VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 25, 2010

ಕೋಮುವಾದಿಗಳ ಕಣ್ಣು ತೆರೆಸೀತೇ ವಿಮಾನ ದುರಂತ?

ಬಜಪೆಯಲ್ಲಿ ಸಂಭವಿಸಿರುವ ವಿಮಾನ ಅಪಘಾತ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಸಂತಾಪ, ಅನುಕಂಪ, ಸ್ಪಂದನೆ ಹರಿದು ಬಂದಿದೆ. ಕೆಲವು ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ. ಅದು ಯಾವ ಮತದ ವರದ್ದು ಎಂದು ಹೇಳಲಾಗುವುದಿಲ್ಲ. ತಮ್ಮ ವರನ್ನೇ ಗುರುತಿಸಲಾಗದ ದೌರ್ಭಾಗ್ಯದ ಸಂದರ್ಭದಲ್ಲಿ ಯಾರಿಗೂ ಅವರವರ ಧರ್ಮ ಸಹಾಯಕ್ಕೆ ಬಂದಿಲ್ಲ. ಇಲ್ಲಿ ಅನಿವಾ ರ್ಯವಾಗಿರುವುದು ಡಿಎನ್‌ಎ ಪರೀಕ್ಷೆ. ಧರ್ಮ, ಕೋಮು ಎಂದು ಹೊಡೆದಾಡಿ ಕೊಳ್ಳುವ ಕೋಮುವಾದಿಗಳಿಗೆ ಅವರ ಸಂಕುಚಿತತೆಯನ್ನು ಎತ್ತಿ ತೋರಿಸಲು ಈ ದುರಂತಕ್ಕೆ ಸಾಧ್ಯವಾಗುತ್ತದೆ. ಆದರೆ ನಾವು ಅದನ್ನು ತಿಳಿದುಕೊಳ್ಳಲು ಸಮರ್ಥರಿದ್ದೇವೆಯೇ? ಹುಟ್ಟು ಸಾವಿನ ಮಧ್ಯೆಯಿರುವ ಧರ್ಮದ ವಿಷಯದಲ್ಲಿ ನಾವು ಲಾಭಕ್ಕಿಂತ ಹೆಚ್ಚು ಹಾನಿ ಮಾಡಿಕೊಳ್ಳುತ್ತಿದ್ದೇವೆ. ಬದುಕಿನ ಶಿಸ್ತಿಗೆ ಸಹಾಯ ಮಾಡಬೇಕಾದ ಧರ್ಮವನ್ನು ನಾವು ಅಶಿಸ್ತು, ಅನ್ಯಾಯ, ಹಿಂಸೆಗೆ ಬಳಸುತ್ತಿ ದ್ದೇವೆ. ಶಾಂತಿಯ ಸಂದೇಶವಿರುವ ಪ್ರತಿಯೊಂದು ಧರ್ಮ ದಲ್ಲೂ ಇರುವ ಕೆಲವು ಮತಾಂಧರು ವಿಶಾಲ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸುತ್ತಿರುತ್ತಾರೆ. ಜಗತ್ತಿನ ಮಾನವ ಸಮೂಹದ ಸೊತ್ತಾಗಿರುವ ಧರ್ಮವನ್ನು ತನ್ನ ಅಂಕೆಯ ಲ್ಲಿಟ್ಟುಕೊಳ್ಳಲು ಮುಂದಾಗುವವರೂ ಇಲ್ಲದಿಲ್ಲ. ಅಂಥವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿದೆ. ಸುಟ್ಟು ಕರಕಲಾಗಿರುವ ಶವವನ್ನು ಧರ್ಮದ ಆಧಾರದಲ್ಲಿ ವಿಂಗಡಿಸಿ ಅದರ ಗುರುತು ಹಿಡಿಯಲಾಗುತ್ತಿಲ್ಲವಲ್ಲಾ, ಅದು ಯಾಕೆ?
