ಮಂಗಳೂರು ವಿಮಾನ ದುರಂತಕ್ಕೆ ನಾಗಾರ್ಜುನ ಬಿಸಿ ಹೊಗೆ ಕಾರಣವೇ?
ಉಡುಪಿ, ಮೇ 22: ಬಜಪೆ ವಿಮಾನ ನಿಲ್ದಾಣದಲ್ಲಿ ಇಂದು ಸಂಭವಿಸಿದ ವಿಮಾನ ದುರಂತಕ್ಕೆ ಪಡುಬಿದ್ರಿ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರದ ಹೊಗೆ ಮತ್ತು ಬಿಸಿಗಾಳಿ ಕಾರಣವೇ? ಇಂಥ ಒಂದು ಸಂಶಯವನ್ನು ನಾಗಾರ್ಜುನ ವಿರೋಧಿ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಹೆಗ್ಡೆ ವ್ಯಕ್ತಪಡಿಸಿದ್ದಾರೆ.
ವಿಮಾನ ಪಡುಬಿದ್ರಿ-ನಂದಿಕೂರು ಪರಿಸರದಲ್ಲಿ ಹಾದುಹೋಗುವಾಗ ಸುಮಾರು 1800ರಿಂದ 2200 ಅಡಿ ಎತ್ತರಲ್ಲಿ ಸಂಚರಿಸಬೇಕಾಗುತ್ತದೆ. ನಾಗಾರ್ಜುನ ಚಿಮಿಣಿಯ ಎತ್ತರ 1000 ಅಡಿಗಳಾದರೆ, ಅದರಿಂದ ಹೊರ ಹೊಮ್ಮುವ ಹೊಗೆ ಸುಮಾರು 2000 ಅಡಿಗೂ ಎತ್ತರಕ್ಕೂ ವ್ಯಾಪಿಸುತ್ತದೆ.
ಚಿಮಿಣಿಯಿಂದ ಹೊರಬರುವ ಹೊಗೆಯ ಬಿಸಿ 120 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುತ್ತದೆ. ಇದರಿಂದ 20ರಿಂದ 30 ಕಿ.ಮೀ. ಸುತ್ತಳತೆಯಲ್ಲಿ ಕೂಡಾ ಬಿಸಿ ವಾತಾವರಣ ಇರುತ್ತದೆ. ನಾಗಾರ್ಜುನ ಯೋಜನಾ ಪ್ರದೇಶ, ಬಜ್ಪೆ ವಿಮಾನ ನಿಲ್ದಾಣದಿಂದ ಆಕಾಶಮಾರ್ಗದಲ್ಲಿ ಕೆವಲ 20 ಕಿ.ಮೀ. ದೂರದಲ್ಲಿರುವುದರಿಂದ ಇಂದಿನ ದುರಂತ ನಡೆದಿರುವ ಸಾಧ್ಯತೆ ಇದೆ. ಮುಂದೆಯೂ ಇದು ಮರುಕಳಿಸಬಹುದು ಎಂದು ವಿಜಯಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಇಂದಿನ ದುರಂತಕ್ಕೆ ವಿಮಾನ ತನ್ನ ದಿಕ್ಕು ಬದಲಾಯಿಸಿದ್ದು ಕಾರಣವೆನ್ನಲಾಗುತ್ತಿದ್ದು, ಈ ದಿಕ್ಕನ್ನು ಯಾಕೆ ಬದಲಾಯಿಸಿತು ಎಂಬುದನ್ನು ತಿಳಿದುಕೊಳ್ಳಬೇಕು. ದಿಕ್ಕು ಬದಲಾಯಿಸಲು ಹವಾಮಾನ ವೈಪರಿತ್ಯ ಕಾರಣ ಎಂದು ಪ್ರಾಥಮಿಕ ತನಿಖೆ ಹೇಳುತ್ತದೆ ಎಂದು ಅವರು ಹೆಗಡೆ ತಿಳಿಸಿದ್ದಾರೆ.
ಪೈಲೆಟ್‌ನ ಅವಸರ ದುರಂತಕ್ಕೆ ಕಾರಣ?
ಮಂಗಳೂರು, ಮೇ ೨೨: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಏರ್‌ಕ್ರಾಫ್ಟ್ ಬೋಯಿಂಗ್ ೭೩೭- ೮೦೦ ಐಎಕ್ಸ್ ೮೧೨ ವಿಮಾನದ ಪೈಲೆಟ್ ಕ್ಯಾಪ್ಟನ್ ಝೆಡ್. ಗ್ಲುಸಿಕಾ ಮಂಗಳೂರಿನ ವಿಮಾನ ನಿಲ್ದಾಣದ ಬಗ್ಗೆ ಮಾಹಿತಿ ಉಳ್ಳವರಾದರೂ ಸಾಕಷ್ಟು ಬಾರಿ ವಿಮಾನ ನಡೆಸಿರುವ ಅನುಭವಿ. ಆದರೂ ಇಂದು ಮುಂಜಾನೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿದ್ದು, ವಿಮಾನ ಇಳಿಸುವ ಸಂದರ್ಭದಲ್ಲಿ ಮಾಡಿರುವ ಸಣ್ಣ ಎಡವಟ್ಟು ಇಡೀ ದುರಂತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಆ ಸಂದರ್ಭದಲ್ಲಿ ಇದ್ದ ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.
