VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ಟಯ್ಲರ್, ಇರ್ವಿನ್ ಆಟ: ಭಾರತದ ‘ಹಸುಳೆ’ಗಳಿಗೆ ಸೋಲು

*ಭಾರತ ತಂಡಕ್ಕೆ 6 ವಿಕೆಟ್‌ಗಳ ಸೋಲು *ರೋಹಿತ್ ಶತಕ ವ್ಯರ್ಥ *ಸೊರಗಿದ ಬೌಲಿಂಗ್ ಪಡೆ

ಬುಲಾವಯೊ, ಮೇ 28: ಹಿರಿಯರಿಗೆ ವಿಶ್ರಾಂತಿ ನೀಡಿ, ಗೆದ್ದು ಬರುವ ಹುಮ್ಮಸ್ಸಿನಿಂದ ಜಿಂಬಾಬ್ವೆ ತ್ರಿಕೋನ ಸರಣಿಗೆ ತೆರಳಿದ್ದ ಭಾರತದ ಹಸುಳೆಗಳ ತಂಡ ಮೊದಲ ಹೆಜ್ಜೆಯಲ್ಲಿಯೆ ಜಿಂಬಾಬ್ವೆಯಲ್ಲಿ ಎಡವಿದೆ.ರೋಹಿತ್ ಶರ್ಮಾ ಶತಕದ ನೆರವಿನಿಂದ ಭಾರತ ಸಮಾಧಾನಕರ ರನ್ ಕೂಡಿ ಹಾಕಿದ್ದರೂ, ಬೌಲಿಂಗ್ ಪಡೆ ಸೊರಗಿದ ಹಿನ್ನೆಲೆಯಲ್ಲಿ ಇಲ್ಲಿ ಇಂದು ನಡೆದ ತ್ರಿಕೋನ ಸರಣಿಯ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಜಿಂಬಾಬ್ವೆ 6ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಸರಣಿಯಲ್ಲಿ ಮೊದಲ ಗೆಲುವಿನೊಂದಿಗೆ ಜಿಂಬಾಬ್ವೆ ಶುಭಾರಂಭ ಮಾಡಿದೆ.

ಗೆದ್ದವರ ಹಿಂದೆ... ವಿಜಯದ ರನ್ ಬಾರಿಸಿ ಜಿಂಬಾಬ್ವೆಯ ದಾಂಡಿಗ ಕ್ರೆಗ್ ಇರ್ವಿನ್ ಪೆವಿಲಿಯನ್‌ಗೆ ದಾವಿಸುತ್ತಿರುವಾಗ ಅವರೊಂದಿಗೆ ಹೆಜ್ಜೆಯಿರಿಸುತ್ತಿರುವ ಮೊದಲ ಸೋಲಿನ ಆಘಾತ ಅನುಭವಿಸಿದ ಭಾರತ ತಂಡದ ನಾಯಕ ಸುರೇಶ್ ರೈನಾ.

ಭಾರತ ಗೆಲ್ಲಲು ವಿಧಿಸಿದ 286 ರನ್‌ಗಳ ಸವಾಲನ್ನು ಬೆನ್ನಟ್ಟಿದ ಜಿಂಬಾಬ್ವೆ ಬ್ರೆಂಡನ್ ಟಯ್ಲರ್ ಹಾಗೂ ಕ್ರೇಗ್ ಇರ್ವಿನ್ ನೆರವಿನಿಂದ 48.2 ಓವರ್‌ಗಳಲ್ಲಿ 289 ರನ್ ಬಾರಿಸಿ ಸುಲಭ ಜಯ ಸಾಧಿಸಿದೆ. ಸುರೇಶ ರೈನಾ ನಾಯಕತ್ವದ ಯುವ ಆಟಗಾರರನ್ನೊಳಗೊಂಡ ಭಾರತ ತಂಡ ಮೊದಲ ಸೋಲು ಅನುಭವಿಸಿತು.

ಕ್ರೆಗ್ ಇರ್ವಿನ್ (ಅಜೇಯ 67) ಸೇರಿದಂತೆ ಜಿಂಬಾಬ್ವೆ ತಂಡದ ಎಲ್ಲ ಆಟಗಾರರು ಉತ್ತಮ ಕೊಡುಗೆ ನೀಡಿದ ಪರಿಣಾಮವಾಗಿ ತಂಡಕ್ಕೆ ಅರ್ಹ ಜಯ ದೊರೆತಿದೆ. ಬ್ರೆಂಡನ್ ಟಯ್ಲರ್ 81(103 ಎಸೆತ, 4 ಬೌಂಡರಿ, 2 ಸಿಕ್ಸರ್) ರನ್ ಮಾಡಿ ಜಿಂಬಾಬ್ವೆಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅದರಲ್ಲೂ ಇರ್ವಿನ್ ಮತ್ತು ನಾಯಕ ಎಲ್ಟನ್ ಚಿಗುಂಬುರ (ಅಜೇಯ 24) ಐದನೆ ವಿಕೆಟ್‌ಗೆ 58 ರನ್ ಮಾಡಿ ಪಂದ್ಯವನ್ನು ಜಿಂಬಾಬ್ವೆಯ ಕಡೆಗೆ ತಿರುಗಿಸಿದರು ಎಂದು ಹೇಳಬಹುದು.

ಭಾರತ ವಿಧಿಸಿದ ಸವಾಲಿಗೆ ಉತ್ತರವಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ ಮೊದಲ ವಿಕೆಟ್‌ಗೆ 88 ರನ್ ಮಾಡಿತ್ತು. ಇನಿಂಗ್ಸ್ ಆರಂಭಿಸಿದ ಹ್ಯಾಮಿಲ್ಟನ್ ಮಸ್‌ಕಝ ಮತ್ತು ಬ್ರೆಂಡನ್ ಟಯ್ಲರ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಬೌಲರ್ ಗಳಾದ ವಿನಯ ಕುಮಾರ್, ಅಶೋಕ್ ದಿಂಡಾ, ಉಮೇಶ್ ಯಾದವ್ ಇವರೆಲ್ಲರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾದರು.

ಭಾರತದ ಬೌಲಿಂಗ್ ಪಡೆಯ ಬಲ ಕುಂದಿರುವುದನ್ನು ಚೆನ್ನಾಗಿ ಅರಿತುಕೊಂಡ ಜಿಂಬಾಬ್ವೆ ದಾಂಡಿಗರು ತಮ್ಮ ನೈಜ ಆಟವನ್ನು ಪ್ರದರ್ಶಿಸಿ ಗಮನ ಸೆಳೆದರು. ಟಯ್ಲರ್ ಮತ್ತು ಮಸ್‌ಕಝ ಭಾರತ ತಂಡದ ದಾಳಿಯನ್ನು ಸಮರ್ಥವಾಗಿ ಎದುರಿ ಸಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ವೇಗವಾಗಿ ತಂಡದ ಖಾತೆಗೆ ರನ್ ಜಮೆ ಮಾಡಿದರು.

ಟಯ್ಲರ್ ಮತ್ತು ಮಸ್‌ಕಝ 12.5 ಓವರ್‌ಗಳಲ್ಲಿ 88 ರನ್ ಮಾಡಿ 100 ರನ್‌ಗಳನ್ನು ಪೂರೈಸುವತ್ತ ಗಮನ ಹರಿಸಿದ್ದಾಗ, ಮಸ್‌ಕಝ(46)ರನ್ನು ಅಮಿತ್ ಮಿಶ್ರಾ ತಮ್ಮ ಓವರ್‌ನ ಕೊನೆಯ ಎಸೆತದಲ್ಲಿ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಅನಂತರ ಇನ್ನೊಂದು ವಿಕೆಟ್ ಕಿತ್ತುಕೊಳ್ಳಲು ಭಾರತದ ಬೌಲರ್‌ಗಳು 16 ಓವರ್‌ಗಳನ್ನು ಎಸೆಯಬೇಕಾಯಿತು. ಗ್ರೇಗ್ ಲ್ಯಾಂಬ್ (27)ರನ್ನು ಜಡೇಜಾ 29.3ನೆ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಆಗ ತಂಡದ ಮೊತ್ತ 151 ಆಗಿತ್ತು.