ನಾವು ಮೊದಲು ಮಾನವರಾಗಬೇಕು. ಮಾನವನಾಗದಿದ್ದರೆ ಧರ್ಮದಿಂದ ಏನೂ ಸಾಧಿಸಲಾಗದು. ಧರ್ಮ ಮಾನವನಿಗೆ ಬೇಕೇ ಹೊರತು ಪ್ರಾಣಿಗಳಿಗಲ್ಲ. ಮೊನ್ನೆ ಸ್ಫೋಟಿಸಿದ ವಿಮಾನ ದಲ್ಲಿ ಎಲ್ಲಾ ಧರ್ಮದವರೂ ಇದ್ದರು. ಆ ಬೆಂಕಿಗೆ ಆಹುತಿಯಾ ಗುವಾಗ ಅದು ಧರ್ಮದ ಪಕ್ಷಪಾತ ಮಾಡಿಲ್ಲ. ಯಾವ ದೇವರೂ ಪ್ರಯಾಣಿಕರ ಮೊರೆಗೆ ಸ್ಪಂದಿಸಲಿಲ್ಲ. ಪುಟ್ಟ ಮಕ್ಕಳ ಮೇಲೂ ಕರುಣೆ ತೋರಿಸಿಲ್ಲ. ಹಸಿಹಸಿ ಜೀವಗಳು ದಹನಗೊಂ ಡವು. ಅಲ್ಲಿ ಸಹಾಯಕ್ಕೆ ಬಂದುದು ದೇವರಲ್ಲ. ಮಾನವರು. ಅವರಿಗೆ ಶಕ್ತಿಮೀರಿ ಸಹಾಯಹಸ್ತ ನೀಡಿದ್ದು ಅಲ್ಲಿನ ಸ್ಥಳೀಯರು. ಧರ್ಮ ಯಾರಿಗೂ ಸಹಾಯ ಮಾಡಿಲ್ಲ. ಅಲ್ಲಿ ಮೆರೆದುದು ಮಾನವೀಯತೆ. ಸಹಾಯ ಮಾಡುವ ಹೊತ್ತು ಯಾರೂ ಯಾರ ಧರ್ಮವನ್ನೂ ಕೇಳಿಲ್ಲ. ಅನ್ಯಕೋಮಿನವರು ಎಂದು ತಿಳಿದರೂ ಸಹಾಯಹಸ್ತದಲ್ಲಿ ಏರಿಳಿತವಾಗಿಲ್ಲ. ಕೆಲವು ಜೀವ ವನ್ನು ರಕ್ಷಿಸಿದ ಸಮಾಧಾನ ಅವರಲ್ಲಿ ಎದ್ದು ಕಾಣುತ್ತಿತ್ತೇ ಹೊರತು ಅವರು ಯಾವ ಧರ್ಮದವರು ಎಂಬುದು ಅಲ್ಲಿ ಮುಖ್ಯವಾಗಿಲ್ಲ. ಆ ದುರಂತದ ಹೊತ್ತು ಅವರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಒಂದೇ ಮನೆಯ ಸದಸ್ಯರಂತೆ ವರ್ತಿಸಿದರು.
