ಮಂಗಳೂರು, ಮೇ 20: ಬಂಗಾಳ ಕೊಲ್ಲಿಯಲ್ಲಿ ಬೀಸುತ್ತಿರುವ ‘ಲೈಲಾ ಚಂಡಮಾರುತ’ ಕರ್ನಾಟಕದ ಕರಾವಳಿಯಲ್ಲೂ ಪರಿಣಾಮ ಬಾರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಂಜಾಗೃತಾ ಕ್ರಮವಾಗಿ ತುರ್ತು ಕ್ರಮ ಜರಗಿಸಲು ಎಲ್ಲ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಜ್ಜಾಗಿರಲು ಸೂಚನೆ ನೀಡಿರುವುದಾಗಿ ಹೆಚ್ಚುವರಿ ಜಿಲ್ಲಾಕಾರಿ ಪ್ರಭಾಕರ ಶರ್ಮಾ ತಿಳಿಸಿದ್ದಾರೆ.
ಚಂಡ ಮಾರುತದ ಪ್ರಭಾವದಿಂದ ಇಂದು ಬೆಳಗ್ಗಿನಿಂದ ಸಂಜೆಯವರೆಗೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಒಂದೆರಡು ಪ್ರದೇಶಗಳಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ಈ ಆಕಾಲಿಕ ಮಳೆ ಕೆಲವೆಡೆ ಸಮಸ್ಯೆ ಉಂಟುಮಾಡಿದರೆ, ಬಿಸಿಲ ದಗೆಯಿಂದ ಬೇಯುತ್ತಿದ್ದ ಕರಾವಳಿಯ ವಾಸಿಗಳಿಗೆ ತಂಪನೆರೆದಿದೆ.
ಮೀನುಗಾರಿಕೆಗೆ ಅಡ್ಡಿ: ಚಂಡಮಾರುತ ಭೀತಿಯ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ 300ರಿಂದ 400 ಯಾಂತ್ರೀಕೃತ ದೋಣಿಗಳು ದಡ ಸೇರಿವೆ. ಆದರೆ ಆಳ ಸಮುದ್ರದ ಮೀನುಗಾರರು ಹಿಂದಿರುಗಿಲ್ಲ. ಮೀನುಗಾರರು ಜಾಗೃತರಾಗಿರಲು ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ.
ಮುಂದುವರಿದ ಚಂಡಮಾರುತದ ಪ್ರಭಾವ: ಚಂಡಮಾರುತದ ಪ್ರಭಾವದಿಂದ ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ ತೀರಗಳಲ್ಲಿ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣವಿದೆ. ಮುಂದಿನ ಒಂದೆರಡು ದಿನಗಳ ಕಾಲ ಈ ಚಂಡಮಾರುತದ ಪ್ರಭಾವ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ ತೀರಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅರಬಿ ಸಮುದ್ರ ಪ್ರಕ್ಷುಬ್ಧ: ದಡಕ್ಕೆ ಮರಳಿದ ಮೀನುಗಾರರು
ಉಡುಪಿ, ಮೇ 20: ಅರಬೀಸಮುದ್ರದಲ್ಲಿ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಎಲ್ಲ ಮೀನುಗಾರರು ದಡಕ್ಕೆ ಮರಳಿ ಬಂದಿದ್ದಾರೆ.
ಇಂದು ಬೆಳಗಿನಿಂದ 1200ಕ್ಕೂ ಅಕ ಬೋಟುಗಳು ಮಲ್ಪೆ ಬಂದರಿಗೆ ಮರಳಿ ಬಂದು ಲಂಗರು ಹಾಕಿವೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿ ಹರೀಶ್‌ಕುಮಾರ್ ತಿಳಿಸಿದ್ದಾರೆ. 24 ಗಂಟೆಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ತೆರಳಿದವರು ಕೂಡಲೇ ದಡಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಶೇ.90ರಷ್ಟು ಬೋಟುಗಳು ಮಲ್ಪೆ ಬಂದರಿಗೆ ಮರಳಿ ಬಂದಿವೆ. ನಿನ್ನೆಯಿಂದ ಯಾವುದೇ ಬೋಟು ಇಲ್ಲಿಂದ ಮೀನುಗಾರಿಕೆಗೆ ತೆರಳಿಲ್ಲ. ಮಂಗಳೂರು ಹಾಗೂ ಗಂಗೊಳ್ಳಿಯ ಹಲವು ಬೋಟುಗಳು ಮಲ್ಪೆ ಬಂದರಿಗೆ ಸುರಕ್ಷಿತಗಾಗಿ ಬಂದಿವೆ ಎಂದು ಹರೀಶ್‌ಕುಮಾರ್ ತಿಳಿಸಿದರು.
ನಾಳೆ ಸಂಜೆಯ ಬಳಿಕ ವಾತಾವರಣ ನೋಡಿಕೊಂಡು ಮತ್ತೆ ಮೀನುಗಾರಿಕೆಗೆ ತೆರಳುವ ಕುರಿತು ನಿರ್ಧರಿಸುತ್ತೇವೆ ಎಂದು ಮೀನುಗಾರರು ತಿಳಿಸಿದ್ದಾರೆ. ನಿನ್ನೆ ಸಂಜೆಯಿಂದಲೇ ಮೀನುಗಾರರಿಗೆ ಎಚ್ಚರಿಕೆಯ ಸೂಚನೆಯನ್ನು ಟಿವಿ, ರೇಡಿಯೊ ಮೂಲಕ ನೀಡುತ್ತಿದ್ದೇವೆ. ಸಂಘ ಸಂಸ್ಥೆಗಳಿಗೂ ಮಾಹಿತಿ ನೀಡಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಇಲಾಖೆ ಸಿದ್ಧವಾಗಿದೆ ಎಂದು ಹರೀಶ್ ತಿಳಿಸಿದರು.
ಲೈಲಾ ಪ್ರಭಾವ ಇಲ್ಲ:ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಲೈಲಾ ಚಂಡಮಾರುತ ಪಶ್ಚಿಮ ಕರಾವಳಿಯ ಮೇಲೆ ಬೀರುವ ಪರಿಣಾಮ ಬಗ್ಗೆ ಇದುವರೆಗೆ ಹವಾಮಾನ ಇಲಾಖೆಯಿಂದ ಯಾವುದೇ ತರದ ಮುನ್ಸೂಚನೆ ಬಾರದೇ ಇದ್ದರೂ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಅಗತ್ಯ ಬಿದ್ದರೆ ಸೂಕ್ತ ಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ್ ತಿಳಿಸಿದ್ದಾರೆ.
ಲೈಲಾ ಚಂಡಮಾರುತದ ಹಿನ್ನೆಲೆಯಲ್ಲಿ ಇಂದು ಕಂದಾಯ ಸಚಿವರು ಪರಿಸ್ಥಿತಿಯ ವಿವರ ಕೇಳಿದ್ದು, ನಾಳೆ ಬೆಳಗ್ಗೆ ಜಿಲ್ಲಾ ಮಟ್ಟದ ಅಕಾರಿಗಳ ಸಭೆಯೊಂದನ್ನು ಈ ಕುರಿತು ಚರ್ಚಿಸಲು ಕರೆದಿರುವುದಾಗಿ ಪ್ರಭಾಕರ್ ತಿಳಿಸಿದರು.
ಮೋಡ ಕವಿದ ವಾತಾವರಣ: ಇಂದು ಬೆಳಗಿನಿಂದ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಬಿಸಿಲು ಬಂದರೂ, ಸಂಜೆ ವೇಳೆ ಮತ್ತೆ ಮೋಡ ಕವಿದಿತ್ತು. ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ ಮಳೆಯಾಗದಿದ್ದರೂ, ಕುಂದಾಪುರದಲ್ಲಿ 10.8 ಮಿ.ಮೀ. ಹಾಗೂ ಕಾರ್ಕಳದಲ್ಲಿ 0.8 ಮಿ.ಮೀ. ಮಳೆಯಾಗಿತ್ತು.
ಮಂಗಳವಾರ ರಾತ್ರಿ ವೇಳೆ ಕಾಣಿಸಿಕೊಂಡ ಮಿಂಚಿನಿಂದ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಮಾವಿನಕುಳಿಯ ವೆಂಕಟ ಪೂಜಾರಿ ಎಂಬವರ ಕಣ್ಣಿಗೆ ಅಪಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಾಲೂಕು ಕಚೇರಿಯಿಂದ ತಿಳಿದುಬಂದಿದೆ.
ತುರ್ತು ಸಹಾಯವಾಣಿ
ಲೈಲಾ ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಸಹಾಯಕ್ಕೆ ತುರ್ತು ಸಹಾಯವಾಣಿಗಳನ್ನು ಸನ್ನದ್ಧ ರೀತಿಯಲ್ಲಿ ಇಡಲಾಗಿದೆ. ನಾಗರಿಕರು 1077 ಸಂಖ್ಯೆಗೆ ಕರೆ ಮಾಡಬಹುದು ಎಂದು ದ.ಕ. ಜೆಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment