VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 15, 2010

ಅಗತ್ಯ ಕ್ರಮ: ಸಿ.ಎಂ.ಯಡಿಯೂರಪ್ಪ ಭರವಸೆ / ಕೇಸ್ ಹಾಕ್ತೇನೆ; ಇದು ಕಾಂಗ್ರೆಸ್‌ನ ಪಿತೂರಿ: ಮುತಾಲಿಕ್ / ಶ್ರೀರಾಮಸೇನೆಯ ಮುಖಂಡ ದೇಶದ್ರೋಹಿ, ಗಲಭೆಗೆ ಆತನೇ ಕಾರಣ: ಸಿದ್ದು

ಮಂಗಳೂರು, ಮೇ 14: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಣಕ್ಕಾಗಿ ಗಲಭೆ ನಡೆಸಲು ಮುಂದಾಗಿದ್ದ ಅಂಶ ತೆಹೆಲ್ಕಾ ನಿಯತಕಾಲಿಕ ಹಾಗೂ ಹೆಡ್‌ಲೈನ್ ಟುಡೇ ಟಿವಿ ಚಾನೆಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಮುತಾಲಿಕ್ ವಿರುದ್ಧ ರಾಜ್ಯ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿ ದ್ದಾರೆ ಎಂದು ಭರವಸೆ ನೀಡಿದ್ದಾರೆ.
ಟಿವಿ ಚಾನೆಲ್‌ನೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಇಂತಹ ಘಟನೆ ನಡೆಸಲು ಅವಕಾಶ ನೀಡುವುದಿಲ್ಲ. ನಮ್ಮ ಪಕ್ಷಕ್ಕೂ ಮುತಾಲಿಕ್‌ಗೂ ಯಾವುದೇ ಸಂಬಂಧವಿಲ್ಲ. ಇಂತಹ ಘಟನೆಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕಾರ್ಯಾಚರಣೆಯ ಸಿಡಿಯನ್ನು ನೀಡುವಂತೆ ಗಹ ಸಚಿವ ವಿ.ಎಸ್.ಆಚಾರ್ಯ ಸೂಚಿಸಿದ್ದಾರೆ. ಘಟನೆಯ ಬಗ್ಗೆ ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಮುತಾಲಿಕ್‌ರನ್ನು ಬಂಧಿಸುವಂತೆ ಸಿಪಿಎಂ ಹಾಗೂ ಇತರ ಪಕ್ಷಗಳು ಆಗ್ರಹಿಸಿವೆ.
ಈ ನಡುವೆ ಕಾರ್ಯಾಚರಣೆ ನಡೆಸಿದ ತೆಹೆಲ್ಕಾ ಮತ್ತು ಹೆಡ್‌ಲೈನ್ಸ್ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮುತಾಲಿಕ್, ಬೆದರಿಕೆ ಹಾಗೂ ಸುಲಿಗೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ‘‘ ಘಟನೆ ಶುದ್ಧ ಸುಳ್ಳು, ಇದು ಹಿಂದೂ ಸಮಾಜಕ್ಕೆ ಮಾಡಿದ ಅವಮಾನ ಹಾಗೂ ಮೀಡಿಯಾ ಲಾಭಿ’’ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ಶ್ರೀರಾಮಸೇನೆಯ ಮುಖಂಡ ದೇಶದ್ರೋಹಿ, ಗಲಭೆಗೆ ಆತನೇ ಕಾರಣ: ಸಿದ್ದು
ಬೆಂಗಳೂರು, ಶುಕ್ರವಾರ, 14 ಮೇ 2010
ಖಾಸಗಿ ವಾಹಿನಿಗಳ ರಸಹ್ಯ ಕಾರ್ಯಾಚರಣೆಯಲ್ಲಿ ಸಮಾಜದಲ್ಲಿ ಗಲಭೆ ಸೃಷ್ಟಿಸಲು ಹಣ ಪಡೆಯುತ್ತಿರುವ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಂತಹ ದೇಶದ್ರೋಹಿ ಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಸೇನೆ ಮುಖಂಡ ಮುತಾಲಿಕ್ ಮುಖವಾಡ ಬಯಲಾಗಿದೆ. ಹಣ ಪಡೆದು ಗಲಭೆ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹವರನ್ನು ಕೂಡಲೇ ಬಂಧಿಸಬೇಕು, ಅಲ್ಲದೇ ಸಂಘಟನೆಯ ಕಾರ್ಯಕರ್ತರನ್ನು ಜೈಲಿಗೆ ಅಟ್ಟಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ನಡೆದ ಕೋಮುಗಲಭೆಯಲ್ಲೂ ಮುತಾಲಿಕ್ ಕೈವಾಡವಿದೆ ಎಂದು ಆರೋಪಿಸಿದ ಅವರು, ಮುತಾಲಿಕ್‌ನ ಕೃತ್ಯಗಳಿಗೆ ಸರ್ಕಾರದ ಕುಮ್ಮಕ್ಕು ಇದೆ ಎಂದು ದೂರಿದ ಸಿದ್ದರಾಮಯ್ಯ, ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದರು.