ದುರಂತದ ಬಳಿಕ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಮನೆಗಳೆ ಲ್ಲವೂ ರೋಧಿಸಿತು. ಎಲ್ಲರ ಮನೆಯಲ್ಲೂ ಸಾವು ವಿಜೃಂಭಿಸಿದೆ. ಗುರುತು ಹಿಡಿಯಲಾಗದೆ ಉಳಿದಿರುವ ಪ್ರತಿಯೊಂದು ಶವವೂ ತಮ್ಮವರದ್ದಾಗಿರಬಹುದು ಎಂದು ಪ್ರತಿ ಸಂತ್ರಸ್ತ ಮನೆಯವರೂ ಭಾವನಾತ್ಮಕವಾಗಿ ಅವುಗಳನ್ನು ನೋಡುತ್ತಿದ್ದರು. ಧರ್ಮದ ಆಧಾರದಲ್ಲಿ ಅವುಗಳನ್ನು ಗುರುತಿಸುವುದು ಸಾಧ್ಯವಾಗಲೇ ಇಲ್ಲ. ಇಂಥ ಧರ್ಮದ ಹೆಸರಲ್ಲಿ ನಾವು ಹೊಡೆದಾಡಿಕೊಳ್ಳುವುದು ಅಗತ್ಯವೇ? ನಾವು ಮೊದಲು ಮಾನವರಾಗಿ, ಸಹೋದರರಾಗಿ ಬಾಳಿದರೆ ಅದಕ್ಕಿಂತ ಸುಂದರ ಬದುಕು ಬೇರೊಂದಿದೆಯೇ? ಕಷ್ಟದ ಸಂದರ್ಭದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರೆ ಈ ಸಮಾಜದಲ್ಲಿ ಶಾಂತಿ, ಪ್ರೀತಿ ಅಕ್ಷಯವಾಗದೇ? ಕೋಮುವಾದಿಗಳು ಒಂದಿಷ್ಟು ಚಿಂತಿಸಬೇಕಾಗಿದೆ.
ಯಾವ ಧರ್ಮೀಯರೂ ಕಷ್ಟದಿಂದ ಮುಕ್ತರಲ್ಲ. ಯಾವ ದೇವರ ಮೇಲೂ ಭಾರ ಹಾಕಿ ಸಾವನ್ನು ಗೆದ್ದು ಬರುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮಾನವೀಯತೆ ವಿಜೃಂಭಿಸಿದರೆ, ಮಾನವ ಶಕ್ತಿ ಸೆಟೆದು ನಿಂತರೆ, ಪ್ರೀತಿವಿಶ್ವಾಸ ಗಟ್ಟಿಗೊಂಡರೆ ಕಷ್ಟದುಃಖಗಳನ್ನು ಗರಿಷ್ಠ ಪ್ರಮಾಣದಲ್ಲಿ ದೂರ ಇರಿಸಲು ಸಾಧ್ಯವಿದೆ. ಇದು ಯಾಕೆ ನಮಗೆ ಅರ್ಥವಾಗುವುದಿಲ್ಲ.
ಒಮ್ಮೆ ನಾವು ಅನ್ಯ ಕೋಮಿನವರಿಗೆ ಸಹಾಯ ಮಾಡಿ ನೋಡೋಣ. ಅವರ ಹಬ್ಬಗಳಲ್ಲಿ ಭಾಗವಹಿಸೋಣ. ಅವರನ್ನೂ ನಮ್ಮ ಮನೆಗೆ ಕರೆದು ಆತಿಥ್ಯ ನೀಡೋಣ. ಆಗ ಎರಡು ಮನಸ್ಸುಗಳ ನಡುವೆ ಮೂಡುವ ಪ್ರೀತಿಯ ಸಂಬಂಧದ ಆಳವನ್ನು ಗ್ರಹಿಸಲೂ ಸಾಧ್ಯವಿಲ್ಲ. ಆದರೆ ಹಾಗೆ ಕರೆಯುವ ಮನಸ್ಸುಗಳು ಬೇಕಲ್ಲಾ? ಅದು ಇಲ್ಲದಿರುವುದೇ ಒಂದು ಕೊರತೆ. ಮನಸ್ಸುಗಳನ್ನು ಬೆಸೆಯುವವರು ಇಲ್ಲವಾಗಿದ್ದಾರೆ, ಒಡೆಯುವವರೇ ತುಂಬಿದ್ದಾರೆ. ಅಂಥವರು ಇಂಥ ದುರಂತದ ಬಳಿಕವಾದರೂ ಮನಸ್ಸಿನ ತಪ್ಪು ಕಲ್ಪನೆಯನ್ನು ದೂರ ಮಾಡಲು ಶ್ರಮಿಸಬೇಕಾಗಿದೆ.

No comments: