ಹೊಸದಿಲ್ಲಿ, ಮೇ 19: ‘ನಕ್ಸಲರು ದೊಡ್ಡ ಭಯೋತ್ಪಾದಕರು’ ಎಂದು ಹೇಳಿರುವ ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ ಸಿಂಗ್, ಅವರ ವಿರುದ್ಧ ಮೃದು ಧೋರಣೆ ತಾಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ನಕ್ಸಲರ ದಮನಕ್ಕೆ ವಾಯುಪಡೆ ಉಪಯೋಗಿಸುವುದಕ್ಕೆ ಅವರು ಒಲವು ತೋರಿಲ್ಲ.
ರಾಜ್ಯದಲ್ಲಿ ಇತ್ತೀಚೆಗೆ ನಕ್ಸಲರ ವಿರುದ್ಧದ ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಸಿಂಗ್, ಸಮಸ್ಯೆ ನಿವಾರಣೆಗೆ ದೀರ್ಘಕಾಲೀನ ಯೋಜನೆ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
14 ವಿಶೇಷ ಪೊಲೀಸ್ ಅಧಿಕಾರಿಗಳು ಸೇರಿದಂತೆ 35 ಮಂದಿ ಹತ್ಯೆಗೀಡಾದ ದಾಂತೆವಾಡ ದಾಳಿಯ ಎರಡು ದಿನಗಳ ಬಳಿಕ ರಮಣ್‌ಸಿಂಗ್, ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾರನ್ನು ರಾಜಧಾನಿಯಲ್ಲಿ ಭೇಟಿಯಾದರು.
ಛತ್ತೀಸ್‌ಗಡದಲ್ಲಿ ನಕ್ಸಲರು ನಡೆಸಿದ ದಾಳಿಯ ವಿವರಣೆ ನೀಡಿದ ರಮಣ್ ಸಿಂಗ್, ರಾಜ್ಯದಲ್ಲಿ ನಕ್ಸಲರು, 1000ಕ್ಕಿಂತಲೂ ಅಧಿಕ ನಾಗರಿಕರು, 650ಕ್ಕಿಂತಲೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಹತ್ಯೆ ಮಾಡಿದ್ದಾರೆ. 132 ವಿದ್ಯುತ್ ಗೋಪುರ, 160 ಶಾಲೆಗಳು ಮತ್ತು ಮೂರು ಆಸ್ಪತ್ರೆಗಳನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಿದರು.
‘‘ಅವರು ದೊಡ್ಡ ಭಯೋತ್ಪಾದಕರು, ನಕ್ಸಲರು ಪ್ರಜಾಪ್ರಭುತ್ವಕ್ಕಿರುವ ದೊಡ್ಡ ಸವಾಲು. ಬಂದೂಕಿನಿಂದ ಅವರು ಅಧಿಕಾರ ಕಬಳಿಸಲು ಪ್ರಯತ್ನಿಸುತ್ತಿ ದ್ದಾರೆ...’’ ಎಂದು ಮುಖ್ಯಮಂತ್ರಿ ಹೇಳಿದರು.
‘‘ಅವರ ವಿರುದ್ಧ ಮೃದು ಧೋರಣೆ ಸರಿಯಲ್ಲ, 60 ವರ್ಷಗಳಿಂದ ಈ ಮೃದು ಧೋರಣೆಯಿಂದ ಏನನ್ನು ಸಾಧಿಸಿದ್ದೇವೆ?’’ ಎಂದು ಅವರು ಪ್ರಶ್ನಿಸಿದರು.
ನಕ್ಸಲರ ವಿರುದ್ಧ ವಾಯುಪಡೆ ಬಳಸುವುದಕ್ಕೆ ಒಲವು ವ್ಯಕ್ತಪಡಿಸದ ಅವರು, ದಟ್ಟ ಅರಣ್ಯ ಪ್ರದೇಶಕ್ಕೆ ಬಾಂಬ್ ದಾಳಿ ನಡೆಸಲು ಅಸಾಧ್ಯ ಎಂದು ಹೇಳಿದರು. ಸೈನಿಕ ಹೆಲಿಕಾಪ್ಟರ್‌ಗಳನ್ನು ಕೇವಲ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಮಾತ್ರ ಬಳಸಬೇಕು ಎಂದರು.
‘ಲಷ್ಕರೆ ತಯ್ಯಿಬಾ ಸಂಪರ್ಕ ಸಾಧ್ಯತೆ’
ನಕ್ಸಲರಿಗೆ ಲಷ್ಕರೆ ತಯ್ಯಿಬಾ ಸಂಘಟನೆಯೊಂದಿಗೆ ಸಂಪರ್ಕಯಿರುವ ಸಾಧ್ಯತೆ ಇದೆ ಎಂದು ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ ಸಿಂಗ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಯಪಡೆ ಉಪಯೋಗಿಸದೆ ಕೇಂದ್ರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂರವರ ಬೆಂಬಲ ಪಡೆದಿರುವುದಾಗಿ ಅವರು ಹೇಳಿದರು.
ಇತ್ತೀಚೆಗಿನ ನಕ್ಸಲರ ದಾಳಿಯು ಅವರು ಉತ್ತಮ ತರಬೇತಿ ಪಡೆದಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ನಕ್ಸಲರು ಸ್ಫೋಟಿಸಿದ ಸ್ಫೋಟಕಗಳು, ಆಯುಧಗಳು ಮತ್ತು ತಂತ್ರಗಾರಿಕೆಯನ್ನು ಗಮನಿಸಿದಾಗ ಅವರು ಲಷ್ಕರೆ ತಯ್ಯಿಬಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ ಎಂದ ರಮಣ್ ಸಿಂಗ್, ಈ ಬಗ್ಗೆ ಯಾವುದೇ ದೃಢೀಕರಣ ಇಲ್ಲ ಎಂದೂ ಅವರು ಹೇಳಿದರು.
May 20, 2010
Subscribe to:
Post Comments (Atom)
No comments:
Post a Comment