ಕೋಮುಗಲಭೆ ಸೃಷ್ಟಿ ಮಾಡುವ ಮುತಾಲಿಕ್ ನಿಜಬಣ್ಣ ರಹಸ್ಯ ಕಾರ್ಯಾಚರಣೆಯಿಂದ ಸಾಬೀತಾಗಿದೆ ಎಂದು ಹೇಳಿದರು. ಧರ್ಮ, ದೇವರ ಹೆಸರಿನಲ್ಲಿ ವಂಚನೆಗಿಳಿದವ ಇಂತಹವರನ್ನು ಬಗ್ಗೆ ಜನಸಾಮಾನ್ಯರು ಎಚ್ಚರದಿಂದ ಇರಬೇಕೆಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು
ಕೇಸ್ ಹಾಕ್ತೇನೆ; ಇದು ಕಾಂಗ್ರೆಸ್‌ನ ಪಿತೂರಿ: ಮುತಾಲಿಕ್
ಬೆಳಗಾವಿ, ಶುಕ್ರವಾರ, 14 ಮೇ 2010
ಕೋಮು ಗಲಭೆ ನಡೆಸಲು ನಾನು ಯಾವುದೇ ಲಂಚ ಪಡೆದಿಲ್ಲ, ಇದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿ ಎಂದು ಖಾಸಗಿ ಚಾನೆಲ್‌ವೊಂದರ ರಸಹ್ಯ ಕಾರ್ಯಾಚರಣೆ ಕುರಿತು ಸ್ಪಷ್ಟನೆ ನೀಡಿರುವ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್, ಈ ಕಾರ್ಯಾಚರಣೆ ಹಿಂದೆ ಕಾಂಗ್ರೆಸ್ ಕೈವಾಡ ಇರುವುದಾಗಿ ಆರೋಪಿಸಿದ್ದಾರೆ.
ಹೆಡ್ ಲೈನ್ಸ್ ಟುಡೇ ಮತ್ತು ತೆಹಲ್ಕಾ ನಡೆಸಿರುವ ಜಂಟಿ ರಹಸ್ಯ ಕಾರ್ಯಾಚರಣೆಯಲ್ಲಿ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ ಅವರು ಗಲಭೆ ನಡೆಸಲು 60ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಾರೆಂಬ ವೀಡಿಯೋ ತುಣುಕುಗಳ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಹುಬ್ಬಳ್ಳಿಯ ನಮ್ಮ ಕಚೇರಿಗೆ ಮಿತ್ರ ಪುಷ್ಪ ಶರ್ಮಾ ಎಂಬವರು ಬಂದು, ಲವ್ ಜಿಹಾದ್‌ಗೆ ಸಂಬಂಧಪಟ್ಟಂತೆ ಚಿತ್ರ ಪ್ರದರ್ಶನ ಏರ್ಪಡಿಸಲು ಯೋಜಿಸಿದ್ದು, ಇದಕ್ಕೆ ನಿಮ್ಮ ಸಹಕಾರ ಬೇಕು ಎಂದಿದ್ದರು. ಅದಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವು. ಅಲ್ಲದೇ ಅವರು ಈ ಸಂದರ್ಭದಲ್ಲಿ ಸಂಸ್ಥೆಗೆ ಐದು ಸಾವಿರ ರೂಪಾಯಿಗಳ ದೇಣಿಗೆ ನೀಡಿದ್ದರು. ಅದಕ್ಕೆ ನಾನು ರಶೀದಿಯನ್ನೂ ಕೊಟ್ಟಿದ್ದೇನೆ. ಇದೀಗ ತಮ್ಮ ಪ್ರಚಾರದ ಭರಾಟೆಯನ್ನು ಹೆಚ್ಚಿಸಿಕೊಳ್ಳಲು, ನಾನು ಅರವತ್ತು ಲಕ್ಷ ರೂಪಾಯಿ ಸ್ವೀಕರಿಸಿದ್ದೇನೆ ಎಂದು ಗೂಬೆ ಕೂರಿಸಿ ಸುದ್ದಿ ಬಿತ್ತರಿಸುತ್ತಿರುವುದಾಗಿ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಾಮಸೇನೆ ಯಾವುದೇ ಲಂಚ ಸ್ವೀಕರಿಸುವ ಸಂಘಟನೆಯಲ್ಲ, ಲಂಚ ಸ್ವೀಕರಿಸಿ ಯಾವುದೇ ಗಲಭೆಯನ್ನು ನಡೆಸಿಲ್ಲ ಎಂದು ಹೇಳಿರುವ ಮುತಾಲಿಕ್, ಇದು ವ್ಯವಸ್ಥಿತ ಸಂಚು ಎಂದು ದೂರಿದ್ದಾರೆ.
ಮುತಾಲಿಕ್ ವಿರುದ್ಧ ಕ್ರಮ-ಸಿಎಂ: ಗಲಭೆ ಸೃಷ್ಟಿಸಲು ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ ವಿರುದ್ಧದ ಆರೋಪ ಸಾಬೀತಾದಲ್ಲಿ ಖಂಡಿತವಾಗಿಯೂ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಕಾನೂನು ರೀತಿಯ ಕ್ರಮಕೈಗೊಳ್ಳಲು ಸರ್ಕಾರ ಯಾವುದೇ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೂ-ಸೇನೆಗೂ ಸಂಬಂಧವಿಲ್ಲ-ಆರ್ಎಸ್ಎಸ್: ಗಲಭೆ ಸೃಷ್ಟಿಸಲು ಮುತಾಲಿಕ್ ಲಂಚ ಸ್ವೀಕರಿಸಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ನಮಗೂ ಹಾಗೂ ಶ್ರೀರಾಮಸೇನೆಗೂ ಯಾವುದೇ ನಂಟಿಲ್ಲ. ಅಲ್ಲದೇ ಆರ್ಎಸ್ಎಸ್ ಹಿಂಸಾ ವಿರೋಧಿ ಸಂಘಟನೆಯಾಗಿದೆ ಎಂದು ಹೇಳಿದೆ.

No comments: