ಅಬುಧಾಬಿ, ಮೇ 23: ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಝಾಯಿದ್ ಅಲ್ ನಹ್ಯಾನ್ ಭಾರತದ ರಾಷ್ಟ್ರಾಧ್ಯಕ್ಷೆ ಪ್ರತಿಭಾದೇವಿ ಸಿಂಗ್ ಪಾಟೀಲ್‌ರಿಗೆ ಸಂದೇಶವೊಂದನ್ನು ಕಳುಹಿಸಿ ಶನಿವಾರ ಮಂಗಳೂರಿನಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಮಡಿದವರಿಗಾಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನದ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಕೂಡ ಭಾರತದ ರಾಷ್ಟ್ರಾಧ್ಯಕ್ಷರಿಗೆ ತಮ್ಮ ಶೋಕ ಸಂದೇಶ ರವಾನಿಸಿದ್ದಾರೆ. ಅವರು ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್‌ರಿಗೂ ಸಂತಾಪ ಸಂದೇಶವೊಂದನ್ನು ಕಳುಹಿಸಿದ್ದಾರೆ.
ವಿಮಾನ ದುರಂತದಲ್ಲಿ ಮಡಿದವರ ಆತ್ಮಗಳಿಗೆ ಶಾಂತಿ ಸಿಗಲಿ ಹಾಗೂ ಅವರ ಶೋಕತಪ್ತ ಬಂಧುಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಸರ್ವಶಕ್ತನಾದ ಅಲ್ಲಾಹು ಕರುಣಿಸಲಿ ಎಂದು ತಮ್ಮ ಸಂದೇಶದಲ್ಲಿ ಗಣ್ಯರು ಕೋರಿದ್ದಾರೆ.
ಪ್ಯಾರಿಸ್, ಮೇ 23: ಮಂಗಳೂರು ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿರುವ ಬಗ್ಗೆ ಫ್ರಾನ್ಸ್‌ನ ಅಧ್ಯಕ್ಷ ನಿಕೊಲಸ್ ಸರ್ಕೋಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಆ ಕುರಿತು ಸಂದೇಶವೊಂದನ್ನು ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್‌ರಿಗೆ ರವಾನಿಸಿದ್ದಾರೆ.
‘‘ಕರ್ನಾಟಕ ರಾಜ್ಯದ ಮಂಗಳೂರು ಸಮೀಪ ಸಂಭವಿಸಿದ ವಿಮಾನ ದುರಂತದಿಂದ ಭಾರತವು ಆಘಾತಗೊಂಡಿರುವ ಈ ಸಂದರ್ಭದಲ್ಲಿ ನಾನು ನನ್ನ ವೈಯಕ್ತಿಕ ಹಾಗು ಫ್ರಾನ್ಸ್‌ನ ಜನತೆಯ ಹೆಸರಿನಲ್ಲಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ’’ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸರ್ಕೋಝಿ ತಿಳಿಸಿದ್ದಾರೆ. ‘‘ಮೃತರ ಕುಟುಂಬಗಳ ಬಗ್ಗೆಯೂ ನಮಗೆ ತೀವ್ರ ಅನುಕಂಪವಿದೆ. ಅವರ ನೋವಿನಲ್ಲಿ ಫ್ರಾನ್ಸ್‌ನ ಜನತೆ ಸಹಭಾಗಿ’’ ಎಂದೂ ಅವರು ಹೇಳಿದ್ದಾರೆ.
Subscribe to:
Post Comments (Atom)
No comments:
Post a Comment