ವಿಮಾನ ನಿಲುಗಡೆಗೆ ಹೊಸ ರನ್‌ವೇ ೨೪- ೨೪೫೦ ಮೀಟರ್ ಉದ್ದ ಹಾಗೂ ೯೦ ಮೀಟರ್ ಸುರಕ್ಷಿತ ವಲಯನ್ನು ಹೊಂದಿದೆ. ಆದರೆ, ಪೈಲಟ್ ಆ ರನ್‌ವೇಯನ್ನು ಪೂರ್ತಿಯಾಗಿ ಬಳಸಿಕೊಳ್ಳದೆ ಅವಸರವಾಗಿ ರನ್‌ವೇಯ ಮಧ್ಯಭಾಗದಲ್ಲಿ ಇಳಿಸಿದ ಕಾರಣ ವಿಮಾನವನ್ನು ನಿಯಂತ್ರಿಸಲು ಸಾಧ್ಯವಾಗದೆ ಕೊನೆಯ ಅಂಚಿಗೆ ಬಂದಾಗ ಮತ್ತೆ ವಿಮಾನವನ್ನು ಮೇಲಕ್ಕೆ ಹಾರಿಸಲು ಯತ್ನಿಸಿದ ಸಂದರ್ಭದಲ್ಲಿ ವಿಮಾನದ ಎಡ ಭಾಗದ ರೆಕ್ಕೆ ಸೂಚನಾ ಕಂಬಕ್ಕೆ ಬಡಿದು ಆಯ ತಪ್ಪಿದಾಗ ರನ್‌ವೇಯನ್ನು ದಾಟಿ ೨೦೦ ಅಡಿ ಆಳಕ್ಕೆ ಉರುಳಿಕೊಂಡು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಆದರೆ ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಅವಸರ ಪಡದೇ ಇದ್ದಿದ್ದರೆ ವಿಮಾನವನ್ನು ಮತ್ತೆ ಒಂದು ಸುತ್ತು ಹಾಕಿ ನಿಲ್ದಾಣದಲ್ಲಿ ಇಳಿಸಬಹುದಿತ್ತು. ಈ ರೀತಿಯಾಗಿ ಸಾಕಷ್ಟು ಬಾರಿ ವಿಮಾನವನ್ನು ಇಳಿಸಿದ ಉದಾ ಹರಣೆಗಳಿವೆ. ಹಾಗೆ ಒಂದು ಸುತ್ತು ಆಕಾಶದಲ್ಲಿ ಬರಬೇಕಾದರೆ ಸಾಮಾನ್ಯವಾಗಿ ಬಜಪೆಯಿಂದ ಕಾರ್ಕಳದವರೆಗಿನ ಪ್ರದೇಶವನ್ನು ಬಳಸಿಕೊಳ್ಳ ಬೇಕಾಗುತ್ತದೆ. ಆದರೆ ಪೈಲಟ್ ವಿಮಾನವನ್ನು ತಕ್ಷಣ ನಿಲ್ಲಿಸಲು ಪ್ರಯತ್ನಿಸಿದ ಕಾರಣ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಡುತ್ತಾರೆ.
ವಿಮಾನ ಪ್ರಪಾತಕ್ಕೆ ಇಳಿಯುತ್ತಿತ್ತು:
ವಿಮಾನ ಇದ್ದಕ್ಕಿದ್ದಂತೆ ಒಂದು ಕಡೆಗೆ ವಾಲುತ್ತಾ ಇಳಿಯುತ್ತಿದ್ದನ್ನು ಗಮನಿಸಿದ ಸ್ಥಳೀಯ ನಿವಾಸಿ ದೀಪಕ್ ಎಂಬವರು ತಮ್ಮ ಗೆಳೆಯರಿಗೆ ಸೂಚನೆ ನೀಡಿ ಬೊಬ್ಬೆ ಹಾಕುತ್ತಾ ಸ್ಥಳಕ್ಕೆ ಓಡಿ ಬಂದಾಗ ವಿಮಾನ ಕೆಂಜಾರು ಬಳಿ ಪ್ರಪಾತದಲ್ಲಿ ಇಳಿಯುತ್ತಿತ್ತು. ಮತ್ತು ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಆವರಿಸಿಕೊಂಡಿತ್ತು. ಈ ಸಂದರ್ಭದಲ್ಲಿ ತುರ್ತು ನಿರ್ಗಮನ ಕಿಟಕಿ ಬಳಿ ಇದ್ದ ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಹೊರಕ್ಕೆ ಧುಮುಕಿದರು. ಅವರ ಜೊತೆ ಇನ್ನು ಕೆಲವರು ಕೆಳಕ್ಕೆ ಬೀಳುತ್ತಿರುವುದನ್ನು ತಾನು ಗಮನಿಸಿರುವುದಾಗಿ ದೀಪಕ್ ತಿಳಿಸಿದ್ದಾರೆ. ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲು ಅಗ್ನಿಶಾಮಕ ಇಲಾಖೆಯವರ ಜೊತೆ ಶ್ರಮಿಸಿದ್ದಾರೆ.
May 23, 2010
Subscribe to:
Post Comments (Atom)
No comments:
Post a Comment