ಬೆಂಗಳೂರು, ಮೇ 19 : ಬಂಗಾಳ ಕೊಲ್ಲಿಯಲ್ಲಿ ಬೀಸಿರುವ ಲೈಲಾ ಚಂಡಮಾರುತದಿಂದಾಗಿ ಕರ್ನಾಟಕದ ಕರಾವಳಿ, ಮಲೆನಾಡು ಪ್ರದೇಶ ಮತ್ತು ದಕ್ಷಿಣದ ಕೆಲ ಭಾಗಗಳಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದ್ದು, ಹವಾಮಾನದಲ್ಲಿ ತೀಕ್ಷ್ಣವಾದ ಬದಲಾವಣೆ ಕಂಡುಬಂದಿದೆ. ಬಿಸಿಲಿನ ಝಳದಿಂದ ಬಸವಳಿದಿದ್ದ ಜನತೆಗೆ ಜರ್ರನೆ ಇಳಿದಿರುವ ತಾಪಮಾನ ನಿಟ್ಟುಸಿರು ಬಿಡುವಂತೆ ಮಾಡಿದೆ.
ರಾಜಧಾನಿಯಲ್ಲಿ ಕಳೆದ ವಾರ 35 ಡಿಗ್ರಿ ಸೆಲ್ಶಿಯಸ್ ತಲುಪಿದ್ದ ತಾಪಮಾನ ಇಂದು 26 ಡಿಗ್ರಿಗಿಳಿದಿದೆ. ಕಳೆದ ಮೂರು ದಿನಗಳಿಂದ ಹಗಲು ಮರೆಯಾಗಿ ಸಂಜೆ ಮಾತ್ರ ಮಳೆ ಸುರಿಸುತ್ತಿದ್ದ ಮೋಡಗಳು ಇಂದು ಬೆಳಗಿನ ಜಾವದಿಂದಲೇ ಮೋಡಗಳ ಚಪ್ಪರವನ್ನು ಹಾಕಿವೆ. ಸೂರ್ಯನಿಗೆ ಅಪ್ಪಿತಪ್ಪಿ ಕೂಡ ಇಣುಕಲು ಅವಕಾಶ ನೀಡಿಲ್ಲ.
ಹವಾಮಾನ ಇಲಾಖೆಯ ಪ್ರಕಾರ, ಇದೇ ಸ್ಥಿತಿ ರಾಜ್ಯದಾದ್ಯಂತ ಮುಂದುವರಿಯಲಿದೆ. ಕರಾವಳಿ, ಮಲೆನಾಡು ಪ್ರದೇಶ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಬಾರದೆಂದು ಎಚ್ಚರಿಕೆಯನ್ನೂ ನೀಡಿದೆ.
ಕರಾವಳಿಯಲ್ಲಿ ಭಾರೀ ಮಳೆ : ಹವಾಮಾನದಲ್ಲುಂಟಾದ ಬದಲಾವಣೆಯಿಂದಾಗಿ ಕರ್ನಾಟಕದ ಕರಾವಳಿಯುದ್ದಕ್ಕೂ ಭರ್ಜರಿಯಾಗಿ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 11 ಸೆಂ.ಮೀ. ಮಳೆ ಸುರಿದಿದ್ದರೆ, ಕರ್ನಾಟಕದ ಚಿರಾಪುಂಜಿ ಆಗುಂಬೆಯಲ್ಲಿ 9 ಸೆಂ.ಮೀ. ಮತ್ತು ಕುಂದಾಪುರದಲ್ಲಿ 7 ಸೆಂ.ಮೀ. ಮಳೆ ಸುರಿದಿದೆ.
ಉಳಿದಂತೆ ಪಣಂಬೂರು, ಕಾರ್ಕಳ, ಗೇರುಸೊಪ್ಪ, ಲಕ್ಕವಳ್ಳಿಯಲ್ಲಿ 6 ಸೆಂ.ಮೀ., ಶಿರಾಲಿ, ಮಂಕಿ, ಬ್ಯಾಡಗಿ, ಹಿರೇಕೇರೂರ್, ಗಂಗಾವತಿ, ಗಂಗಾವತಿ, ಲಿಂಗನಮಕ್ಕಿ, ಚಳ್ಳಕೆರೆ, ನಾಯಕನಹಟ್ಟಿಯಲ್ಲಿ 5 ಸೆಂ.ಮೀ., ಹೊಳಲ್ಕೆರೆ, ಕೊಪ್ಪಳ, ಹಿರಿಯೂರು, ಮೊಳಕಾಲ್ಮೂರು, ತಾಳಗುಪ್ಪದಲ್ಲಿ 4 ಸೆಂ.ಮೀ. ಮಳೆಯಾಗಿದೆ. ಶಿವಮೊಗ್ಗ, ಚಿತ್ರದುರ್ಗ, ರಾಮನಗರ ಜಿಲ್ಲೆಯಲ್ಲಿಯೂ ಸಾಕಷ್ಟು ಮಳೆಯಾಗಿದೆ.
ಕರಾವಳಿ, ಮಲೆನಾಡು, ದಕ್ಷಿಣ ಕರ್ನಾಟಕದಲ್ಲಿ ಸೂರ್ಯ ಕಣ್ಣಾಮುಚ್ಚಾಲೆಯಾಡುತ್ತಿದ್ದರೆ, ಉತ್ತರ ಕರ್ನಾಟಕದಲ್ಲಿ ಎಂದಿನಂತೆ ನಗುತ್ತಿದ್ದಾನೆ. ಗುಲಬರ್ಗದಲ್ಲಿ ಇಂದು ತಾಪಮಾನ 44 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
ತ.ನಾಡು, ಆಂಧ್ರದಲ್ಲಿ : ಗಂಟೆಗೆ 65ರಿಂದ 75 ಕಿ.ಮೀ. ವೇಗದಲ್ಲಿ ಬೀಸಿರುವ ಲೈಲಾ ಚಂಡಮಾರುತ ಆಂದ್ರಪ್ರದೇಶ ಮತ್ತು ತಮಿಳುನಾಡಿನ ಉತ್ತರ ಭಾಗದ ಕರಾವಳಿ ಪತರಗುಟ್ಟುವಂತೆ ಮಾಡಿದೆ. ಎರಡೂ ರಾಜ್ಯಗಳ ಪೂರ್ವ ಕರಾವಳಿಗುಂಟ ಭಾರೀ ಮಳೆಯಾಗುತ್ತಿದ್ದು ಸುಮಾರು 50 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಆಂಧ್ರದಲ್ಲಿ ಮಳೆಗೆ 10 ಜನ ಮತ್ತು ತಮಿಳುನಾಡಿನಲ್ಲಿ 5 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿರುಗಾಳಿಯ ವೇಗ ಇನ್ನೂ ಹೆಚ್ಚಲಿದ್ದು ಓರಿಸ್ಸಾ ಜನತೆಯನ್ನು ಕೂಡ ಎಚ್ಚರಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಆಂಧ್ರದ ಕೃಷ್ಣಾ ಗೋದಾವರಿ ಜಿಲ್ಲೆಯಲ್ಲಿ ರಿಲಾಯನ್ಸ್ ಕಂಪನಿ ಕಚ್ಚಾ ತೈಲೋತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಆದರೆ, ಮುಂಗಾರು ಪೂರ್ವ ಮಳೆ ಅಕ್ಕಿ ಬೆಳೆಯಲಾಗುವ ಪ್ರದೇಶದಲ್ಲಿ ವರದಾನವಾಗಿ ಪರಿಣಮಿಸಲಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೈತರು ಬಿತ್ತನೆಗಾಗಿ ಸಿದ್ಧತೆ ನಡೆಸುತ್ತಿದ್ದು ಮುಂದಿನ ತಿಂಗಳಿನಿಂದ ಭತ್ತ ಬಿತ್ತಲು ಈ ಮಲೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
May 19, 2010
Subscribe to:
Post Comments (Atom)
No comments:
Post a Comment