ಟಯ್ಲರ್ ಶತಕದ ಕಡೆಗೆ ನೋಡುತ್ತಿದ್ದರು. ಆದರೆ ವಿನಯ ಕುಮಾರ್ ಅದಕ್ಕೆ ಅವಕಾಶ ನೀಡಲಿಲ್ಲ 35ನೆ ಓವರ್‌ನ ಅವರ ಪ್ರಥಮ ಎಸೆತವನ್ನು ಟಯ್ಲರ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ನೆರವಾಗಿ ಉಮೇಶ್ ಯಾದವ್ ಕೈಗೆ ಸೇರುವುದರೊಂದಿಗೆ ಟಯ್ಲರ್ ಔಟಾದರು. ಅವರ ಶತಕದ ಕನಸು ಭಗ್ನಗೊಂಡಿತು. ಟಯ್ಲರ್‌ಗೆ ಉತ್ತಮ ಬೆಂಬಲ ನೀಡುತ್ತಿದ್ದ ಚಾರ್ಲ್ಸ್ ಕೊವೆಂಟ್ರಿ 25 ಎಸೆತಗಳಲ್ಲಿ 3 ಸಿಕ್ಸರ್ ಇರುವ 32 ರನ್‌ಗಳನ್ನು ಚಚ್ಚಿದರು. ಇವರನ್ನು 43ನೆ ಓವರ್‌ನಲ್ಲಿ ವಿನಯ ಕುಮಾರ್ ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ಇಂದಿನ ಆಟದಲ್ಲಿ ಇನ್ನೊಂದು ವಿಕೆಟ್‌ನ್ನು ತಮ್ಮ ಖಾತೆಗೆ ಜಮೆ ಮಾಡಿದರು.

ಇರ್ವಿನ್ ಮತ್ತು ನಾಯಕ ಚಿಗುಂಬುರ ಜವಾಬ್ದಾರಿಯನ್ನು ಅರಿತು ಆಡಿ ತಂಡವನ್ನು ಗೆಲುವಿನ ಕಡೆಗೆ ಕೊಂಡೊಯ್ದರು. ಭಾರತದ ಪರ ಆರ್ ವಿನಯ ಕುಮಾರ್ 51ಕ್ಕೆ 2, ಅಮಿತ್ ಮಿಶ್ರಾ 47ಕ್ಕೆ 1ಹಾಗೂ ರವೀಂದ್ರ ಜಡೇಜಾ 51ಕ್ಕೆ 1 ವಿಕೆಟ್ ಪಡೆದರು. ಯೂಸುಫ್ ಪಠಾಣ್, ಅಶೋಕ್ ದಿಂಡಾ, ಉಮೇಶ್ ಯಾದವ್, ರೋಹಿತ್ ಶರ್ಮಾ ಇವರಿಗೆ ವಿಕೆಟ್ ದಕ್ಕಲಿಲ್ಲ.

