ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ಐಎಕ್ಸ್ 812 (ಬೋಯಿಂಗ್ ಏರ್ಕ್ರಾಫ್ಟ್ 737-800) ವಿಮಾನದಲ್ಲಿ ಪೈಲೆಟ್, ಸಹ ಪೈಲೆಟ್ ಸೇರಿದಂತೆ ಆರು ಮಂದಿ ಸಿಬ್ಬಂದಿಗಳು, 160 ಪ್ರಯಾಣಿಕರು ಸೇರಿ ಒಟ್ಟು 166 ಮಂದಿಯಲ್ಲಿ 8 ಮಂದಿ ಪವಾಡ ಸದೃಶರಾಗಿ ಬದುಕುಳಿ ದಿದ್ದರೆ, ಉಳಿದ 158 ಮಂದಿ ಮೃತಪಟ್ಟಿ ದ್ದರು. ಅವರಲ್ಲಿ ಇಂದು ಮಧ್ಯಾಹ್ನ 12:05ರ ವೇಳೆಗೆ 88 ಮೃತದೇಹಗಳನ್ನು ಅವರ ಸಂಬಂಧಿಕರು ಪತ್ತೆ ಹಚ್ಚಿ ಅಂತಿಮ ಸಂಸ್ಕಾರಕ್ಕಾಗಿ ಕೊಂಡೊಯ್ದಿ ದ್ದರೆ ಉಳಿದ ಮೃತದೇಹಗಳ ಪತ್ತೆಗಾಗಿ ಅವರ ಸಂಬಂಧಿಕರು ಇಂದು ಆಸ್ಪತ್ರೆ ಗಳೆದುರು ಹುಡುಕಾಟ ನಡೆಸುತ್ತಿದ್ದ ದೃಶ್ಯ ಹೃದಯವನ್ನು ತಲ್ಲಣಗೊಳಿಸುತ್ತಿತ್ತು.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡ ಆಘಾತಕ್ಕೊಳಗಾದ ರೋಸ್ಲಿಯ ಪತಿ ಶಿಬುರನ್ನು ಸಂಬಂಧಿಕರು ಸಂತೈಸುತ್ತಿರುವುದುಇಂದು 22 ಮೃತದೇಹಗಳ ಗುರುತುಪತ್ತೆ ಬಾಕಿ ಉಳಿದಿದೆ. ಇವುಗಳ ಪತ್ತೆಗಾಗಿ ಡಿಎನ್ಎ ಪರೀಕ್ಷೆ ಪ್ರಕ್ರಿಯೆಗಳು ನಡೆಯು ತ್ತಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗನ್ನಾಥ್ ತಿಳಿಸಿದ್ದಾರೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿರುವ ತಮ್ಮವರ ಮೃತದೇಹಗಳನ್ನು ಯಾವ ಕೋನದಿಂದ ಎಷ್ಟು ನೋಡಿದರೂ ಅದನ್ನು ಗುರುತುಹಚ್ಚಲು ಸಾಧ್ಯವಾಗದ ಸ್ಥಿತಿ.
ಶವ ಒಂದು, ಹಕ್ಕಿಗಾಗಿ ಎರಡು ಕುಟುಂಬಗಳು
ವೆನ್ಲಾಕ್ ಶವಾಗಾರದಲ್ಲಿ ತೀರಾ ಕರಕಲು ಸ್ಥಿತಿಯಲ್ಲಿರುವ ಒಂದು ಶವಕ್ಕಾಗಿ ಎರಡು ಕುಟುಂಬಗಳು ಪರಸ್ಪರ ಅದು ತಮ್ಮ ಸಂಬಂಧಿಯದ್ದು ಎಂದು ಪರಸ್ಪರ ಮಾತುಕತೆ ನಡೆಸುತ್ತಿದ್ದ ದೃಶ್ಯವೊಂದು ಇಂದು ಮಧ್ಯಾಹ್ನದ ವೇಳೆಗೆ ಕಂಡು ಬಂತು. ಒಂದು ಕುಟುಂಬ ಅದು ತಮ್ಮ ಸಂಬಂಧಿ ರಿಜು ಜಾರ್ಜ್ (31) ಅವರ ಶವವೆಂದು ಹೇಳುತ್ತಿದ್ದರೆ ಮತ್ತೊಂದು ಕುಟುಂಬ ಅದು ತಮ್ಮ ಸಂಬಂಧಿ ಮಹೇಂದ್ರ (46) ಅವರದ್ದು ಎಂದು ಹೇಳಿಕೊಳ್ಳುತ್ತಿತ್ತು.
ಮೃತದೇಹದ ಕೈಯಲ್ಲಿ ಒಂದು ಕೈಗಡಿಯಾರ ಮತ್ತು ಶೂವನ್ನು ಬಿಟ್ಟರೆ ಈ ಎರಡೂ ಕುಟುಂಬಗಳಿಗೆ ಪತ್ತೆ ಹಚ್ಚಲು ಯಾವುದೇ ಸಾಧನಗಳಿಲ್ಲ. ಎರಡೂ ಕುಟುಂಬಗಳು ಹೇಳುವಂತೆ ಮೃತ ಪಟ್ಟ ಅವರ ಸಂಬಂಧಿಯ ಎತ್ತರ 5.8 ಅಡಿ. ಮೃತಪಟ್ಟ ರಿಜು ಜಾರ್ಜ್ ಅವರ ಕೈಯಲ್ಲಿ ರ್ಯಾಡೋ ವಾಚ್ ಇದ್ದರೆ, ಮೃತಪಟ್ಟ ಮಹೇಂದ್ರ ಅವರ ಕೈಯ್ಯಲ್ಲಿಯೂ ಬೆಲೆಬಾಳುವ ವಾಚಿತ್ತು. ಆದರೆ ಅದು ಯಾವ ಕಂಪೆನಿಯದ್ದೆಂದು ಗೊತ್ತಿಲ್ಲ. ಹೀಗೆ ಎರಡೂ ಕುಟುಂಬ ಗಳು ಒಂದು ಶವದ ಹಕ್ಕಿಗಾಗಿ ಬೆಳಗ್ಗಿನಿಂದ ಸಂಜೆಯವರೆಗೂ ಕಾದಾಟ ನಡೆಸುತ್ತಿದ್ದ ಪರಿ ಅಸಹಾಯಕತೆಗೆ ಹಿಡಿದ ಕನ್ನಡಿಯಂತಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ರಿಜು ಜಾರ್ಜ್ ಅವರ ಸಂಬಂಧಿ, ಮಂಗಳೂರು ವಕೀಲರ ಸಂಘದ ಪ್ರತಿನಿಧಿ ಎಲಿಝಬೆತ್, ‘‘ಮೃತದೇಹವನ್ನು ಶವಾಗಾ ರದಲ್ಲಿ ಇರಿಸಿದ ಬಳಿಕ ಕೆಲ ಸ್ವಯಂ ಸೇವಕರು ಆ ಮೃತದೇಹದ ಕೈಯಲ್ಲಿದ್ದ ವಾಚನ್ನು ತೆಗೆದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕಾಲಿನ ಶೂಗಳನ್ನೂ ಬಿಚ್ಚಿರುವುದ ರಿಂದ ಶವ ಪತ್ತೆಗೆ ತೊಂದರೆಯಾಗಿದೆ. ವಾಚ್ನ ಕಂಪೆನಿ ಯಾವುದೆಂದು ಗೊತ್ತಾ ದರೂ ಶವ ಪತ್ತೆ ಹಚ್ಚಲು ಸಾಧ್ಯವಾದೀತು. ರಿಜು ಜಾರ್ಜ್ ಅವರ ಪತ್ನಿ ರಿಜು ಅವರು ಉಟ್ಟಿದ್ದ ಉಡುಪು, ಅವರು ತೊಟ್ಟಿದ್ದ ಶೂವಿನ ಕಂಪೆನಿ, ಅವರು ಹಾಕಿಕೊಂಡಿದ್ದ ಪ್ಯಾಂಟ್ನ ಬಣ್ಣ ಎಲ್ಲದರ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆದರೆ ಉಡುಪು ಹೆಚ್ಚಿನವು ಕರಗಲಾಗಿವೆ.
ಕುಟುಂಬಸ್ಥರನ್ನು ಕಳೆದುಕೊಂಡ ಮಹಿಳೆಯೊಬ್ಬರನ್ನು ಸಮಾಧಾನಪಡಿಸುತ್ತಿರುವುದುಪ್ಯಾಂಟ್ ನೀಲಿ ಬಣ್ಣದ್ದು. ಮಹೇಂದ್ರ ಅವರ ಕುಟುಂಬದವರೂ ತಮ್ಮ ಸಂಬಂಧಿ ನೀಲಿ ಬಣ್ಣದ ಪ್ಯಾಂಟನ್ನೇ ತೊಟ್ಟಿದ್ದರು ಎಂದು ಹೇಳುತ್ತಾರೆ. ಹೀಗಾಗಿ ಕಷ್ಟವಾಗಿದೆ. ಡಿಎನ್ಎ ಪರೀಕ್ಷೆಗೆ ಇನ್ನೂ ಕೆಲವು ದಿನಗಳವರೆಗೆ ಕಾಯಬೇಕು’’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೂರು ವರ್ಷದಲ್ಲಿ ಮೊದಲ ಸಲ ಊರಿಗೆ ಬರುವವನಿದ್ದ!
ಬೆಳ್ತಂಗಡಿಯ ರೋಸ್ಲಿ ಮತ್ತವರ ಇಬ್ಬರು ಮಕ್ಕಳ ಅಂತಿಮ ಸಂಸ್ಕಾರ ರವಿವಾರ ಕಂಕನಾಡಿಯ ಅಲ್ಫೋನ್ಸ್ ಚರ್ಚ್ನಲ್ಲಿ ನಡೆದ ವೇಳೆ ಸಂಬಂಧಿಕರು ರೋದಿಸುತ್ತಿರುವುದುಶಾರ್ಜಾದಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಂಪನಿಯೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಉದ್ಯೋಗದ ಲ್ಲಿದ್ದ ಜಪ್ಪು ಮಹಾಕಾಳಿ ಪಡ್ಪು ನಿವಾಸಿ ಮುಹಮ್ಮದ್ ಇಸ್ಮಾಯೀಲ್ ಮೊದಲ ಬಾರಿಗೆ ಊರಿಗೆ ಬರುವವನಿದ್ದ. ಕೆಲ ದಿನಗಳ ಮೊದಲು ಆತ ಶಾರ್ಜಾ- ಮಂಗಳೂರು ವಿಮಾನದಲ್ಲಿ ಬರಲು ಟಿಕೆಟ್ ಪಡೆದಿದ್ದ. ಕೊನೆ ಘಳಿಗೆಯಲ್ಲಿ ಅದನ್ನು ರದ್ದುಪಡಿಸಿ ಈ ನತದೃಷ್ಟ ವಿಮಾನದ ಬೆನ್ನು ಹತ್ತಿದ್ದ ಎಂದು ಹೇಳುತ್ತಾ ಮೃತ ಮುಹಮ್ಮದ್ ಇಸ್ಮಾಯೀಲ್ರ ಅಣ್ಣ ಅಬ್ದುಲ್ ರವೂಫ್ರ ಕಣ್ಣುಗಳು ತೇವಗೊಂಡವು. ಇಂದು ಮಧ್ಯಾಹ್ನದವರೆಗೆ ಮುಹಮ್ಮದ್ ಇಸ್ಮಾಯೀಲ್ರ ಮೃತ ದೇಹ ಪತ್ತೆಯಾಗದ ಕಾರಣ ಅವರ ಕುಟುಂಬವಿಡೀ ದುಖಃದಿಂದ ತಮ್ಮವನ ಅಂತಿಮ ದರ್ಶನಕ್ಕಾಗಿ ಎದುರು ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮುಂದೆ ಮೃತದೇಹದ ಗುರುತು ಪತ್ತೆ ಹಚ್ಚಲು ಬಂದ ದುರಂತದಲ್ಲಿ ಬಲಿಯಾದವರ ಕುಟುಂಬಸ್ಥರು
ತನ್ನವರನ್ನು ಕಳೆದುಕೊಂಡ ಮಹಿಳೆಯೊಬ್ಬರು ರೋದಿಸುತ್ತಿರುವುದು ಇಂದು ತಂಗಿಯ ಮದುವೆಯಿತ್ತು
ದುಬೈಯಲ್ಲಿ ವ್ಯಾಪಾರಿಗಳಾಗಿದ್ದ ಮುಹಮ್ಮದ್ ಬಶೀರ್ (40) ಮತ್ತು ಅಬೂಬಕರ್ ಸಿದ್ದೀಕ್ (37) ಮೇ 23ರಂದು ನಡೆಯಲಿದ್ದ ತಮ್ಮ ತಂಗಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಈ ನತದೃಷ್ಟ ವಿಮಾನವೇರಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾದ ಅವರಿಬ್ಬರ ಮೃತದೇಹದ ಗುರುತೇ ಪತ್ತೆಯಾಗದೆ ಅವರ ಕುಟುಂಬವಿಂದು ವೆನ್ಲಾಕ್ ಆಸ್ಪತ್ರೆಯ ಶವಾಗಾರದೆದುರು ದುಃಖವನ್ನು ಅದುಮಿಟ್ಟು ಸಂಕಟ ಪಡುತ್ತಿದ್ದ ದೃಶ್ಯ ಕಂಡು ಬಂತು.
