May 19, 2010
ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಇಳಿಕೆ
ನವದೆಹಲಿ, ಮೇ 18 : ಹಣದುಬ್ಬರದಿಂದಾಗಿ ಮತ್ತು ಆರ್ಥಿಕ ಮುಗ್ಗಟ್ಟಿನ ಹೊಡೆತದಿಂದ ದೇಶದ ಜನತೆ ಜಾಣರಾಗುತ್ತಿದ್ದಾರೆ. ಮಧ್ಯಮ ವರ್ಗದ ಜನರು ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಸಿದ್ಧಾಂತಕ್ಕೆ ಮೊರೆಹೋಗಿದ್ದು ಕೊಳ್ಳುಬಾಕ ಸಂಸ್ಕೃತಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಇದರ ಪರಿಣಾಮವೇ, ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಕುಸಿದಿರುವುದು. ಜೋಬಲ್ಲಿ ದುಡ್ಡಿದ್ದೆ ಮಾತ್ರ ಕೊಳ್ಳುವುದು, ಇಲ್ಲದಿದ್ದರೆ ಸುಮ್ಮನಿದ್ದುಬಿಡೋಣ ಎಂಬ ಮಂತ್ರ ಜಪಿಸುತ್ತಿದ್ದಾರೆ. ಅನಗತ್ಯವಾಗಿ ಕ್ರೆಡಿಟ್ ಕಾರ್ಡ್ ಬಳಸಿ ಸಾಲ ತಲೆಯ ಮೇಲೆ ಎಳೆದುಕೊಳ್ಳುವುದಕ್ಕೆ ಜನ ಹಿಂಜರಿಯುತ್ತಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಏಪ್ರಿಲ್ 2008ರಲ್ಲಿ 28.9 ಮಿಲಿಯನ್ ತಲುಪಿದ್ದ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಇದೀಗ ಕುಸಿದಿದೆ. ಕಳೆದ ಮಾರ್ಚ್ ತಿಂಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ 20 ಮಿಲಿಯನ್ ಗಿಂತ ಕೆಳಗಿದೆ.
ಕಳೆದೆರಡು ವರ್ಷಗಳಿಂದ ಸುಮಾರು 10 ಮಿಲಿಯನ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. 2006ರ ಆಗಸ್ಟ್ ನಿಂದ ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ 20 ಮಿಲಿಯನ್ ಗಿಂತ ಕೆಳಗೆ ಕುಸಿದಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ ಸಾಲ ಕಾರ್ಡು ಮತ್ತು ವೈಯಕ್ತಿಕ ಸಾಲಗಳ ಮಾರುಕಟ್ಟೆ ತೀವ್ರವಾಗಿ ಕುಸಿದಿದ್ದು, ಬಳಸದ ಕ್ರೆಡಿಟ್ ಕಾರ್ಡುಗಳನ್ನು ಬ್ಯಾಂಕುಗಳು ರದ್ದುಪಡಿಸಿವೆ. ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡು ಬಳಕೆದಾರರ ಸಂಖ್ಯೆ 8 ಮಿಲಿಯನ್ ನಿಂದ 5 ಮಿಲಿಯನ್ ಗೆ ಕುಸಿದಿದೆ. ದೇಶದ ಎರಡನೇ ದೊಡ್ಡ ಕ್ರೆಡಿಟ್ ಕಾರ್ಡುದಾರರನ್ನು ಹೊಂದಿರುವ ಬ್ಯಾಂಕ್ ಆಗಿರುವ ಎಚ್ ಡಿ ಎಫ್ ಸಿ ಬ್ಯಾಂಕು ಪ್ರಸ್ತುತ 4.3 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಪ್ರತೀ ತಿಂಗಳೂ 70ರಿಂದ 80 ಸಾವಿರ ನೂತನ ಕಾರ್ಡುಗಳನ್ನು ವಿತರಿಸುತ್ತಿದೆ ಎನ್ನಲಾಗಿದೆ.
Subscribe to:
Post Comments (Atom)
No comments:
Post a Comment