ಇದಕ್ಕೆ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ಸುರೇಶ್ ರೈನಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಗಳಾದ ಮುರಳಿ ವಿಜಯ್ (11) ಮತ್ತು ದಿನೇಶ್ ಕಾರ್ತಿಕ್ (22) ಪ್ರಥಮ ವಿಕೆಟ್‌ಗೆ 56 ರನ್‌ಗಳನ್ನು ಸೇರಿಸಿದ್ದರು. ಮುರಳಿ ವಿಜಯ್ ಔಟಾಗುತ್ತಿದ್ದಂತೆ ಕ್ರಿಸ್‌ಗೆ ಬಂದ ಉಪನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ಕೊಹ್ಲಿಯನ್ನು ಹೊರತುಪಡಿಸಿ ದರೆ ಬ್ಯಾಟ್ ಮಾಡಿದ ಭಾರತದ ಇತರ ದಾಂಡಿಗರು ತಂಡಕ್ಕೆ ಎರಡಂಕೆಯ ಕೊಡುಗೆ ನೀಡಿದ್ದರು.

ರೋಹಿತ್ ಶರ್ಮಾ ಆಕರ್ಷಕ ಆಟವಾಡಿ 119 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 4 ಸಿಕ್ಸರ್ ಇರುವ 114 ರನ್ ಮಾಡಿ ಔಟಾದರು. ಶರ್ಮಾ ಮತ್ತು ರವಿಂದ್ರ ಜಡೇಜಾ 5ನೆ ವಿಕೆಟ್‌ಗೆ 130 ರನ್‌ಗಳ ಕೊಡುಗೆ ನೀಡಿದರು. ಭಾರತದ ಪ್ರಥಮ ವಿಕೆಟ್ ಉರುಳುತ್ತದಂತೆ ಬ್ಯಾಟಿಂಗ್ ಶಕ್ತಿ ಕುಸಿಯಿತು. ಆದರೆ ನಾಯಕ ಸುರೇಶ ರೈನಾ(37)ರು ರೋಹಿತ್ ಶರ್ಮಾಗೆ ಸಾಥ್ ನೀಡಿ 67 ರನ್‌ಗಳನ್ನು ತಂಡದ ಖಾತೆಗೆ ಜಮೆ ಮಾಡಿದರು.

ಅಂತಿಮವಾಗಿ ರವೀಂದ್ರ ಜಡೇಜಾ (ಅಜೇಯ 61) ಮತ್ತು ಯೂಸುಫ್ ಪಠಾಣ್ (ಅಜೇಯ 11) ನೆರವಿಂದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 285 ರನ್ ಸಂಪಾದಿಸಿತು. ಜಿಂಬಾಬ್ವೆ ಪರ ಕ್ರಿಸ್ ಎಂಪೊಪು 63ಕ್ಕೆ 2 ಮತ್ತು ಪ್ರಾಸ್ಟರ್ ಉತ್ಸೇಯ 46ಕ್ಕೆ 1 ವಿಕೆಟ್ ಹಂಚಿಕೊಂಡರು. ಜಿಂಬಾಬ್ವೆಯ ಬ್ರೆಂಡನ್ ಟಯ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಅನನುಭವಿ ಬೌಲಿಂಗ್ ಪಡೆ ಹಿನ್ನಡೆಗೆ ಕಾರಣ: ರೈನಾ
ಭಾರತ ತಂಡದ ನಾಯಕತ್ವ ಪಡೆದ ಚೊಚ್ಚಲ ಪಂದ್ಯದಲ್ಲೇ ಜಿಂಬಾಬ್ವೆ ವಿರುದ್ಧ ಎದುರಾದ ಸೋಲಿಗೆ ಪ್ರತಿಕ್ರಿಯೆ ನೀಡಿರುವ ಸುರೇಶ್ ರೈನಾ, ಅನನುಭವಿ ಬೌಲಿಂಗ್ ಪಡೆ ಹಿನ್ನಡೆಗೆ ಕಾರಣವಾಯಿತು ಎಂದು ಹೇಳಿದರು.