ಮೃತದೇಹದ ಗುರುತು ಪತ್ತೆ ಹಚ್ಚಲು ಬಂದ ಶೋಕತಪ್ತ ಮಹಿಳೆಯರುಕ್ಯಾನ್ಸರ್ಗೊಳಗಾದ ತಾಯಿಯನ್ನು ನೋಡಲು ಬಂದಿದ್ದರಾತ
ಮಂಜೇಶ್ವರ ತುಮಿನಾಡು ನಿವಾಸಿ ಯೋಗೀಶ್ (24)ದುಬೈಗೆ ಉದ್ಯೋಗ ಕ್ಕಾಗಿ ತೆರಳಿ ಆಗಿದ್ದು ಕೇವಲ ನಾಲ್ಕು ತಿಂಗಳು. ಅಷ್ಟರಲ್ಲೇ ತನ್ನ ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ವಿಷಯ ತಿಳಿದು ಯೋಗೀಶ್ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮಂಜೇಶ್ವರಕ್ಕೆ ಬರುವುದಾಗಿ ಮನೆಯವರಿಗೆ ತಿಳಿಸಿದ್ದರು.
ಆದರೆ ವಿಧಿಯ ಆಟದ ಮುಂದೆ ಯೋಗೀಶ್ ಸೋತು ಹೋದರು. ತನ್ನ ತಾಯಿಯನ್ನು ಕಾಣುವ ತವಕದಲ್ಲಿ ಯೋಗೀಶ್ ಕರಗಲಾಗಿ ಹೋಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಅವರ ಕುಟುಂಬ ಅವರ ಮೃತದೇಹದ ಪತ್ತೆಗೆ ಎದುರು ನೋಡುತ್ತಿತ್ತು.
ಏರ್ ಇಂಡಿಯಾ ಸಂಸ್ಥೆ ಮೃತ ದೇಹಗಳನ್ನಿಡಲು ನೀಡಿರುವ ಶವಪೆಟ್ಟಿಗೆಗಳನ್ನು ಜೋಡಿಸಿಟ್ಟಿರುವುದುಮೃತರ ಕುಟುಂಬಕ್ಕೆ ರಮಾನಾಥ ರೈ ಸಾಂತ್ವಾನ
ವಿಮಾನ ದುರುಂತ ನಡೆದ ಸ್ಥಳದಲ್ಲಿ ನಿನ್ನೆ ಮೃತರ ಕುಟುಂಬದ ಜೊತೆಗಿದ್ದು ಸಾಂತ್ವನ ಹೇಳಿದ್ದ ಮಾಜಿ ಸಚಿವ, ಶಾಸಕ ರಮಾನಾಥ ರೈ, ಇಂದು ಬೆಳಗ್ಗಿನಿಂದಲೇ ವೆನ್ಲಾಕ್ ಆಸ್ಪತ್ರೆಯಲ್ಲಿ ತಮ್ಮವರ ಶವ ಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಕುಟುಂಬ ಗಳ ಜೊತೆಗಿದ್ದು, ಸಾಂತ್ವನ ಹೇಳುತ್ತಿದ್ದರು.
ಈ ಸಂದರ್ಭದಲ್ಲಿ ಸಂಸದ ಡಿ.ವಿ. ಸದಾನಂದ ಗೌಡ, ಶಾಸಕ ಯೋಗೀಶ್ ಭಟ್, ಮಾಜಿ ಸಚಿವ ನಾಗರಾಜ ಶೆಟ್ಟಿ ಮತ್ತಿತರರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಪ್ರಭಾರ ಜಿಲ್ಲಾಧಿ ಕಾರಿ ಪ್ರಭಾಕರ ಶರ್ಮಾ, ಶವಾಗಾರದಲ್ಲಿ ಉಪಸ್ಥಿತರಿದ್ದು, ಮೃತರ ಕುಟುಂಬಗಳಿಗೆ ಮಾಹಿತಿ ಒದಗಿಸುತ್ತಿದ್ದರು.
‘‘ನನ್ನ ಅಪ್ಪ ಎಲ್ಲಿದ್ದಾರಜ್ಜ ?’’
ಹೀಗೆಂದು ವೆನ್‌ಲಾಕ್ ಶವಾಗಾರದೆದುರು ತನ್ನ ಅಜ್ಜನ ಕೈ ಹಿಡಿದು ಪ್ರಶ್ನಿಸುತ್ತಿದ್ದ ೧೦ರ ಹರೆಯದ ಪ್ರಣವ್‌ನ ಮುಂದೆ ಅಜ್ಜ ನಿರುತ್ತರಿಯಾಗಿದ್ದ್ದರು. ಕಾಸರಗೋಡು ನಿವಾಸಿ ಉಮೇಶ್ ದುಬೈನಲ್ಲಿ ಸೇಲ್ಸ್ ಕೆಲಸವನ್ನು ಮಾಡಿಕೊಂಡಿದ್ದು, ದುಬೈಗೆ ತೆರಳಿದ ಮೂರು ವರ್ಷಗಳ ಬಳಿಕ ತನ್ನ ತವರೂರಿಗೆ ಈ ನತದೃಷ್ಟ ವಿಮಾನವೇರಿದ್ದರು. ಈ ಹಿಂದೆ ಎರಡು ಸಲ ತವರೂರಿಗೆ ಬರುವುದನ್ನು ರದ್ದುಗೊಳಿಸಿ ಮೂರನೆ ಬಾರಿ ಬಂದೇ ಬಿಡುವುದಾಗಿ ಮನೆಯವರಿಗೆಲ್ಲಾ ತಿಳಿಸಿ ವಿಮಾನ ಹತ್ತಿದ್ದ ಉಮೇಶ್ ಮಾತ್ರ ಕೊನೆಗೂ ಮನೆಗೆ ಬರಲೇ ಇಲ್ಲ ಎಂದು ಪ್ರವಣ್‌ನ ಅಜ್ಜ, ಉಮೇಶ್‌ನ ತಂದೆ ಭಾವುಕರಾಗುತ್ತಾರೆ.
ನಿನ್ನೆಯೇ ತನ್ನ ಅಜ್ಜ, ಚಿಕ್ಕಪ್ಪನ ಜೊತೆ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಪ್ರಣವ್ ತನ್ನ ತಂದೆಯೇಕೆ ಬಂದಿಲ್ಲ ಎಂದು ನಿನ್ನೆಯೇ ಅಜ್ಜನನ್ನು ವಿಚಾರಿಸಿದ್ದ. ನಾಳೆ ಬರುತ್ತಾರೆ ಎಂದು ಅಜ್ಜ ಸಮಾಧಾನ ಪಡಿಸಿ, ವಿಷಯ ತಿಳಿಸಿ ಇಂದು ವೊಮ್ಮಗನನ್ನು ಶವಾಗಾರಕ್ಕೆ ಕರೆದುತಂದಿದ್ದರು. ಪ್ರಣವ್‌ನ ಚಿಕ್ಕಪ್ಪ ಉಮೇಶ್‌ರವರ ಮೃತದೇಹ ಪತ್ತೆಗಾಗಿ ಶವಾಗಾರದಲ್ಲಿ ಹುಡುಕಾಟ ನಡೆಸುತ್ತಿದ್ದರೆ, ಹೊರಗಡೆ ಪ್ರಣವ್ ತಂದೆಗಾಗಿ ಎದುರು ನೋಡುತ್ತಿದ್ದ.
No comments:
Post a Comment