ್ಯಮದವರೇ ತನ್ನನ್ನು ಹುಡುಕಿಕೊಂಡು ಬಂದರೇ ವಿನಃ ತಾನಾಗಿ ಯಾರ ಬಳಿಯೂ ಹೋಗಿಲ್ಲ ಎಂದರು.
ಮೇ 26ರಂದು ಸತೀಶ್ ದೇವಾಡಿಗ ಎಂಬವರು ಪತ್ರಿಕಾಗೋಷ್ಠಿ ಕರೆದು ಮುಹಮ್ಮದ್ ಶಮೀರ್ ಮರವೂರು ಪತ್ರಿಕೆಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವುದರಿಂದ ತನಗೆ ನೋವಾಗಿದೆ. ತಾನು ರಕ್ಷಿಸಿದ ಜನರು ಸಾಕ್ಷಿಯಾಗಿದ್ದಾರೆ. ತನ್ನೊಂದಿಗೆ ಶರೀಫ್ , ನೌಶಾದ್ ಕೂಡಾ ಗಾಯಾಳುಗಳನ್ನು ರಕ್ಷಿಸಿದ್ದಾರೆ ಎಂದು ಶಮೀರ್ ತಿಳಿಸಿದ್ದಾರೆ.
ದುರಂತ ಸಂಭವಿಸಿದ 15 ನಿಮಿಷದೊಳಗೆ ನಾವು ಘಟನಾ ಸ್ಥಳಕ್ಕೆ ತಲುಪಿದ್ದೇವೆ. ಆ ವೇಳೆ ಮರದ ಕೊಂಬೆಗಳ ನಡುವೆ ಸಿಕ್ಕಿಕೊಂಡು ಬೊಬ್ಬೆ ಹಾಕುತ್ತಿದ್ದ ಡಾ. ಸಬ್ರಿನಾ ರನ್ನು ತಾನು ಮುಹಮ್ಮದ್ ಬಾವ, ನೌಶಾದ್, ಅಶ್ರ ಎಂಬವರು ಕೆಳಗಿಳಿಸಿ ನಮ್ಮ ಹಿಂದಿನಿಂದ ಬಂದ ಜನರಿಗೆ ಒಪ್ಪಿಸಿದೆವು. ಇನ್ನಿಬ್ಬರು ಗಾಯಾಳುಗಳಾದ ಅಬ್ದುಲ್ಲ ಸಾಮೆತ್ತಡ್ಕ ಮತ್ತು ಉಳ್ಳಾಲದ ಫಾರೂಕ್‌ರನ್ನು ಕೆ.ಎಚ್.ಶರೀಫ್ ಆಸ್ಪತ್ರೆಗೆ ಸಾಗಿಸುವಲ್ಲಿ ಶ್ರಮಿಸಿದ್ದಾರೆ. ಅವರಿಗೆ ಫ್ರಾನ್ಸಿಸ್ ಮತ್ತು ರಿಕ್ಷಾ ಚಾಲಕ ಈಶ್ವರ ಎಂಬವರು ನೆರವಾಗಿದ್ದರು ಎಂದು ಶಮೀರ್ ತಿಳಿಸಿದರು.
ತನ್ನನ್ನು ಪೊಲೀಸ್ ಕಮಿಶನರ್ ಅಭಿನಂದಿಸಿದ್ದಲ್ಲದೆ ಪುರಸ್ಕಾರ ಕೂಡಾ ಘೋಷಿಸಿದ್ದಾರೆ. ತನ್ನ ಬಗ್ಗೆ ಸತೀಶ್ ಮಾಧ್ಯಮಗಳಲ್ಲಿ ನೀಡಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂಬುದು ಇದರಿಂದ ಮನದಟ್ಟಾಗುತ್ತದೆ. ನನ್ನಂತೆ ಊರಿನ ಅನೇಕ ಮಂದಿ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಿದ್ದಾರೆ. ಆದರೆ ‘ಗಾಯಾಳುಗಳನ್ನು ರಕ್ಷಿಸಿದ್ದು ನಾವು, ನಮ್ಮನ್ನು ಗುರುತಿಸಿ’ ಎಂದು ಸತೀಶ್ ದೇವಾಡಿಗ ಹೇಳಿದ್ದು ಖೇದಕರ ಎಂದು ಅವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಕೆ.ಎಚ್.ಶರೀಫ್ ಮತ್ತು ನೌಶಾದ್ ಉಪಸ್ಥಿತರಿದ್ದರು.
No comments:
Post a Comment