ದುರದೃಷ್ಟವಶಾತ್ ಈ ಪಂದ್ಯದಲ್ಲಿ ನಾವು ಚೆನ್ನಾಗಿ ದಾಳಿ ಮಾಡಲಿಲ್ಲ. ಕೆಲವು ಬೌಲರುಗಳಿಗಂತೂ ಇದು ಪದರ್ಪಣಾ ಪಂದ್ಯ. ಇಲ್ಲಿ ಮಾಡಿದ ತಪ್ಪನ್ನು ಅರಿತು ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡುವ ವಿಶ್ವಾಸವಿದೆ ಎಂದು ಜಿಂಬ್ವಾಬೆ ವಿರುದ್ಧ ಎದುರಾದ ಆರು ವಿಕೆಟುಗಳ ಸೋಲಿನ ನಂತರ ರೈನಾ ಪ್ರತಿಕ್ರಿಯಿಸಿದರು.

ಭಾರತದ ಮೂವರು ವೇಗಿಗಳಾದ ಕರ್ನಾಟಕದ ವಿನಯ್ ಕುಮಾರ್, ಅಶೋಕ್ ದಿಂಡಾ ಮತ್ತು ಉಮೇಶ್ ಯಾದವ್‌ಗಿದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆದರೆ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಈ ಮೂವರು ವಿಫಲರಾಗಿದ್ದರು.

ಆರಂಭದ ಆರು ಓವರ್ ನಾವು ಚೆನ್ನಾಗಿ ಎಸೆಯಲಿಲ್ಲ. ಆದರೆ ಸ್ಪಿನ್ನರುಗಳು ಉತ್ತಮ ದಾಳಿ ಸಂಘಟಿದರು. ಕೊನೆಗೆ ಬ್ಯಾಟಿಂಗ್ ಪವರ್-ಪ್ಲೇ ಬಾಕಿ ಉಳಿದಿದ್ದರಿಂದ ಎದುರಾಳಿಗಳು ಅದನ್ನು ಉಪಯೋಗಿಸಿಕೊಂಡರು ಎಂದವರು ವಿವರಿಸಿದರು.

ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಇನ್ನಷ್ಟು ಕಠಿಣ ಪ್ರಯತ್ನ ಮುಂದುವರಿಯಬೇಕಾಗಿದೆ ಎಂದು ರೈನಾ ಸೇರಿಸಿದರು.

ಶ್ರೀಶಾಂತ್ ಕೋಪ ಬಿಟ್ಟರೆ ಸೈ:ಅಝರುದ್ದೀನ್
ಕೊಚ್ಚಿ, ಮೇ 28: ಉತ್ತಮ ಬೌಲರ್ ಆಗಿರುವ ಎಸ್.ಶ್ರೀಶಾಂತ್ ತನ್ನ ಮುಗೋಪಿ ವರ್ತನೆಯಿಂದ ಅಪಖ್ಯಾತಿಗೊ ಳಗಾಗುತ್ತಿದ್ದಾರೆ ಎಂದು ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಹೇಳಿದ್ದಾರೆ.

ಇವರು ಉತ್ತಮ ದಾಳಿ ನಡೆಸುತ್ತಾರೆ. ಆದರೆ ನನ್ನ ಪ್ರಕಾರ, ಇವರ ಕೋಪದ ಸ್ವಭಾವದಿಂದ ತನ್ನ ಆಟಕ್ಕೆ ಕಳಂಕ ತರುತ್ತಿದ್ದಾರೆ ಎನಿಸುತ್ತದೆ. ಇವರು ತನ್ನ ಫಿಟ್‌ನೆಸ್ ಬಗ್ಗೆ ಸ್ವಭಾವದಲ್ಲಿ ಬದಲಾವಣೆ ತರಬೇಕಾಗಿದೆ. ನನಗೆ ಇವರು ದುರ್ವರ್ತನೆಯಿಂದ ಪ್ರತಿಭೆಯನ್ನು ನಷ್ಟಗೊಳಿಸುವುದು ಸರಿಯಲ್ಲ ಎಂದು ಅಝರುದ್ದೀನ್ ಸಲಹೆ ನೀಡಿದ್ದಾರೆ.

No comments: