
ಲಾಹೋರ್, ಮೇ. 19 : ಸೋಷಿಯಲ್ ವೆಬ್ ತಾಣ ಫೇಸ್ ಬುಕ್ ನಲ್ಲಿ ಚಿತ್ರಿಸಲಾಗಿರುವ ಮೊಹ್ಮದ್ ಪೈಗಂಬರರ ಬಗ್ಗೆ ಕಲಾಕೃತಿಗೆ ಸಂಬಂಧಿಸಿದಂತೆ ದೇಶಾದ್ಯಂತ ಅಶಾಂತಿ ಉಂಟಾಗಿರುವುದರಿಂದ ಫೇಸ್ ಬುಕ್ ನ್ನು ನಿಷೇಧಿಸುವಂತೆ ಲಾಹೋರ್ ಹೈಕೋರ್ಟ್ ಸಂಬಂಧಪಟ್ಟ ಇಲಾಖೆಗೆ ಬುಧವಾರ ಆದೇಶ ನೀಡಿದೆ.
ಮೇ 20 ರಂದು ಮೊಹ್ಮದ್ ಪೈಗಂಬರ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ವೆಬ್ ತಾಣ ಫೇಸ್ ಬುಕ್ ನಲ್ಲಿ ಮೊಹ್ಮದ್ ಪೈಗಂಬರರ ಚಿತ್ರವನ್ನು ಪ್ರಕಟಿಸಿದ್ದು ವ್ಯಾಪಕ ವಿರೋಧ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಲಾಹೋರ್ ನ ವಕೀಲರ ಸಂಘ ಫೇಸ್ ಬುಕ್ ನಲ್ಲಿ ಬಂದಿರುವ ಕಲಾಕೃತಿ ವಿರೋಧಿಸಿ ಕೋರ್ಟ್ ಮೊರೆ ಹೋಗಿತ್ತು. ಇಂದು ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ಫೇಸ್ ಬುಕ್ ನ್ನೇ ನಿಷೇಧಿಸುವಂತೆ ದೂರವಾಣಿ ಇಲಾಖೆಗೆ ನಿರ್ದೇಶನ ನೀಡಿದೆ. ಮಧ್ಯಂತರ ಆದೇಶ ಇದಾಗಿದ್ದು, ಮೇ 31 ರಂದು ವಿಚಾರಣೆ ನಡೆಯಲಿದ್ದು, ಅಂತಿಮ ಆದೇಶ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಇಸ್ಲಾಂ ಧರ್ಮದ ಮೂಲಪುರುಷ ಮೊಹ್ಮದ್ ಪೈಗಂಬರರ ಕಲಾಕೃತಿಯಾಗಲಿ ಅಥವಾ ಚಿತ್ರವಾಗಲಿ ಪ್ರಕಟಿಸುವುದನ್ನು ಇಸ್ಲಾಂ ಧರ್ಮ ನಿಷೇಧಿಸಿದೆ. ಡೆನ್ಮಾರ್ಕ್ ನ ಪತ್ರಿಕೆಯೊಂದು ಮೊಹ್ಮದ್ ಪೈಗಂಬರರ ಭಾವಚಿತ್ರವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಪ್ರತಿಭಟನೆ, ವಿರೋಧ ವ್ಯಕ್ತವಾಗಿದ್ದು ಗೊತ್ತೆ ಇದೆ. ಕರ್ನಾಟಕದ ರಾಯಚೂರು ಮೂಲದ ಕನ್ನಡ ಭಾಷೆಯ ಜಿಲ್ಲಾ ಪತ್ರಿಕೆಯೊಂದು ಮೊಹ್ಮದ್ ಪೈಗಂಬರರ ಚಿತ್ರವನ್ನು ಪ್ರಕಟಿಸಿದ್ದು ತೀವ್ರ ಗಲಭೆ, ಗದ್ದಲಕ್ಕೆ ಕಾರಣವಾಗಿತ್ತು.
No comments:
Post a Comment